- ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟನೆ
ಕೋಲಾರ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕಿದ್ದು ಮಾಧ್ಯಮಗಳೇ ಹೊರತು ನಾವಲ್ಲ. ಪಕ್ಷದ ಹೈಕಮಾಂಡ್ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವವರು ಹೇಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲ ಕಾಂಗ್ರೆಸ್ ಕಟ್ಟಾಳುಗಳು, ಸಿಎಂ, ಡಿಸಿಎಂ, ಹೈಕಮಾಂಡ್ ಹೇಳಿದಂತೆ ಕೇಳುವವರು, ಮತ್ತೊಬ್ಬರ ಮಾತಿಗೆ ಕಿವಿಗೊಡುವುದಿಲ್ಲ ಎಂದು ತಿಳಿಸಿದರು.
ಇಂತಹುದೇ ದಿನ ಪ್ರಮಾಣ ವಚನ ಸ್ವೀಕರಿಸುವುದಾಗಿ ಶಿವಕುಮಾರ್ ಆಗಲೀ ಹೈಕಮಾಂಡ್‌ನವರಾಗಲಿ ಹೇಳಿದ್ದಾರೆ ಎಂಬೆಲ್ಲ ವದಂತಿಗೆ ಪ್ರತಿಕ್ರಿಯೆ ನೀಡುತ್ತಾ ಹೋದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಲಿದ್ದು, ಬದಲಾವಣೆ ಕುರಿತು ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲ ಬದಲಾಗುತ್ತಿದ್ದಂತೆ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಲು ಮುಂದಾಗಿದ್ದಾರೆ. ಅತಿ ಹೆಚ್ಚು ಒಲವು ತೋರುತ್ತಿದ್ದಾರೆ. ಯಾವುದೇ ಒಂದು ಶಾಲೆ ಮುಚ್ಚಬೇಕು ಎಂಬುದು ಸರ್ಕಾರದ ಉದ್ದೇಶವಲ್ಲ. ಕನ್ನಡ ಶಾಲೆಯಲ್ಲಿ ಓದಿದವರು ಸಹ ಐಎಎಸ್, ಇಂಜಿನಿಯರ್, ವೈದ್ಯ, ವಿಜ್ಞಾನಿ ಆಗಿದ್ದಾರೆ. ಕನ್ನಡ ಶಾಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಅನುದಾನ ಕೊಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಇನ್ನು ಆರ್‌ಎಸ್‌ಎಸ್‌ನ್ನು ಬ್ಯಾನ್ ಮಾಡಿರುವ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಹಿರಿಯರು, ಎಐಸಿಸಿ ಅಧ್ಯಕ್ಷರಾಗಿದ್ದು, ಅವರ ತೀರ್ಮಾನಕ್ಕೆ ಬದ್ಧ ಎಂದರು.