ಕೋಲಾರ ನಗರಸಭೆ ಕಚೇರಿ. 
ಕೋಲಾರ

ತೀರಿಕೊಂಡ ವ್ಯಕ್ತಿಯನ್ನು ಹೇಗ್ರಿ ದಾಖಲಿಸ್ತೀರಾ?

ಕಿರುವಾರ ಎಸ್.ಸುದರ್ಶನ್
ಕೋಲಾರ: ಏನು... ನಿಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾ?, ಹಾ... ಅವರು 2025ರಲ್ಲೇ ತೀರಿಕೊಂಡಿದ್ದಾರೆ ಅಂತ ಬರ್ತಿದೆ...!
ಅಯ್ಯೋ, ದೇವ್ರೇ... ನಮ್ಮ ತಂದೆ ಜೀವಂತವಾಗಿದ್ದಾರೆ. ಇಲ್ಲೇ ಆಸ್ಪತ್ರೆ ಆವರಣದಲ್ಲಿದ್ದಾರೆ. ನಿವೇನ್ ಹೀಗ್ ಹೇಳ್ತಿದ್ದೀರಾ...
ಇದು. ಜೀವಂತವಾಗಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಕೋಲಾರ ನಗರಸಭೆಯ ಎಡವಟ್ಟಿಗೆ ಪೀಕಲಾಟಕ್ಕೆ ಸಿಲುಕಿದ ಕುಟುಂಬ ವ್ಯಥೆ.
ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಭಟ್ರಹಳ್ಳಿ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಚಿಕಿತ್ಸೆಗೆಂದು ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಾಗಿ ಹೊರ ಚೀಟಿ ಮಾಡಿಸಲು ಆಧಾರ್, ಪಡಿತರ ಚೀಟಿ ಸಲ್ಲಿಸಿದಾಗ 2025ರ ಜ.8ರಂದೆ ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂದು ಸಿಬ್ಬಂದಿ ಗಮನಕ್ಕೆ ತಂದಿದೆ. ವಿಷಯ ತಿಳಿದ ಈಡೀ ಕುಟುಂಬವೇ ಹೌಹಾರಿದೆ.
ಪ್ರಮಾಣ ಪತ್ರ ರದ್ದುಪಡಿಸಲು ಮನವಿ
ವಿಚಾರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ನಾರಾಯಣಸ್ವಾಮಿ ಕುಟುಂಬಸ್ಥರು, ಬದುಕಿರುವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮರಣ ಪ್ರಮಾಣ ಪತ್ರ ನೀಡಿ ಕರ್ತವ್ಯ ಲೋಪ ಎಸಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ 2026ರ ಮಾ.24ರಂದು ದೂರು ನೀಡಿದ್ದಾರೆ. ನಗರಸಭೆಯ ನೋಂದಣಾಧಿಕಾರಿಗಳು ಯಾವುದೇ ದಾಖಲೆ ಪರಿಶೀಲನೆ ನಡೆಸದೆ ಸುಳ್ಳು ದಾಖಲೆ ಅನುಮೋದಿಸಿರುವುದು ಕಾನೂನು ಬಾಹಿರ. ಮರಣ ಪ್ರಮಾಣ ಪತ್ರ ರದ್ದುಪಡಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಅಧಿಕಾರಿಗಳ ಎಡವಟ್ಟು: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಸಾಗರ ನಿವಾಸಿ ಎಂ.ನಾರಾಯಣಸ್ವಾಮಿ ಅನಾರೋಗ್ಯದಿಂದ 2025ರ ಜ.6ರಂದು ಜಾಲಪ್ಪ ಆಸ್ಪತ್ರೆಗೆ ದಾಖಲಾಗಿ, ಜ.8ರಂದು ಮೃತಪಟ್ಟಿದ್ದರು. ಈ ಸಂಬಂಧ ಲಕ್ಷ್ಮೀಸಾಗರ ಗ್ರಾಪಂನಿಂದ 2025ರ ಜ.28ರಂದು ಮರಣ ಪ್ರಮಾಣ ಪತ್ರ ನೀಡಲಾಗಿದೆ.
ಆದರೆ, ಆಸ್ಪತ್ರೆಯವರು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸದ ಕೋಲಾರ ನಗರಸಭೆಯ ಆರೋಗ್ಯ ನಿರೀಕ್ಷಕ, ಮೃತಪಟ್ಟಿರುವ ವ್ಯಕ್ತಿ ಬದಲಿಗೆ ಕೋಲಾರ ತಾಲೂಕಿನ ಭಟ್ರಹಳ್ಳಿ ನಿವಾಸಿ ನಾರಾಯಣಸ್ವಾಮಿ ಅವರು 2025ರ ಜ.8ರಂದು ಮೃತಪಟ್ಟಿದ್ದಾರೆ ಎಂದು 2025ರ ಜ.13ರಂದು ನಗರಸಭೆಯಿಂದ ಪ್ರಮಾಣ ಪತ್ರಕ್ಕೆ ಅನುಮೋದನೆ ನೀಡಿದ್ದಾರೆ. ಈ ಪ್ರಕರಣದ ಹಿಂದೆ ಹೆಲ್ತ್ ಸ್ಕಿಂ ದುರುಪಯೋಗದ ಮಾತುಗಳು ದಟ್ಟವಾಗಿವೆ. 
* ಇದೇನು ಮೊದಲಲ್ಲ...!
ಮರಣ ಹೊಂದಿರುವ ವ್ಯಕ್ತಿ ಬದಲು ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿರುವ ಪ್ರಕರಣ ಬೆಳಕಿಗೆ ಬಂದಿರುವುದು ಇದೇನು ಮೊದಲಲ್ಲ. ರವಿಕುಮಾರ್ ಎಂಬ ವ್ಯಕ್ತಿ ಬದುಕಿದ್ದರೂ 2025ರ ಜ.26ರಂದು ಮರಣ ಹೊಂದಿರುವುದಾಗಿ ನಗರಸಭೆಯಿಂದ 2025ರ ಮಾ.4ರಂದು ಮರಣ ಪ್ರಮಾಣ ಪತ್ರ ನೀಡಲಾಗಿತ್ತು. ಈ ಬಗ್ಗೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಯಕ್ಕೆ ದೂರು ನೀಡಿದಾಗ, ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿತ್ತು. ಅದರಂತೆ ನಗರಸಭೆ ಅಧಿಕಾರಿಗಳನ್ನು ವಿಚಾರಣೆ ನಡೆಸಿದಾಗ ವಿತರಣೆ ಮಾಡಿರುವ ಪ್ರಮಾಣ ಪತ್ರ ಸಂಬಂಧ ದಾಖಲೆಗಳು ಲಭ್ಯವಿಲ್ಲ, ಇನ್ನು ರವಿ ಕುಮಾರ್ ವಾಸಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದಾಗ ಸಜೀವವಾಗಿರುವುದು ಕಂಡು ಬಂದಿದೆ ಎಂದು ವರದಿ ನೀಡಿದ್ದಾರೆ. ಆದರೆ ತಪ್ಪು ಎಸಗಿರುವ ಅಧಿಕಾರಿಯ ವಿರುದ್ಧ ಕ್ರಮ ಆಗದಿರುವುದು ವಿಪರ್ಯಾಸ. 
* ಪರಿಶೀಲಿಸದೆ ದಾಖಲೆ ವಿತರಣೆ
ಯಾವುದೇ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಬೇಕಾದರೆ ನಿಯಮ ಪಾಲನೆ ಮಾಡಬೇಕು. ಆನ್‌ಲೈನ್ ನೋಂದಣಿ ಮಾಡಬೇಕಾದರೆ ಮರಣ ಹೊಂದಿರುವವ ಆಧಾರ್ ಕಾರ್ಡ್, ಪಡಿತರ ಚೀಟಿ , ಮಾಹಿತಿದಾರರ ಆಧಾರ್ ಕಾರ್ಡ್, ದೂರವಾಣಿ ಸಂಖ್ಯೆ, ನಮೂನೆ-2 ಮಹಜರ್ ವರದಿ ನೀಡಬೇಕು. ವ್ಯಕ್ತಿ ಮೃತಪಟ್ಟ 21 ದಿನದ ನಂತರ ನೋಟರಿ ಸಲ್ಲಿಸಬೇಕು, ಆಗ ಮರಣ ಘಟನೆಯ ನೋಂದಣಿ ಮಾಡಲು ಸಾಧ್ಯ. ಆದರೆ, ಅರ್ಜಿದಾರನ ದೂರವಾಣಿ ಸಂಖ್ಯೆ ಬದಲು ಅನಾಮಧೇಯ ಸಂಖ್ಯೆ ಹಾಕಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿರುವುದು ಪದೇಪದೆ ಮರುಕಳಿಸುತ್ತಲೇ ಇದೆ.
ಕೋಟ್...
ಆಸ್ಪತ್ರೆಯಿಂದ ನಗರಸಭೆಗೆ ಬಂದ ಮಾಹಿತಿಯಂತೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅಲ್ಲಿನ ದಾಖಲೆ ಸರಿಯಾಗಿ ನೀಡಿದ್ದರೆ ಲೋಪಗಳು ಆಗುವುದಿಲ್ಲ. ಇದೀಗ ಆಗಿರುವ ಎಡವಟ್ಟಿಗೆ ಕಾರಣರಾಗಿರುವವರ ವಿರುದ್ಧ ದೂರು ನೀಡಲು ಸೂಚಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥರಿಗೆ, ಸಾಂಖ್ಯಿಕ ಇಲಾಖೆ ಹಾಗೂ ನಗರಸಭೆಯಿಂದ ತರಬೇತಿ ಸಹ ನೀಡಲಾಗಿತ್ತು. 
- ನವೀನ್ ಚಂದ್ರ, ಪೌರಾಯುಕ್ತ, ಕೋಲಾರ