ಜಿಂಗಾಲಕುಂಟೆ ಅರಣ್ಯ 
ಕೋಲಾರ

63.23 ಎಕರೆ ಒತ್ತುವರಿ ಸಾಬೀತು

ಕಿರುವಾರ ಸುದರ್ಶನ್ ಕೋಲಾರ 
ಶ್ರೀನಿವಾಸಪುರ ತಾಲೂಕಿನ ಜಿಂಗಾಲಕುಂಟೆ ಅರಣ್ಯ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಮುಖ್ಯ ಉಪ ಸಂರಕ್ಷಣಾಧಿಕಾರಿ ಆದೇಶಿಸಿದ್ದು, ಇದೀಗ ಎಲ್ಲರ ಚಿತ್ತ ಅರಣ್ಯದತ್ತ ನೆಟ್ಟಿದೆ. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಜಾಗದ ಸಂಬಂಧ ಹಾಗೂ ಅರಣ್ಯ ಇಲಾಖೆಯ ನಡುವೆ ಸುಮಾರು 2 ದಶಕಗಳಿಂದ ಹೋರಾಟ ನಡೆಯುತ್ತಿತ್ತು. ಇದೀಗ ಹೋರಾಟವು ಅಂತಿಮ ಹಂತ ತಲುಪಿದ್ದು, ಒತ್ತುವರಿ ತೆರವಿಗೆ ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಮುಖ್ಯ ಉಪ ಸಂರಕ್ಷಣಾಧಿಕಾರಿ (ಐಎಫ್ ಎಸ್) ಎಸ್.ಶಿವಶಂಕರ್ ಅಂತಿಮ ಅದೇಶ ಹೊರಡಿಸಿ 30 ದಿನದಲ್ಲಿ ತೆರವುಗೊಳಿಸಲು ಗಡುವು ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಬರುವುದೇ ఎంబ ಅನುಮಾನ ಜನರಲ್ಲಿ ಕಾಡತೊಡಗಿದೆ. ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕಾನೂನು ಹೋರಾಟ ನಡೆಸಿದರಾದರೂ ಸ್ವಾಧೀನದಲ್ಲಿರುವ ಜಮೀನು ಖರೀದಿಸಿರುವುದಾಗಿ ರಮೇಶ್ ಕುಮಾರ್ ವಾದ ಮಂಡಿಸಿದ್ದರು. ಸಾರ್ವಜನಿಕರ ವೇದಿಕೆಗಳಲ್ಲೂ ಪ್ರಸ್ತಾಪ ಮಾಡಿದ್ದರು. ಮೇಲ್ಮನವಿಯೂ ರದ್ದಾಗಿದ್ದು, ಹೋರಾಟಕ್ಕೆ ಹಿನ್ನಡೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೋರ್ಟ್ ಆದೇಶದಂತೆ ಜಂಟಿ ಸರ್ವೇ ಮಾಡಲು ಕೆ.ಆರ್.ರಮೇಶ್ ಕುಮಾರ್ ಅವರಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು, ಒಂದು ಬಾರಿ ಗೈರಾದ್ದರಿಂದ, ಮತ್ತೊಮ್ಮೆ ಸಮಯ ನಿಗದಿಪಡಿಸಿ 2025ರ ಜ.15 ಮತ್ತು 16ರಂದು ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯ ನಡೆಸಿದ್ದರು. ಅದರಲ್ಲಿ ಒಟ್ಟು 63.23 ಎಕರೆ ಒತ್ತುವರಿ ಆಗಿರುವುದು ಸಾಬೀತಾಗಿದ್ದು, ತೆರವಿಗೆ ನಿರ್ದೇಶಿಸಿದ್ದಾರೆ. ಈ ಎಲ್ಲದರ ಬೆಳವಣಿಗೆಗಳ ನಡುವೆ ರಮೇಶ್ ಕುಮಾರ್ ಅವರು ಮತ್ತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಪರಿಹಾರ ಮಂಡಳಿಯೂ ರಚನೆ
ರಮೇಶ್ ಕುಮಾ‌ರ್ ಅರಣ್ಯ ಭೂ ಒತ್ತುವರಿ ಪ್ರಕರಣದ ಸಂಬಂಧ ಸರ್ಕಾರವು ಪರಿಹಾರ ಮಂಡಳಿ ರಚನೆಯಾಗಿ ಜ.30 ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ, ಚರ್ಚೆ ನಡೆಸಿದ್ದರು. ರಿಟ್ ಅರ್ಜಿ ಸಂಖ್ಯೆ 6613/2025 ផ្លូវថ 2025 ಸೆ.15ರಂದು ನೀಡಿರುವ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿವಾದ ಪರಿಹಾರ ಮಂಡಳಿ ರಚಿಸಿದ್ದರು. ಆದರೆ ಇದೇ ರೀತಿ ರೈತರ ವಿಚಾರವಾಗಿ ಯಾಕಾಗಿಲ್ಲ ಎಂಬುದು ರೈತರ ಆಕ್ರೋಶ ಕಾರಣವಾಗಿತ್ತು.
ಅಧಿಸೂಚನೆಯಾಗಿದ್ದು ಯಾವಾಗ..?
ಮೈಸೂರು ಸರ್ಕಾರದ ಅಧಿಸೂಚನೆ ಸಂಖ್ಯೆ ಜಿ1282ಎಫ್‌ಟಿ 79-30-61 ರಂತೆ 1931 ಜೂನ್ 30ರಂತೆ ಶ್ರೀನಿವಾಸಪುರ ತಾಲೂಕಿನ ಗುಡಿಪಲ್ಲಿ, ಕೊತ್ತೂರು, ಹೊಸಹುಡ್ಯ, ಯಡಿಗಾನಪಲ್ಲಿ, ಬೈಕೊತ್ತೂರು, ಬೈರಗಾನಹಳ್ಳಿ, ಕುರುಗುಂಟ್ಲಪಲ್ಲಿ, ಮರಸನಪಲ್ಲಿ, ಕೊತ್ತಹುಡ್ಗ ಮತ್ತು ಪಾತನಪಲ್ಲಿ ಗ್ರಾಮಗಳ ವ್ಯಾಪ್ತಿಯ ಒಟ್ಟು 3,037 ಎಕರೆ ಅರಣ್ಯ ಪ್ರದೇಶವನ್ನು ಪ್ರದೇಶವನ್ನು ಸೆಕ್ಷನ್ 4 ರಂತೆ ಜಿಗಾಲಕುಂಟೆ ಬ್ಲಾಕ್ ಅರಣ್ಯ ಪ್ರದೇಶವೆಂದು ಅಧಿಸೂಚಿಸಲಾಗಿತ್ತು. ನಂತರದ ದಿನಗಳಲ್ಲಿ 2724 ಎಕರೆ 2 ಗುಂಟೆ ಪ್ರದೇಶವನ್ನು ಮೈಸೂರು ಫಾರೆಸ್ಟ್ ರೆಗ್ಯೂಲೇಷನ್ ಸೆಕ್ಷನ್ 17ರಂತೆ ಜಿಗಾಲಕುಂಟೆ ರಾಜ್ಯ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ.
ಶಾಂತಿಯುತವಾಗಿ ಹಸ್ತಾಂತರಿಸಲು ಸೂಚನೆ
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ್ದು, 30 ದಿನಗಳೊಳಗೆ ಒತ್ತುವರಿ ತೆರವುಗೊಳಿಸಿ ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು, ಗಡುವಿನ ಅವಧಿ ಮುಗಿದ ನಂತರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತೆರವುಗೊಳಿಸಿ, ತಗುಲುವ ವೆಚ್ಚ ವಸೂಲಿಗೂ ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಮುಖ್ಯ ಉಪ ಸಂರಕ್ಷಣಾಧಿಕಾರಿ ಎಸ್.ಶಿವಶಂಕರ್ ನಿರ್ದೇಶಿಸಿದ್ದಾರೆ.
ಒತ್ತುವರಿಯಾಗಿರುವ ಜಮೀನು ಅರಣ್ಯಕ್ಕೆ ಸೇರಿದ್ದು ಎಂಬುದು ಸಾಬೀತಾಗಿದ್ದು, ತೆರವಿಗೆ 30 ದಿನ ಕಾಲವಕಾಶ ನೀಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಅರಣ್ಯಕ್ಕೆ ಹಾನಿ ಮಾಡಿದ್ದು, ಪ್ರಸ್ತುತ ಮೌಲ್ಯ ನಿಗದಿ ಮಾಡಿ ಪಾವತಿಗೆ ಸೂಚಿಸಲಾಗುವುದು. ಒಂದು ವೇಳೆ ಪಾವತಿ ಮಾಡದಿದ್ದರೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು.
- ಸರೀನಾ ಸಿಕ್ಕಲಿಗರ್ ಡಿಸಿಎಫ್, ಕೋಲಾರ