ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ಈಚಲ ಗರಿ ಹೆಣಿಗೆ' ಕೃತಿಯನ್ನು ಪ್ರೊ. ಪುರುಷೋತ್ತಮ ಬಿಳಿಮಲೆ ಬಿಡುಗಡೆಗೊಳಿದರು. ಡಾ. ಟಿ.ಆರ್. ಅನಂತರಾಮು, ಪ್ರೊ. ಎನ್.ಬಿ. ಚಂದ್ರಮೋಹನ್ ಇತರರಿದ್ದರು.
ಬೆಂಗಳೂರು: ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಸಾಧ್ಯವಾದರೆ ಹಸಿರು ವಾಪ್ತಿಯನ್ನು ಹೆಚ್ಚಿಸಬೇಕು, ಅದನ್ನು ಬಿಟ್ಟು ಉದ್ಯಾನಗಳಲ್ಲಿನ ಶೇ. 5 ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗಾಗಿ ಬಳಸಲು ಸರ್ಕಾರ ಅನುಮತಿ ನೀಡುವುದು ಸರಿಯಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಕದಂಬ ಪ್ರಕಾಶನ ಹಮ್ಮಿಕೊಂಡಿದ್ದ "ಈಚಲ ಗರಿ ಹೆಣಿಗೆ' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದ್ದರು. ಅದು ಈಗ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಹೀಗಾಗಿ ಜನರಿಗೆ ಉತ್ತಮ ಪರಿಸರವನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಗಾರ್ಡನ್ ಸಿಟಿ ಎಂದು ಹೆಸರಾಗಿರುವ ಈ ನಗರದಲ್ಲಿ ಉದ್ಯಾನಗಳನ್ನು ಮತ್ತಷ್ಟು ವಿಸ್ತರಿಸಬೇಕು. ಆದನ್ನು ಬಿಟ್ಟು ಶೇ. 5 ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅನುಮತಿ ನೀಡಬಾರದು ಎಂದರು.
ಕನ್ನಡದ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆದೇಶಗಳಿದ್ದು, ಅವುಗಳಲ್ಲಿ ಹೆಚ್ಚಿನವು ಅನುಷ್ಠಾನಕ್ಕೆ ಬಂದಿಲ್ಲ. ಸಮಸ್ಯೆ ಬಂದಾಗ ಕಾನೂನು ಇದೆ ಅಂತ ಹೇಳಿದರೆ ಏನರ್ಥ? ನ್ಯಾಯಾಧೀಶರು ಸಹ ಪರಿಸರದ ಕುರಿತು ಮಾತನಾಡಿರುವುದನ್ನು ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಜ್ಞಾನ ಸಾಹಿತಿ ಡಾ. ಟಿ.ಆರ್. ಅನಂತರಾಮು, ಸಂಸತಿಕ ಚಿಂತಕ ಪ್ರೊ. ಎನ್.ಬಿ. ಚಂದ್ರಮೋಹನ್, ಕೃತಿಕಾರ ಎಚ್.ಎ. ಪುರುಷೋತ್ತಮ ರಾವ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಅರ್. ನಾಗರಾಜು ಇದ್ದರು.
ಪ್ರಾಕೃತಿಕವಾಗಿ ಎದುರಾಗುವ ಸಮಸ್ಯೆಗಳಿಗೆ ಮನುಷ್ಯರು ಪರಿಸರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಇದರ ಬದಲಿಗೆ ಸಮಸ್ಯೆ ಎದುರಾಗದಂತೆ ಎಚ್ಚರಿಕೆವಹಿಸಬೇಕು.
- ಡಾ. ಎಚ್.ಎಸ್. ಸತ್ಯನಾರಾಯಣ, ಸಾಹಿತಿ