BAR 
ಕೋಲಾರ

ಬೆಳ್ಳಂಬೆಳಗ್ಗೆ ನಶೆ ಏರಿಸುವ ಬಾರ್​ಗಳು! | BAR

ಕೋಲಾರ ಡೆಸ್ಕ್
ಅಬಕಾರಿ ಇಲಾಖೆ ನಿಯಮ ಗಾಳಿಗೆ ತೂರಿ, ಮದ್ಯದಂಗಡಿ ಮಾಲೀಕರು ಹಿಂಬಾಗಿಲಿನ ಮೂಲಕ ಬೆಳಗ್ಗೆ 6 ಗಂಟೆಗೆ ಮದ್ಯಪ್ರಿಯರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಜಿಲ್ಲೆಯಲ್ಲಿ ಅವ್ಯಾಹತವಾಗಿದೆ.
ನಿಯಮ ಉಲ್ಲಂನೆ ಜಿಲ್ಲಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಬಕಾರಿ ನಿಯಮಗಳ ಪ್ರಕಾರ ಬೆಳಗ್ಗೆ 11 ಗಂಟೆ ನಂತರ ಮತ್ತು ರಾತ್ರಿ 11ರೊಳಗೆ ಮದ್ಯ ಮಾರಾಟ ಮಾಡಬೇಕು. ಆದರೆ, ಕೋಲಾರ ಬಸ್​ ನಿಲ್ದಾಣ ಸಮೀಪ ಸೇರಿದಂತೆ ಬಹುತೇಕ ಜನನಿಬಿಡ ಸ್ಥಳಗಳಲ್ಲಿರುವ ಮದ್ಯದಂಗಡಿಗಳು ಬೆಳಗ್ಗೆ 6 ಗಂಟೆಗೆ ಹಿಂಬದಿಯ ಬಾಗಿಲು ಮೂಲಕ ಮದ್ಯ ಮಾರಾಟ ಮಾಡುತ್ತಿವೆ.
ಕೋಲಾರ ನಗರ ಮಾತ್ರವಲ್ಲದೆ ಶ್ರೀನಿವಾಸಪುರ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಬಸ್​ನಿಲ್ದಾಣಕ್ಕೆ ಹತ್ತಿರವಿರುವ ಮದ್ಯದಂಗಡಿ ಸಮೀಪ ಏನೂ ದೊರೆಯದಿದ್ದರೂ ಮದ್ಯದ ಬಾಟಲಿಗಳಂತೂ ಸದಾ ದೊರೆಯುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿಯೂ ದಿನದ 24 ಗಂಟೆ ಮದ್ಯ ಲಭ್ಯವಾಗುತ್ತಿದ್ದು, ಜನರು ಬೆಳಗಿನ ಜಾವವೇ ಕುಡಿತದ ಚಟಕ್ಕೆ ಬಿದ್ದು, ಕೆಲಸ ಕಾರ್ಯ ಮಾಡದೆ ಕುಟುಂಬವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ.
ಪ್ರತಿ ಮದ್ಯದಂಗಡಿಯೂ ತಿಂಗಳಿಗೆ ಇಂತಿಷ್ಟು ವ್ಯಾಪಾರ ವಹಿವಾಟು ಆಗಿದೆ ಎಂದು ಅಬಕಾರಿ ಇಲಾಖೆಗೆ ತೋರಿಸಬೇಕೆಂಬ ಉದ್ದೇಶ ಹೊಂದಿರುವುದರಿಂದ ಜನರ ಜೀವನಕ್ಕಿಂತ ಆರ್ಥಿಕ ಲಾಭ ಮುಖ್ಯವಾಗಿದೆ. ಬಾರ್​ ಮಾಲೀಕರು ಗ್ರಾಮದ ಸಣ್ಣ&ಪುಟ್ಟ ಅಂಗಡಿಗಳಲ್ಲಿ ಕೇಸ್​ಗಟ್ಟಲೆ ಮದ್ಯ ನೀಡುವ ಮೂಲಕ ವಹಿವಾಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಗಳ ಅಂಗಡಿಗಳಲ್ಲಿ ದಿನದ 24 ಗಂಟೆಯೂ ಮದ್ಯ ದೊರೆಯುತ್ತಿದೆ.
ಗ್ರಾಮಗಳಲ್ಲಿ ಸಣ್ಣ&ಪುಟ್ಟ ಅಂಗಡಿಗಳಲ್ಲಿಯೂ ಮದ್ಯ ಲಭ್ಯವಾಗುವುದರಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ. ಬೆಳಗ್ಗೆ ಕಾಫಿ ಕುಡಿಯುವ ಬದಲು ಮದ್ಯ ಸೇವನೆಗೆ ಅಂಗಡಿಗಳ ಬಳಿ ನಿಂತಿರುವ ದೃಶ್ಯ ಕಾಣುತ್ತದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಕುಟುಂಬಗಳು ನಾಶವಾಗುತ್ತಿವೆ.
| ಚೌಡೇಗೌಡ, ಮಾಸ್ತೇನಹಳ್ಳಿ
ಅಬಕಾರಿ ಇಲಾಖೆ ಅಧಿಕಾರಿಗಳು ನಿತ್ಯ ಎಲ್ಲ ಕಡೆಗಳಲ್ಲಿಯೂ ಬೀಟ್​ ಮಾಡುತ್ತಿದ್ದಾರೆ. ಆದರೂ ಕೆಲವೊಂದು ಕಡೆ ಇಲಾಖೆ ಕಣ್ತಪ್ಪಿಸಿ ಬೆಳಗಿನ ಜಾವವೇ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಕ್ರಮ ಜರುಗಿಸಲಾಗುವುದು. ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು. ದೂರುದಾರ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡಬೇಕು.
| ಸೈದಾ ಅಜಮತ್​ ಅಫ್ರೀಸ್​, ಉಪ ಆಯುಕ್ತ, ಅಬಕಾರಿ ಇಲಾಖೆ, ಕೋಲಾರ