ಕೋಲಾರ/ವೇಮಗಲ್: ಜನಪ್ರತಿನಿಧಿಗಳನ್ನು ಕಡೆಗಣಿಸಿದವರಿಗೆ ಬುದ್ದಿ ಕಲಿಸಲು ಘಟಕಕ್ಕೆ ಸರಬರಾಜಾಗುವ ಕರೆಂಟ್ ಕಟ್ ಮಾಡಿ... ಫ್ಯಾಕ್ಟರಿ ಗೇಟ್ ಗೆ ಅಡ್ಡಲಾಗಿ ಹಳ್ಳ ತೋಡಿ...
ಫೆ.17ರಂದು ಟಾಟಾ ಅಡ್ವಾನ್ಸ್ ಸಿಸ್ಟಮ್ ಏರ್ ಬಸ್-125 ಲಘು ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕನಿಷ್ಠ ಉದ್ಘಾಟನಾ ಕಾರ್ಯಕ್ರಮಕ್ಕಾದರೂ ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ. ಕಂಪನಿಗೆ ವೇಮಗಲ್ ನಿಂದಲೇ ಕರೆಂಟ್ ಹೋಗುತ್ತಿದೆ. ಅದನ್ನು ಕಟ್ ಮಾಡಿ. ಬೇಕಿದ್ದರೆ ಅವರು ಪ್ರತ್ಯೇಕ ಫೀಡರ್ ಹಾಕಿಸಿಕೊಳ್ಳಲಿ ಎಂದರು.
ಎಲ್ಲಿಂದಲೋ ಬಂದ ಕಂಪನಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳೆಂದರೆ ಲೆಕ್ಕಕ್ಕೇ ಇಲ್ಲ. ಅವರಿಗೆ ಬುದ್ದಿ ಕಲಿಸಲು ಸ್ಥಳೀಯ ಆಡಳಿತಕ್ಕೆ ಸಾಕಷ್ಟು ಅವಕಾಶ ಇದೆ. ನಾವು ಈ ದಾರಿ ಮೂಲಕ ಹೋದರೆ ಅವರೇ ಸರಿದಾರಿಗೆ ಬರುತ್ತಾರೆ ಎಂದು ಎಚ್ಚರಿಸಿದರು.
ಕಂಪನಿಯವರು ಬಂದರೆ ಇನ್ನು ಮುಂದೆ ಖಾತೆ ಮಾಡಿಕೊಡಬೇಡಿ, ಅವರ ಕೈಯಲ್ಲಿ ಏನಾಗುತ್ತದೋ ನೋಡೋಣ ಎಂದು ಸವಾಲು ಹಾಕಿದರು. ಖಾತೆ ಇಲ್ಲದೆ ಅವರು ಹೇಗೆ ಫ್ಯಾಕ್ಟರಿ ಕಟ್ಟಿ ಆರಂಭಿಸುತ್ತಾರೆ ಎಂಬುದನ್ನು ನೋಡಿಯೇ ಬಿಡೋಣ ಎಂದು ಸವಾಲು ಹಾಕಿದರು.
ಪಟ್ಟಣ ಪಂಚಾಯಿತಿಯಿಂದ ಚರಂಡಿ ನಿರ್ಮಾಣಕ್ಕೆ 5 ಲಕ್ಷ ರೂ. ಬಿಡುಗಡೆ ಮಾಡಿ ಕೆಲಸ ಆರಂಭಿಸಿ, ಕಾರ್ಖಾನೆಯ ಮುಖ್ಯ ಗೇಟಿಗೆ ಅಡ್ಡಲಾಗಿ ಹಳ್ಳ ತೋಡಿ. ಅವರು ಹೇಗೆ ಓಡಾಡುತ್ತಾರೋ ನೋಡೋಣ ಎಂದರು.