ಮಾಲೂರು ತಹಶೀಲ್ದಾರ್​ ರೂಪ ಅವರಿಗೆ ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.  
ಕೋಲಾರ

ಜಾತಿ ಪ್ರಮಾಣ ಪತ್ರ ವಿತರಣೆಗೆ ಒತ್ತಾಯ

ಮಾಲೂರು: ಅಯೋಧ್ಯ ವೈಶ್ಯ ನಾಮಧಾರಿ ನಗರ್ತ ಸಮುದಾಯಕ್ಕೆ ಜಾತಿ ಪ್ರಮಾಣ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ, ಸಮುದಾಯದ ಮುಖಂಡರು ನಗರದಲ್ಲಿ ತಹಶೀಲ್ದಾರ್​ ರೂಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಮುದಾಯದ ಮುಖಂಡ ಶ್ರೀಧರ್​ ಶೆಟ್ಟಿ ಮಾತನಾಡಿ, ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಮೊದಲಿನಿಂದಲೂ ಮನವಿ ನೀಡುವುದು, ಹೋರಾಟ ಮಾಡಿಕೊಂಡಲೇ ಬರಲಾಗುತ್ತಿದೆ ಹೊರತು, ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಸಮುದಾಯದವರ ಪ್ರಕಾರ, ನಗರ್ತ, ನಾಮಧಾರಿ ನಗರ್ತ, ನಾಮಧಾರಿ ಎಂಬ ಹೆಸರಿನಲ್ಲಿ ಹಲವು ದಶಕಗಳಿಂದ ಶಾಲಾ ದಾಖಲೆ, ಆದಾಯ ದಾಖಲೆಗಳಲ್ಲಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ನಮೂದು ಇದೆ. ಈ ಹೆಸರುಗಳಲ್ಲಿ ಇರುವ ವ್ಯತ್ಯಾಸಗಳಿಂದ ಇತ್ತೀಚಿನ ದಿನದಲ್ಲಿ ಗೊಂದಲ ಸೃಷ್ಟಿಯಾಗಿದೆ. ಎಲ್ಲಾ ಹೆಸರುಗಳು ಒಂದೇ ಸಮುದಾಯವನ್ನು ಸೂಚಿಸುತ್ತವೆ. ವರ್ಗದವರ ಜಾತಿಯನ್ನು ಅಧಿಕೃತ ಗೆಜೆಟ್​ ಪಟ್ಟಿಯಲ್ಲಿ ಸರ್ಕಾರ ಸೇರಿಸದಿರುವುದರಿಂದ ಪ್ರಮಾಣಪತ್ರ ಪಡೆದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
* ಶೈಕ್ಷಣಿ, ಉದ್ಯೋಗದಿಂದಲೂ ವಂಚಿತ
ಮುಖಂಡ ವೆಂಕಟಾಚಲಪತಿ ಮಾತನಾಡಿ, ವ್ಯವಸ್ಥೆಯಲ್ಲಿ ಜಾತಿ ಪ್ರಮಾಣ ಪತ್ರವು ಕೇವಲ ಒಂದು ದಾಖಲೆ ಅಲ್ಲ. ಶಿಕ್ಷಣ, ಸರ್ಕಾರಿ ಹಾಗೂ ಇತರೆ ಸೌಲಭ್ಯ ಪಡೆದುಕೊಳ್ಳಲು ಅಗತ್ಯವಾಗಿ ಬೇಕಾಗಿರುವ ಅಧಿಕೃತ ದಾಖಲೆಯಾಗಿದೆ. ಉದ್ಯೋಗ ಅಥವಾ ಸೌಲಭ್ಯಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಜಾತಿ ಪ್ರಮಾಣ ಪತ್ರ ಸಲ್ಲಿಸಲೇ ಬೇಕು. ಗೊಂದಲ ಸೃಷ್ಟಿಯಾಗಿರುವುದರಿಂದ ಸೌಲಭ್ಯಗಳಿಂದ ವಂಚನೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸ್ಥಿತಿವಂತರಿಲ್ಲ. ಕರ್ನಾಟಕದಲ್ಲಿ ಮಾನ್ಯತೆ ಪಡೆಯದೆ ಹಿಂದುಳಿದಿದೆ. ಸಮುದಾಯದವರು ಹೆಚ್ಚಾಗಿ ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಭೂಮಿ ಇಲ್ಲದೆ ಇರುವವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸ್ಥಿರ ಆದಾಯದ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಶೈಕ್ಷಣಿ ಅನುಕೂಲಕ್ಕೂ ಸಹ ಜಾತಿ ಪ್ರಮಾಣ ಪತ್ರ ದೊರೆಯದೆ ಇರುವುದು ಸಮುದಾಯವು ಎಲ್ಲಾ ರೀತಿ ಹಿಂದುಳಿಯುವಂತಾಗಿದೆ ಎಂದು ಆತಂಕವ್ಯಕ್ತಪಡಿಸಿದರು.
ವಿದ್ಯಾರ್ಥಿ ವೇತನ, ವಿದ್ಯಾರ್ಥಿನಿಲಯಕ್ಕೆ ನೋಂದಣಿ, ಶುಲ್ಕ ವಿನಾಯಿತಿ ಸೇರಿದಂತೆ ಯಾವುದೇ ಸರ್ಕಾರಿ ನೆರವು ದೊರೆಯುತ್ತಿಲ್ಲ. ಇದರಿಂದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ನಂತರ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸುವ ಪರಿಸ್ಥಿತಿ ಉಂಟಾಗಿದೆ.
ಸಮುದಾಯದವರು ನೀಡಿದ ಉದಾಹರಣೆಯ ಪ್ರಕಾರ, ಮಾಲೂರು ತಾಲ್ಲೂಕಿನ ಒಬ್ಬ ವಿದ್ಯಾರ್ಥಿ ಎಸ್​ ಎಸ್​ ಎಲ್​ ಸಿ ಪರೀಕ್ಷೆಯಲ್ಲಿ ದ್ವೀತಿಯ ಸ್ಥಾನ ಪಡೆದು ವಿಧಾನಸೌಧದಲ್ಲಿ ಗೌರವಿಸಲ್ಪಟ್ಟಿದ್ದರೂ, ಜಾತಿ ಪ್ರಮಾಣಪತ್ರದ ಕೊರತೆಯಿಂದ ಮುಂದಿನ ಶಿಕ್ಷಣದಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿಲ್ಲ.
* ಆಂಧ್ರ, ತಮಿಳುನಾಡಿ ಮಾದರಿ ಸೌಲಭ್ಯ ಕಲ್ಪಿಸಿ
ಮುಖಂಡ ಮುರಳಿ ಮಾತನಾಡಿ, ರಾಜ್ಯಾದ್ಯಂತ ಸುಮಾರು 2 ಲಕ್ಷ ಮಂದಿ ಜನ ಸಂಖ್ಯೆಯಿದೆ, ಮಾಲೂರು, ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್​, ಬಂಗಾರಪೇಟೆ ತಾಲೂಕು ವ್ಯಾಪ್ತಿಯೂ ಸಮುದಾಯದವರಿದ್ದು ಜಾತಿ ಪ್ರಮಾಣ ಪತ್ರವಿಲ್ಲದೆ ಪರಿತಪ್ಪಿಸುತ್ತಿದ್ದಾರೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ 2ಎ ವರ್ಗದಲ್ಲಿ ಮಾನ್ಯತೆ ಪಡೆದು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಸೌಲಭ್ಯ ಕಲ್ಪಿಸಲು ವಿಲಂಭ ಧೋರಣೆ ಯಾಕೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಮುಖಂಡರಾದ ಜಯಪ್ರಕಾಶ್​, ಎಚ್​.ಜಯಪ್ರಕಾಶ್​, ಸಂತೋಷ್​ ಕುಮಾರ್​ ಎನ್​, ಶ್ರೀಧರ್​ ಶೆಟ್ಟಿ, ಭಾಸ್ಕರ್​ ಶೆಟ್ಟಿ, ರಾಮಶೆಟ್ಟಿ, ಮನೋಹರ್​, ಆನಂದ ಶೆಟ್ಟಿ, ಕೃಷ್ಣಯ್ಯ, ಅಶ್ವತ್​ ನಾರಾಯಣ ಶೆಟ್ಟಿ, ಅಶೋಕ್​ ಕುಮಾರ್​, ಚಂಚುಲಕ್ಷ್ಮಿ, ಯುವರಾಜ್​, ಬಿ.ಕೆ.ವೆಂಕಟರಾಜು, ಜಗನ್ನಾಥ್​ ಶೆಟ್ಟಿ, ವೆಂಕಟಾಚಲ, ಬಾಲರಾಜ್​ ಶೆಟ್ಟಿ, ಎಂ.ದಿವ್ಯ, ಹರೀಶ್​, ಮುರಳಿ, ನಾಗರಾಜ್​ ಶೆಟ್ಟಿ ಉಪಸ್ಥಿತರಿದ್ದರು.