ಮುಳಬಾಗಿಲು ತಾಲೂಕು ಕುರುಡುಮಲೆಯ ಶ್ರೀ ಲಕ್ಷಿ$್ಮ ಗಣಪತಿ ದೇವಾಲಯದ ಬ್ರಹ್ಮರಥೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಮಾತನಾಡಿದರು. ತಹಸೀಲ್ದಾರ್​ ವಿ.ಗೀತಾ, ತಾಪಂ ಇಒ ಬಾಬು, ಗ್ರಾಮಾಂತರ ಸಿಪಿಐ ಸತೀಶ್​, ಪಿಎಸ್​ಐ ಅರುಣ್​ಗೌಡ ಪಾಟೀಲ್​, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು. 
ಕೋಲಾರ

ಸೆ.15ಕ್ಕೆ ಕುರುಡುಮಲೆಯಲ್ಲಿ ಬ್ರಹ್ಮರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಸೆ.15ಕ್ಕೆ ಕುರುಡುಮಲೆಯಲ್ಲಿ ಬ್ರಹ್ಮರಥೋತ್ಸವ
ಮುಳಬಾಗಿಲು:

ಕುರುಡುಮಲೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಶಾಂತಿಯುತ ಹಾಗೂ ವಿಜೃಂಭಣೆಯಿಂದ ನಡೆಯಲು ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು, ಭಕ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಮನವಿ ಮಾಡಿದರು.

ಸೆ.15ರಂದು ಜರುಗಲಿರುವ ಕುರುಡುಮಲೆ ಶ್ರೀ ಲಕ್ಷ್ಮೀ ಗಣಪತಿ ಬ್ರಹ್ಮರಥೋತ್ಸವದ ಅಂಗವಾಗಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಥೋತ್ಸವದ ಯಶಸ್ವಿ ನಿರ್ವಹಣೆಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದ್ದು, ಎಲ್ಲರೂ ತಮ್ಮ ಕರ್ತವ್ಯ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಕೆಎಸ್​ಆರ್​ಟಿಸಿ ಘಟಕಕ್ಕೆ ನಾಲ್ಕು ಹೊಸ ಬಸ್​ಗಳು ಬಂದಿದ್ದು, ರಥೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್​ ನಿಯೋಜಿಸಲಾಗುವುದು. ಕುರುಡುಮಲೆ ಹೊರವಲಯದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಬಾರಿ ಪಲ್ಲಕ್ಕಿ ಉತ್ಸವದ ಜವಾಬ್ದಾರಿಯನ್ನು ಕುರುಡುಮಲೆ ಗ್ರಾಮಸ್ಥರು ವಹಿಸಿಕೊಂಡಿದ್ದಾರೆ. ದೇವರ ಸೇವೆಯಲ್ಲಿ ಯಾವುದೇ ಭೇದ&ಭಾವ ಮಾಡದೆ ಎಲ್ಲರ ಸಹಕಾರದೊಂದಿಗೆ ಉತ್ಸವ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ದೇವಾಲಯದ ಅಲಂಕಾರ ಹಾಗೂ ವಿನಾಯಕ ದೇವರು ಮತ್ತು ರಥಕ್ಕೆ ಹೂವಿನ ಅಲಂಕಾರವನ್ನು ನಮ್ಮ ಕುಟುಂಬದಿಂದ ಮಾಡಿಕೊಡಲಾಗುವುದು. ರಥೋತ್ಸವದ ಸಿದ್ಧತೆ ಹಾಗೂ ವ್ಯವಸ್ಥೆಗಳಲ್ಲಿ ಕುರುಡುಮಲೆ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಮತ್ತು ಭಕ್ತರು ಸ್ವಯಂಪ್ರೇರಿತರಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.