ಡಿ. 1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ
ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ಮಾಹಿತಿ
ಕೋಲಾರ: ಜಿಲ್ಲೆಯ 6 ತಾಲೂಕುಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆ ಪೂರ್ಣಗೊಂಡ ಬಳಿಕ 1,200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸದಾಗಿ 37 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ ಒಟ್ಟು 12,95,265 ಮತದಾರರಿದ್ದು, ಗೈರು, ಸ್ಥಳಾಂತರ ಹಾಗೂ ದ್ವಿ-ನೋಂದಣಿ ಪಟ್ಟಿಯಲ್ಲಿನ 1,71,034 ಮತದಾರರು ಹೊರಗುಳಿದಿದ್ದಾರೆ. ಸುಮಾರು 1,42,000 ಜನರಿಗೆ ನೋಟಿಸ್ ನೀಡಿ ದಾಖಲೆ ಪರಿಶೀಲಿಸಿದ ಬಳಿಕ 6,234 ಮತದಾರರನ್ನು ಕೈಬಿಡಲಾಗಿದ್ದು, ಅ. 27 ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ ಒಟ್ಟು 11,39,393 ಮತದಾರರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಸ್ಐಆರ್ಗೂ ಮುನ್ನ ಜಿಲ್ಲೆಯಲ್ಲಿ 1,538 ಮತಗಟ್ಟೆಗಳಿದ್ದು, ಪರಿಷ್ಕರಣೆ ವೇಳೆ 40 ಹೆಚ್ಚುವರಿ ಮತಗಟ್ಟೆ ಸೇರ್ಪಡೆಯಾಗಿ 1,578ಕ್ಕೆ ಏರಿಕೆಯಾಗಿತ್ತು. ಇದೀಗ ಪುನಃ 37 ಹೊಸ ಮತಗಟ್ಟೆಗಳು ಸೇರ್ಪಡೆಯಾಗುತ್ತಿದ್ದು, ಇದರಲ್ಲಿ ಶ್ರೀನಿವಾಸಪುರ 3, ಮುಳಬಾಗಿಲು 6, ಕೆಜಿಎಫ್ 4, ಬಂಗಾರಪೇಟೆ 7, ಕೋಲಾರ 7 ಹಾಗೂ ಮಾಲೂರು ತಾಲೂಕಿನಲ್ಲಿ 10 ಹೊಸ ಮತಗಟ್ಟೆಗಳು ಸ್ಥಾಪನೆಯಾಗಲಿವೆ ಎಂದರು
ಪ್ರಸ್ತುತ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ 1,942 ಅರ್ಜಿ ಸಲ್ಲಿಕೆಯಾಗಿವೆ. ಡಿ.1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆ ಹಾಗೂ ಸೇರ್ಪಡೆಗೆ (ಫಾರಂ 6, 7, 8) 2027ರ ಜ.1ರ ವರೆಗೆ ಕಾಲಾವಕಾಶ ನೀಡಲಾಗಿದೆ. ಪರಿಶೀಲನೆ ಬಳಿಕ ಜ.20ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಜ.25ರ ರಾಷ್ಟ್ರೀಯ ಮತದಾರರ ದಿನದಂದು ಹೊಸ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪೂರ್ಣ ದಾಖಲೆಗಳಿಂದ ಎಸ್ಐಆರ್ನಲ್ಲಿ ಅರ್ಜಿ ತಿರಸ್ಕೃತಗೊಂಡ ಮತದಾರರು ಸೂಕ್ತ ದಾಖಲೆಗಳೊಂದಿಗೆ ಫಾರಂ 6ರ ಮೂಲಕ ಮರು ಅರ್ಜಿ ಸಲ್ಲಿಸಬಹುದು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಾಮೂಹಿಕವಾಗಿ (ಬಲ್ಕ್) ಹೆಸರು ಕೈಬಿಡಲು ಅರ್ಜಿ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎಸ್ಎಸ್ಆರ್ ಪ್ರಕ್ರಿಯೆಗೂ ರಾಜಕೀಯ ಪಕ್ಷಗಳು ಹಾಗೂ ಬಿಎಲ್ಎಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ಕೋಲಾರ: ಕೆಸಿ ವ್ಯಾಲಿ ಯೋಜನೆಯ ಶುದ್ಧೀಕರಣ ಘಟಕಗಳಲ್ಲಿನ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಪ್ರಸ್ತುತ ಜಿಲ್ಲೆಗೆ ಪ್ರತಿದಿನ 330ರಿಂದ 340 ಎಂಎಲ್ಡಿ ನೀರು ಹರಿಯುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ತಿಳಿಸಿದರು.
ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳಿಗೆ ಸಮರ್ಪಕವಾಗಿ ನೀರು ತಲುಪದಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ಜಿಲ್ಲೆಗೆ 420 ಎಂಎಲ್ಡಿ ನೀರು ಬರಬೇಕಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಶುದ್ಧೀಕರಣ ಘಟಕಗಳ ರಿಪೇರಿ ಹಿನ್ನೆಲೆಯಲ್ಲಿ ನೀರಿನ ಹರಿವು 180-190 ಎಂಎಲ್ಡಿಗೆ ಕುಸಿದಿತ್ತು. ಇದೀಗ ದುರಸ್ತಿ ಮುಗಿದು ನೀರಿನ ಪ್ರಮಾಣ ಹೆಚ್ಚಾಗಿದೆ ಎಂದರು.
ಹಿಂದೆ ಮಳೆಯೂ ಜತೆಗಿದ್ದ ಕಾರಣ ಕೆರೆಗಳು ಬೇಗ ತುಂಬಿ ಮುಂದಿನ ತಾಲೂಕುಗಳಿಗೆ ನೀರು ಹರಿಯುತ್ತಿತ್ತು. ಈ ಬಾರಿ ಮಳೆ ಕೊರತೆಯಿಂದಾಗಿ ಆರಂಭಿಕ ಕೆರೆಗಳು ಹಾಗೂ ಕೊಳವೆಬಾವಿಗಳು ನೀರನ್ನು ಹೀರಿಕೊಳ್ಳುತ್ತಿರುವುದರಿಂದ ಮುಂದಕ್ಕೆ ಹರಿಯಲು ಸಮಯ ತೆಗೆದುಕೊಳ್ಳುತ್ತಿದೆ. ಹೊಸಕೋಟೆ ಬಳಿಯ ಎರಡು ಕೆರೆಗಳ ವಾಲ್ವ್ ನಿಯಂತ್ರಿಸಿ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಭಾಗಕ್ಕೆ ಹೆಚ್ಚಿನ ನೀರು ಹರಿಸುವ ಕುರಿತು ಶಾಸಕರು ಸಲಹೆ ನೀಡಿದ್ದು, ಈ ಬಗ್ಗೆ ಭಾನುವಾರ ವಿಶೇಷ ಸಭೆ ನಡೆಸಿ ನೀರು ಡೈವರ್ಟ್ ಮಾಡುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದರು.