ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜುಲೈ 12ರಂದು ಹಮ್ಮಿಕೊಂಡಿರುವ ಮ್ಯಾರಥನ್ ಓಟ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು.
ಕೋಲಾರ: ದೊಡ್ಡ ಮಟ್ಟದ ಮ್ಯಾರಥಾನ್ ಓಟ ಆಯೋಜನೆ ಮಾಡುವುದು ಸುಲಭದ ಮಾತಲ್ಲ, ಇದರಲ್ಲಿ ಕ್ರೀಡಾಪಟುಗಳ ಸುರಕ್ಷತೆಗೆ ಒತ್ತು ನೀಡಬೇಕಿದೆ, ಸ್ಥಳಿಯವಾಗಿ ಅಧಿಕಾರಿಗಳು ಸಭೆ ನಡೆಸಿ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ಕೋರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜುಲೈ 12ರಂದು ಹಮ್ಮಿಕೊಂಡಿರುವ ಮ್ಯಾರಥನ್ ಓಟ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯಾವುದೇ ಕ್ರೀಡೆ ಆಯೋಜನೆ ಮಾಡಬೇಕಾದರೆ ಸ್ಥಳಿಯರ ಸಹಕಾರ ಅಗತ್ಯ, ಅದಕ್ಕೂ ಮುಂಚೆ ವ್ಯವಸ್ಥಿತಿವಾಗಿ ರೂಪರೇಷಗಳು ಆಗಬೇಕು ಎಂದು ತಿಳಿಸಿದರು.
ಬಿಯ್ಯಾಂಡ್ ಎಕ್ಸಲೆನ್ಸ್ ಸ್ಪೋರ್ಟ್ಸ್ ಟ್ರಸ್ಟ್ ಮುಖ್ಯಸ್ಥ ನವೀನ್ ಮಾತನಾಡಿ, ಜುಲೈ 12ರಂದು ಬೆಳಗ್ಗೆ 6ಕ್ಕೆ ಕೆಜಿಫ್ ನಗರದಲ್ಲಿ ಕೆಜಿಫ್ ಅಲ್ಟ್ರಾ-2026 ಅಡಿಯಲ್ಲಿ ಮ್ಯಾರಥನ್ ಕ್ರೀಡೆ ಆಯೋಜಿಸಲಾಗಿದೆ. ಮ್ಯಾರಥಾನ್ ಅನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದ್ದು, 5 ಮೈಲು (8 ಕಿ.ಮೀ), 10 ಮೈಲು (16 ಕಿ.ಮೀ), 50 ಕಿ.ಮೀ ಮತ್ತು 100 ಕಿ.ಮೀ ವಿಭಾಗಗಳ ಓಟವನ್ನು ಆಯೋಜಿಸಲು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಜಿಎಫ್ ನಗರಸಭೆ ಮೈದಾನದಿಂದ ಮ್ಯಾರಥಾನ್ ಆರಂಭಗೊಂಡು, ಸ್ಮಿತ್ ರೋಡ್, ಚಾಂಪಿಯನ್ ರೀಫ್ಸ್ ಮತ್ತು ಕೋಟಿಲಿಂಗೇಶ್ವರ ಕ್ಷೇತ್ರ ಒಳಗೊಂಡ ಮಾರ್ಗದಲ್ಲಿ ಸಾಗಲಿದೆ. 100 ಕಿ.ಮೀ ನಂತಹ ದೀರ್ಘಾವಧಿಯ ಓಟವು ರಾತ್ರಿಯವರೆಗೂ ಮುಂದುವರೆಯಲಿದೆ. ಕ್ರೀಡಾಪಟುಗಳ ಸುರಕ್ಷತೆಗಾಗಿ ಪ್ರತಿ 2 ಕಿ.ಮೀ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಕಾರ್ ವಾಲಂಟಿಯರ್ಗಳು ಕಾರ್ಯನಿರ್ವಹಿಸಲಿದ್ದಾರೆ. ನಿಗದಿಪಡಿಸಿದ ಸಮಯದೊಳಗೆ ಓಟ ಮುಗಿಸಲು ಸಾಧ್ಯವಾಗದ ಸ್ಪರ್ಧಿಗಳನ್ನು ಸುರಕ್ಷಿತವಾಗಿ ಕರೆತರಲು ಸ್ವೀಪರ್ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ, ಓಟದಲ್ಲಿ ಪಾಲ್ಗೊಳ್ಳುವವರು ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
* ಜನರ ಜತೆ ಚೆಲ್ಲಾಟವಾಡಿದಂತೆ
ಕರ್ನಾಟಕ ಅಥ್ಲೇಟಿಕ್ ಅಸೂಸಿಯೇಷನ್ ಕಾರ್ಯದರ್ಶಿ ರಾಜುವೇಲು, ಮಾತನಾಡಿ, 100 ಕಿಮಿ ಮ್ಯಾರಥಾನ್ ಓಟ ಆಯೋಜನೆ ಮಾಡುವುದು ಸುಲಭದ ಮಾತಲ್ಲ, ಇದು ಜನರ ಜತೆ ಚೆಲ್ಲಾಟವಾಡಿದಂತಾಗುತ್ತದೆ, ಸಾಮಾನ್ಯರು ಓಟ ಮಾಡಲು ಸಾಧ್ಯವಿಲ್ಲ, ಹೊಸಬರು ಬಂದು ಓಟ ಮಾಡಿದಾಗ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ ಎಂದು ಸಭೆಗೆ ತಿಳಿಸಿದರು.
* ಜಿಲ್ಲೆಯ ಗಡಿಯೊಳಗೆ ಮಾರ್ಗ ನಿಗಧಿಪಡಿಸಿ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಮ್ಯಾರಥಾನ್ ಮಾರ್ಗವು ಯಾವುದೇ ಕಾರಣಕ್ಕೂ ಕರ್ನಾಟಕದ ಗಡಿ ದಾಟಿ ಆಂಧ್ರಪ್ರದೇಶವನ್ನು ಪ್ರವೇಶಿಸಬಾರದು, ಕೇವಲ ಜಿಲ್ಲೆಯ ಗಡಿಯೊಳಗೆ ಮಾರ್ಗ ಇರಬೇಕು, ಸಿದ್ದಪಡಿಸಿರುವ ಮಾರ್ಗವನ್ನು ಪರಿಸ್ಕರಿಸಬೇಕು ಎಂದು ಸೂಚಿಸಿದರು.
ಸ್ಥಳಿಯ ಸಂಘ- ಸಂಸ್ಥೆಗಳು, ಹಿರಿಯ ಕ್ರೀಡಾಪಟುಗಳು ಮತ್ತು ಪೊಲೀಸ್ ಇಲಾಖೆಯನ್ನು ಸಮರ್ಥವಾಗಿ ಬಳಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ಇದಕ್ಕೆ ಉಪ ವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರ ನಾಯಕತ್ವದಲ್ಲಿ ಸ್ಥಳಿಯ ಮಟ್ಟದಲ್ಲಿ ಸಭೆ ನಡೆಸಿ ರೂಪರೇಷಗಳ್ನು ರೂಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವಿಣ್.ಪಿ.ಬಾಗೇವಾಡಿ, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಕೆಜಿಎಫ್ ತಹಸೀಲ್ದಾರ್ ಭರತ್ ಕುಮಾರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷಿ$್ಮ, ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರ, ಜಿಲ್ಲಾ ಅಥೆ್ಲೇಟಿಕ್ ಅಸೂಸಿಯೇಷನ್ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಪ್ಯಾರಾಲಿಂಪಿಕ್ಸ್ ಅಧ್ಯಕ್ಷ ಜಯದೇವ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್ ಹಾಜರಿದ್ದರು.