ಕೋಲಾರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಕಚೇರಿ.
ಕಿರುವಾರ ಎಸ್.ಸುದರ್ಶನ್ ಕೋಲಾರ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಶಿಕ್ಷಕರ ಹಾಜರಾತಿ ದಾಖಲು ಮಾಡಲು ಸರ್ಕಾರ ಕರ್ತವ್ಯ ಆ್ಯಪ್ ಜಾರಿ ಮಾಡಿದೆ.
ಮೇ 29ರಂದು ಶಾಲೆಗಳು ಮರು ಪ್ರಾರಂಭವಾಗಲಿದ್ದು, ಅಂದಿನಿಂದಲೇ ಕರ್ತವ್ಯ ಆ್ಯಪ್ ಮೂಲಕ ಕಡ್ಡಾಯ ಡಿಜಿಟಲ್ ಹಾಜರಾತಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಇದಕ್ಕೆ ಶಿಕ್ಷಕರಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ.
ಪ್ರಾರಂಭದ ದಿನದಿಂದ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವ ಬೆಳಗ್ಗೆ ಹಾಗೂ ಕೆಲಸ ಮುಗಿಸಿಕೊಂಡು ಹಿಂತಿರುಗುವಾಗ ಹಾಜರಾತಿ ನೀಡಬೇಕು. ನೋಂದಣಿ ಮಾಡಿಕೊಳ್ಳಲು ಈಗಾಗಲೇ ಶಿಕ್ಷಕರಿಗೆ ಸೂಚನೆ ನೀಡಿದ್ದು, 4,700 ಶಿಕ್ಷಕರ ಪೈಕಿ ಶೇ.80 ಶಿಕ್ಷಕರು ನೋಂದಾಯಿಸಿಕೊಂಡಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಕೆಎಎಎಂಎಸ್ (ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ತಂತ್ರಾಶ ಮೂಲಕ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಶಿಕ್ಷಕರು ಮತ್ತು ಸಿಬ್ಬಂದಿ ಸಾಂಪ್ರದಾಯಿಕ ಹಾಜರಾತಿ ಪುಸ್ತಕದ ಬದಲು ಡಿಜಿಟಲ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವ ಸ್ಥಳದಿಂದಲೇ ಹಾಜರಾತಿ ದಾಖಲಿಸಬೇಕಿದೆ.
ಸರ್ಕಾರದ ನೀತಿ, ಶೈಕ್ಷಣಿಕ ಸುಧಾರಣೆಗಳ ಪರಿಣಾಮಕಾರಿ ಅನುಷ್ಠಾನ, ವೃತ್ತಿಪರ ಸಾಮರ್ಥ ಉನ್ನತೀಕರಿಸಲು ತಂತ್ರಾಂಶ ಸಹಕಾರಿಯಾಗಲಿದೆ. ಎಚ್ ಆರ್‌ಎಂಎಸ್‌ನಲ್ಲಿ ನೋಂದಾಯಿತ ಪ್ರಥಮ ಕೆಜಿಐಡಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಂಡು ಕರ್ತವ್ಯದ ಸ್ಥಳದಲ್ಲಿ ಹಾಜರಾತಿ ಗುರುತಿಸಬೇಕು.
ಸರ್ಕಾರವು ಜಾರಿಗೆ ತಂದ ಕರ್ತವ್ಯ ಆ್ಯಪ್ ಹಾಜರಾತಿಯು ಶಿಕ್ಷಕರ ವಲಯದಲ್ಲಿ ಪರ-ವಿರೋಧಕ್ಕೆ ಚರ್ಚೆಯಾಗುತ್ತಿದೆ. ನಗರ, ಪಟ್ಟಣದಿಂದ ದೂರದ ಹಳ್ಳಿಗಳಿಗೆ ಹೋಗುವವರಿಗೆ ಇದು ಸರಿ ಹೊಂದುವುದಿಲ್ಲ, ಶಾಲೆಗೆ ಸಮೀಪದಲ್ಲಿರುವ ಶಿಕ್ಷಕರಿಗೆ ಅನುಕೂಲವಾಗಲಿದೆ. ಹೀಗೆ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.
ಹಾಜರಾತಿ ಪ್ರಕ್ರಿಯೆ ಅತ್ಯಗತ್ಯ
ಶಿಕ್ಷಕರು ಮೊದಲು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನೋಂದಣಿಯಾಗಬೇಕು. ಆ ಮೂಲಕ ಸಿಬ್ಬಂದಿಯ ಮುಖದ ಚಹರೆ ಪರಿಶೀಲನೆಯೊಂದಿಗೆ ಸುರಕ್ಷಿತ ಲಾಗಿನ್ ಆಗಬೇಕು. ಹಾಜರಾತಿ ಗುರುತಿಸುವುದನ್ನು ಖಚಿತಪಡಿಸುತ್ತದೆ. ಸುಧಾರಿತ ಹಾಜರಾತಿ ಡ್ಯಾಶ್ ಬೋರ್ಡ್, ವರದಿಗಳನ್ನು ತ್ವರಿತವಾಗಿ ಇಲಾಖೆಯ ಮೇಲಧಿಕಾರಿಗಳಿಗೆ ಒದಗಿಸುತ್ತದೆ. ಅಕ್ರಮ ಮತ್ತು ತಿದ್ದುಪಡಿಗೆ ಅವಕಾಶವಿಲ್ಲದಂತೆ ಹಾಜರಾತಿ ಗುರುತಿಸಲು ಆಧುನಿಕ ತಂತ್ರಜ್ಞಾನ ಬಳಕೆಗೆ ಉತ್ತೇಜಿಸದಂತಾಗುತ್ತದೆ. ಡಿಜಿಟಲ್ ಆಡಳಿತ, ಪಾದರ್ಶಕತೆ, ದಕ್ಷತೆಯ ಉದ್ದೇಶಗಳಿಗೆ ಅನುಗುಣವಾಗಿ ಕಾಯಂ ಶಿಕ್ಷಕರ ಹಾಜರಾತಿ ಗುರುತಿಸಲು ಮೇಲ್ವಿಚಾರಣೆ ಮಾಡಲು ಹಾಜರಾತಿ ಪ್ರಕ್ರಿಯೆಯು ಅಗತ್ಯವಾಗಿದೆ.
ಪದಾಧಿಕಾರಿಗಳ ಆಟಕ್ಕೆ ಬ್ರೇಕ್
ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘಗಳಲ್ಲಿ ಪದಾಧಿಕಾರಿಗಳಾಗಿರುವ, ಪ್ರಾಬಲ್ಯದೊಂದಿಗೆ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿಯೋಜನೆ ಪಡೆದುಕೊಂಡಿರುವ, ಸಂಘದ ಪದಾಧಿಕಾರಿ ಎಂದು ಬಿಇಒ, ಡಿಡಿಪಿಐ ಕಚೇರಿಗೆ ಭೇಟಿ, ಕರ್ತವ್ಯಕ್ಕೆ ಹಾಜರಾಗದೆ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದವರ ಆಟಕ್ಕೆ ಬ್ರೇಕ್ ಬೀಳಲಿದೆ.
ವಿಧಿಸಿರುವ ಷರತ್ತುಗಳೇನು....?
ಕಾಯಂ ಬೋಧಕ, ಬೋಧಕೇತರ ಅಧಿಕಾರಿ ಹಾಜರಾತಿ ದಾಖಲಿಸುವ ಪ್ರಕ್ರಿಯೆ ಜಾರಿಗೊಳಿಸಬೇಕು. ಕರ್ತವ್ಯ ಹಾಜರಾತಿಯನ್ನು ಎಚ್‌ಆರ್‌ಎಂಎಸ್ ತಂತ್ರಾಂಶದೊಂದಿಗೆ ಸಂಯೋಜಿಸಬೇಕು. ಕರ್ತವ್ಯ ಸ್ಥಳದಲ್ಲಿ ಪ್ರತಿ ಎರಡು ಬಾರಿ ಕಡ್ಡಾಯವಾಗಿ ಆ್ಯಪ್ ಮೂಲಕ ಹಾಜರಾತಿ ದಾಖಲಿಸಬೇಕು. ಶಿಕ್ಷಕರ ಹಾಜರಾತಿಯನ್ನು ಡಿಡಿಪಿಐ ಖಚಿತಪಡಿಸಿಕೊಳ್ಳಬೇಕು. ಕೆಎಎಎಂಎಸ್ ದತ್ತಾಂಶ ವರದಿ ಕಾರ್ಯಕ್ರಮತೆಯ ವಿಶ್ಲೇಷಣೆ,ಕಾಯಂ ಶಿಕ್ಷಕರ ನಿಯೋಜನೆ, ಸಿಬ್ಬಂದಿಯ ಕರ್ತವ್ಯಬದ್ಧಗೊಳಿಸುವಿಕೆ, ವೇತನ ಪಾವತಿಗೆ ಇಲಾಖಾ ಸಕ್ಷಮ ಪ್ರಾಧಿಕಾರಿಗಳು ಬಳಸತಕ್ಕದ್ದು.
ಸರ್ಕಾರ ಜಾರಿಗೆ ತರುವ ಆದೇಶಗಳನ್ನು ಪಾಲನೆ ಮಾಡಲೇಬೇಕು, ಶಿಕ್ಷಕರು ಆಸಕ್ತಿ ತೋರಿಸಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ, ಶೈಕ್ಷಣಿಕ ವರ್ಷ ಪ್ರಾರಂಭವಾಗುವಷ್ಟರಲ್ಲಿ ಶೇ.100 ನೋಂದಣಿ ಮಾಡಿಸಲು ಕ್ರಮವಹಿಸಲಾಗುವುದು.
- ಅಲ್ಮಾನ್ ಫರ್ವೀನ್ ತಾಜ್ ಡಿಡಿಪಿಐ, ಕೋಲಾರ
ಸರ್ಕಾರವು ಶಿಕ್ಷಕರ ಹಾಜರಾತಿಗಾಗಿ ಕರ್ತವ್ಯ ಆ್ಯಪ್ ಜಾರಿ ಮಾಡಿದ್ದು, ನಿಗದಿತ ಸಮಯಕ್ಕೆ ಕೆಲಸದ ಸ್ಥಳಕ್ಕೆ ಕೆಲವರು ತಲುಪಲು ಸಾಧ್ಯವಾಗುವುದಿಲ್ಲ, ಆ ಸಮಯ ಭರ್ತಿ ಮಾಡಲು ವಿನಾಯಿತಿ ನೀಡಬೇಕು.
- ಬೈರೇಗೌಡ ಶಿಕ್ಷಕ, ಸರ್ಕಾರಿ ಪ್ರಾಥಮಿಕ ಶಾಲೆ, ಸುಗಟೂರು