ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವವನ್ನು ನಾಗಲಾಪುರ ಮಹಾಸಂಸ್ಥಾನದ ಷ.ಬ್ರ ಪಟ್ಟದ ಶ್ರೀ ತೇಜಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಕೋಲಾರ: ಸಮಾಜದಲ್ಲಿ ಬದಲಾವಣೆಗಳನ್ನು ಕಾಣಬೇಕಾಗಿರುವುದರಿಂದ ಪ್ರತಿಯೊಬ್ಬರ ಮನೆಯಲ್ಲೂ ಶಿಷ್ಠಾಚಾರ ಪಾಲನೆ ಮಾಡಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಕ್ಕರ, ಮರಾಠರ ಬಲಿದಾನಗಳ ನಂತರವೇ ಧರ್ಮ ಉಳಿದುಕೊಂಡಿದೆ. ಸಂಘಟನೆಯಿದ್ದರೆ ಯಾರು ಮುಟ್ಟಲು ಸಾಧ್ಯವಿಲ್ಲ ಎಂದರು.
ಕಾನೂನು, ಸಂವಿಧಾನ ಇದ್ದಾಗಲೂ ಕಾಶ್ಮೀರದ ಮೇಲೆ ದಾಳಿ ನಡೆಯಿತು. ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಪರಿವರ್ತನೆ ಪಾಲಿಸಬೇಕು ಎಂದು ಎಚ್ಚರಿಸಿದರು.
ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಹಲವರು ಮಂದಿ ಶ್ರಮಿಸಿದ್ದು ಹಿಂದೂ ಭಾರತಕ್ಕಾಗಿಯೇ, ಹಿಂದೂತ್ವದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಕುಟುಂಬ ಪ್ರಬೋಧನ ಬೆಳೆಸಿ, ಜಾತಿ, ಪಕ್ಷ, ಧರ್ಮ ಬೇಧ ಅಂತ ಸಾಮರಸ್ಯ ಇಲ್ಲದಂತೆ ಮಾಡಿದ್ದು ಅದನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಗಂಗರು, ಅರಸರು ಆಳಿದ ಕೋಲಾರ ಜಿಲ್ಲೆ ಇಂದು ಅಂತಹ ರಾಜಮಹಾರಾಜರ ಮಾರ್ಗದಲ್ಲಿ ಸಾಗಿ ಜನ ಇಡಿ ದೇಶಕ್ಕೆ ಸಂದೇಶ ಸಾರಿದ್ದಾರೆ. ಅಂತಹ ಜಿಲ್ಲೆಯಲ್ಲಿ ಇಂದು ಸಮಾಜೋತ್ಸವ ನಡೆಯುತ್ತಿದೆ ಎಂದರು.
ಭಾರತದೆಡೆಗೆ ಇಡೀ ಜಗತ್ತಿನ ಗಮನ ಹರಿಸಲು ಮೋದಿ ಕಾರಣರಾಗಿದ್ದಾರೆ, ಅವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಾವಿರಾರು ಮಂದಿ ಹೆಗಲು ಕೊಟ್ಟು ನಿಂತಿದ್ದಾರೆ. ಇದಕ್ಕೆ ಸಾಂಸತಿಕ, ಸಂಸ್ಕಾರದ ನಮ್ಮ ಧರ್ಮದ ಶಕ್ತಿಯಿಂದ ಅಭ್ಯುದಯದೆಡೆಗೆ ಸಾಗಲು ಕಾರಣವಾಗಿದೆ ಎಂದು ತಿಳಿಸಿದರು.
ಆರ್ಎಸ್ಎಸ್ಗೆ ವಿರೋಧ ಮಾಡಿದರೆ ಅಂತಹವರು ಗ್ಯಾಂಗರಿನ್ ಬಂದು ದೇಶ ಬಿಟ್ಟು ತೊಲಗುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕರು ಗಲ್ಲಿಗಲ್ಲಿಯಲ್ಲಿ ರಾರಾಜಿಸಿ ಸಾಂಸತಿಕ ದೇಶ ಕಟ್ಟುತ್ತಾರೆ. ಊರು ಊರುಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಬೇಕು. ದೇಶದಿಂದ ಯಾವುದೇ ಪ್ರಾಂತ್ಯ ವಿಭಾಗವಾಗದಂತೆ ಗಟ್ಟಿ ಎಚ್ಚರಿಕೆಯೇ ಸಮಾವೇಶ ಮಾಡೋಣ ಎಂದು ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ಈ ನಾಡನ್ನು ಸುಡೋ ಸೆಕ್ಯೂಲರಿಸಂ ಹಾಳು ಮಾಡಿತು. ಹಿಂದೂ ಸಾಂಸತಿಕತೆಯನ್ನು ಸಾರುವ ದೇವಾಲಯಗಳು ಇದ್ದ ಹಂಪಿ ಹಾಳುಕೊಂಪೆ ಮಾಡಿದರು. ನಮ್ಮತನವನ್ನು ಉಳಿಸಿಕೊಳ್ಳಲು ಹುಟ್ಟಿ ಹಾಕಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಆರೋಪ, ನಿಷೇಧಗಳನ್ನು ಆರೆಸ್ಸೆಸ್ಸ್ ಎದುರಿಸಿತು. 100 ವರ್ಷ ಪೂರೈಸಿ ಯಾತ್ರೆ ನಡೆಸಿ ಇತಿಹಾಸ ಸೃಷ್ಡಿಸಿತು ಎಂದರು.
ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನೆ ಆಗುವುದಿಲ್ಲ ಎಂದು ಕೆಡವಿದವರು ಊಹಿಸಿರಲಿಲ್ಲ. ಆ ಕನಸ್ಸು ನನಸಾಯಿತು. ರಾಮ ಮಂದಿರ ಭಕ್ತಿಯ ಪ್ರತಿಕ. ಇದೀಗ ಭಾರತದ ಅತಿ ದೊಡ್ಡ ಪ್ರವಾಸಿ ಕೇಂದ್ರವಾಗಿ ಬೆಳೆದಿದೆ. ಆದರೆ ದೆಹಲಿಯಲ್ಲಿರುವ ತಾಜ್ಮಹಲ್ ಒಂದು ಹೆಣ್ಣಿನ ಕೊಲೆಯ ಪ್ರತಿಕವಾಗಿದೆ ಎಂದು ಗುಡುಕಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹಿಂದೂ ಪರವಾದ ವಿಚಾರ ಮಾತನಾಡುತ್ತಾರೆಂದು ರಾಜ್ಯದ ಜನ ವಿರೋಧಿ ಸರ್ಕಾರ ಪ್ರತಿ ಬಂಧಕಾಜ್ಞೆ ಮೂಲಕ ಈ ಕಾರ್ಯಕ್ರಮಕ್ಕೆ ಬಾರದಂತೆ ರ್ನಿಬಂಧ ಹೇರಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ, ಲೇಖಕ,ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಕಿಡಿಕಾರಿದರು.
ಪ್ರಭಾಕರ್ ಭಟ್ ಹಿಂದೂ ವಿರೋಧಿಗಳ ಪಾಲಿಗೆ ಅವರೊಬ್ಬ ಬೆಂಕಿಯಾಗಿದ್ದಾರೆ, ಅವರು ಬಾರದಂತೆ ಕಾನೂನಿನ ಮೂಲಕ ಅಡ್ಡಿ ಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾದದ್ದೆ ವಿರೋಧಗಳ ನಡುವೆ, ಇಂತಹ ಬೆದರಿಕೆಗಳಿಗೆ ಎಂದೂ ಸೋತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ವೆಂಕಟೇಶ್ ಬಾಬು, ಸಮಿತಿ ಉಪಾಧ್ಯಕ್ಷೆ ಡಾ.ಮಂಗಳಾ ಮತ್ತಿತರರು ವೇದಿಕೆಯಲ್ಲಿದ್ದರು.
* ಹಿಂದೂ ಕಾರ್ಯ ನಿರಂತರವಾಗಿರಲಿ
ನಾಗಲಾಪುರ ಮಹಾಸಂಸ್ಥಾನದ ಷ.ಬ್ರ ಪಟ್ಟದ ಶ್ರೀ ತೇಜಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಾನಿಧ್ಯವಹಿಸಿ ಮಾತನಾಡಿ, ಹಿಂದೂಗಳಿಗೆ ಇರುವ ಏಕೈಕ ದೇಶ ಭಾರತ. ಭಾವನಾತ್ಮಕ, ರಾಗಧ್ವೇಷಗಳಿಲ್ಲದ, ತಾರತಮ್ಯಗಳಿಲ್ಲದ ಭವ್ಯ ದಿವ್ಯ ದೇಶ ನಮ್ಮದು. ದೇಶ, ಸಂಸತಿ ಬೆಳೆಯಲು ಮನೆಮನೆಗಳಲ್ಲಿ ದೇಶಾಭಿಮಾನ ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಆಸ್ತಿ ಮಾಡುವಲ್ಲಿ ಮಕ್ಕಳನ್ನೇ ಆಸ್ತಿಗಳಾಗಿಸುವುದನ್ನು ಮರೆತಿದ್ದೀರಿ. ದೇಶ, ಧರ್ಮದ ತಳಹದಿ ಕಲಿಸಿಕೊಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
* ಕುತಂತ್ರಗಳನ್ನು ಎದುರಿಸಲು ಮುಂದಾಗಿ
ಚಿನ್ಮಯ ಸಾಂಧೀಪನಿ ಆಶ್ರಮದ ದತ್ತಾಪಾದಾನಂದ ಸ್ವಾಮೀಜಿ ಮಾತನಾಡಿ, ಜಾತಿಗಳನ್ನು ಹೊಡೆಯುವುದಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಜಾರಿಯಾಗುವ ದಿನಗಳು ದೂರವಿಲ್ಲ. ಅದ್ದರಿಂದ ಜಾಗೃತರಾಗುವ ಮೂಲಕ ಕುತಂತ್ರಗಳನ್ನು ನಿಯಂತ್ರಿಸಬೇಕು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ವೆಂಕಟೇಶ್ ಬಾಬು, ಸಮಿತಿ ಉಪಾಧ್ಯಕ್ಷೆ ಡಾ.ಮಂಗಳಾ ಮತ್ತಿತರರು ವೇದಿಕೆಯಲ್ಲಿದ್ದರು.