ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಬುಧವಾರ ಸ್ವಯಂ ಗಣತಿ ಮಾಡಿಕೊಳ್ಳುವ ಮೂಲಕ ಜನಗಣತಿ& 2027ಕ್ಕೆ ಚಾಲನೆ ನೀಡಿದರು. ನವೀನ್ ಚಂದ್ರ ಇದ್ದರು.
ಕೋಲಾರ: ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಬುಧವಾರ ಸ್ವಯಂ ಗಣತಿ ಮಾಡಿಕೊಳ್ಳುವ ಮೂಲಕ ಜನಗಣತಿ- 2027ಕ್ಕೆ ಚಾಲನೆ ನೀಡಿದರು.
ಸಾರ್ವಜನಿಕರು ಸ್ವಯಂಗಣತಿಗಾಗಿ ವೆಬ್ ಪೋರ್ಟಲ್ se.census.gov.in ಮೂಲಕ ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿ ಮೊಬೈಲ್ ಸಂಖ್ಯೆ ನೀಡಿದಾಗ ಐ.ಡಿ ಸೃಷ್ಟಿಯಾಗುತ್ತದೆ.
ಏ.16ರಿಂದ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಈ ಐ.ಡಿ ನೀಡುವ ಮೂಲಕ ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುತ್ತದೆ. ಮೇ 15ರವರೆಗೆ ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ.
* ಜನಗಣತಿಯಲ್ಲಿ ಪಾಲ್ಗೊಳ್ಳಲು ಸಲಹೆ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ನಾನು ಸರ್ಕಾರದ ನಿವಾಸದಲ್ಲಿ ನನ್ನ ಮೊಬೈಲ್ನಲ್ಲಿ ಜನಗಣತಿ ಪೋರ್ಟಲ್ಗೆ ಲಾಗಿನ್ ಆಗಿ ಮಾಹಿತಿ ನೀಡಿದ್ದೇನೆ. ಬಹಳ ಸರಳ ಹಾಗೂ ಸುಲಭವಾಗಿರುವ ಪೋರ್ಟಲ್ ಇದು. ಸುಮಾರು 33 ಪ್ರಶ್ನೆಗಳು ಕನ್ನಡದಲ್ಲಿಯೇ ಇದ್ದು, ಕನ್ನಡದಲ್ಲಿಯೇ ನಾಲ್ಕು ನಿಮಿಷಗಳಲ್ಲಿ ಸ್ವಯಂ ಮಾಹಿತಿ ನೀಡಬಹುದು, ಜಿಲ್ಲೆಯಲ್ಲಿ ಏ.1ರಿಂದ 15ವರೆಗೆ ಸ್ವಯಂ ಗಣತಿ ನಡೆಯಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲಾ ಸಿದ್ಧತೆ ಮುಗಿದಿದೆ. ಗಣತಿ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು 3,385 ಗಣತಿ ಬ್ಲಾಕ್ಗಳನ್ನು ರಚಿಸಲಾಗಿದೆ. ಒಂದು ಬ್ಲಾಕ್ ಅಂದರೆ ಸುಮಾರು 180 ರಿಂದ 200 ಮನೆಗಳು ಅಥವಾ ಅಂದಾಜು 800 ಜನರ ಜನಸಂಖ್ಯೆಯನ್ನು ಒಳಗೊಂಡಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 2,861 ಗಣತಿದಾರರು ಮತ್ತು 474ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಒಬ್ಬರು ಮಾಸ್ಟರ್ ಟೆನರ್ ಹಾಗೂ 62 ಫೀಲ್ಡ್ ಟೆನರ್ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಗಣತಿದಾರರಿಗೆ ಏಪ್ರಿಲ್ 7 ರಿಂದ ಮೂರು ದಿನ ತರಬೇತಿ ಆಯೋಜಿಸಲಾಗಿದೆ ಎಂದರು.
ದೇಶದಲ್ಲಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಈಗ ಮೊದಲ ಹಂತದಲ್ಲಿ ಏ.16ರಿಂದ ಮನೆ ಪಟ್ಟಿ ಹಾಗೂ ಮನೆಗಣತಿ ಮಾತ್ರ ಹಮ್ಮಿಕೊಳ್ಳಲಾಗಿದೆ. ಜನಗಣತಿ ಇನ್ನೂ ಆರಂಭವಾಗಿಲ್ಲ. ಇದು ಮುಂದಿನ ವರ್ಷ ನಡೆಯಲಿದೆ ಎಂದು ತಿಳಿಸಿದರು.
* ಸಾರ್ವಜನಿಕರು ಸಹಕರಿಸಲು ಮನವಿ
ನಗರಸಭೆ ಆಯುಕ್ತ ನವೀನ್ ಚಂದ್ರ ಮಾತನಾಡಿ, ಜಿಲ್ಲಾಧಿಕಾರಿ ಎಂ.ಆರ್.ರವಿ ಸ್ವಯಂ ಗಣತಿ ಮಾಡಿಕೊಳ್ಳುವ ಮೂಲಕ ಚಾಲನೆ ನೀಡಿದ್ದಾರೆ. ಜಿಲ್ಲೆಯ ಎಲ್ಲರೂ ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದರು.