ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ನಡೆಸಿದ ನೀರಿನ ಆಡಿಟ್, ಬೇಸಿಗೆಯಲ್ಲಿ ಎದುರಾಗಬಹುದಾದ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಎದುರಾಗುತ್ತದೆ. ಇದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ 'ಸರ್ಕಾರ ಕ್ರಮವಹಿಸಿ, ಜಿಲ್ಲೆಗಳಿಗೆ ನಿರ್ದೇಶನ ನೀಡುತ್ತದೆ.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಡಾ.ಪ್ರವೀಣ್ ಬಾಗೇವಾಡಿ ಅವರು ಎಲ್ಲ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸಮಸ್ಯೆ ನಿವಾರಣೆಗೆ ಇಟ್ಟ ಹೆಜ್ಜೆಯೇ ನೀರಿನ ಆಡಿಟ್, ಅದಾಲತ್, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಜಿಲ್ಲೆಯಲ್ಲಿ ಮಳೆಗಾಲದ ಎದುರಾಗುವ ನೀರಿನ ಸಮಸ್ಯೆ ನೀಗಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿರುತ್ತದೆ. ಆದರೆ ಈ ಬಾರಿ ಬೇಸಿಗೆಗೂ ಮುನ್ನವೇ ತೆಗೆದುಕೊಂಡ ಕ್ರಮ ಅಷ್ಟು ಕಷ್ಟವೆನಿಸಲಿಲ್ಲ. ಅಧಿಕಾರಿಗಳ ಮುಂದಾಲೋಚನೆಯಿಂದಲೇ ಮಾರ್ಚ್, ಎಪ್ರಿಲ್, ಮೇ ಮತ್ತು ಜೂನ್‌ನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿದಂತಾಗಿದೆ.
ಗ್ರಾಮಗಳಿಗೆ, ವಾರ್ಡ್‌ಗೆ ನೀರು ಪೂರೈಕೆ ಮಾಡಲು ಕೊಳವೆಬಾವಿಗಳನ್ನು ಅವಲಂಬಿಸಿದ್ದು, ಅದು ಯಾವಾಗ ಬತ್ತಿ ಹೋಗುತ್ತವೊ ಎಂಬ ಆತಂಕ ಕಾಡುತ್ತಿತ್ತು. ಬಂಗಾರಪೇಟೆ, ಮಾಲೂರು, ಕೋಲಾರ ಭಾಗದಲ್ಲಿ
ಯರಗೋಳ್ ಡ್ಯಾಂನಿಂದ ಸರಬರಾಜು ಆಗುತ್ತಿದ್ದರಿಂದ ಸಮಸ್ಯೆ ಬಿಗಡಾಯಿಸಲಿಲ್ಲ. ನಗರ ಪ್ರದೇಶದಲ್ಲಿ ಒಬ್ಬರಿಗೆ 150 ಲೀಟರ್, ಹಾಗೂ ಗ್ರಾಮೀಣ ಪ್ರದೇಶದಲ್ಲಿ 55 ಲೀಟರ್ ನೀರಿನ ಲಭ್ಯತೆ ಮತ್ತು ಬಳಕೆ ಅಳೆದು ನೀರಿನ ಲೆಕ್ಕ ಪರಿಶೋಧನೆ ನಡೆಸಲಾಗಿದ್ದು, ಸಾರ್ವಜನಿಕರಿಗೆ ಸಮರ್ಪಕವಾಗಿ ಪೂರೈಕೆ ಮಾಡಲು ಸಹಕಾರಿಯಾಗಿದೆ.
ಗ್ರಾಮೀಣ ಪ್ರದೇಶ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳಲ್ಲಿ ಇರುವ ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರಿನ ಇಳುವರಿ ಎಷ್ಟು..?, ಎಷ್ಟು ದಿನಕ್ಕೆ ನಿರ್ವಹಣೆ ಮಾಡಬಹುದು..?, ಎಂಬುದರ ಬಗ್ಗೆ ತಿಳಿಯಲು ಅಧಿಕಾರಿಗಳ ತಂಡ ರಚನೆ ಮಾಡಿದ್ದರು.
ಅಧಿಕಾರಿಗಳು ಗ್ರಾಮ, ವಾರ್ಡ್‌ಗಳಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಸಮಸ್ಯೆ ಕುರಿತು ಚರ್ಚಿಸಿ ನಿವಾರಣೆಗೆ ಮಾಹಿತಿ ಪಡೆದುಕೊಂಡರು, ಇಲ್ಲಿ ಅಧಿಕಾರಿಗಳು ಲಭ್ಯವಿರುವ ನೀರನ್ನು ವ್ಯರ್ಥ ಮಾಡದೆ ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಿದರು.
ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ನೀರಿನ ಹಂಚಿಕೆಯಲ್ಲಿ ಆಗುತ್ತಿದ್ದ ಅಸಮರ್ಪಕ ನಿರ್ವಹಣೆ ತಡೆಗಟ್ಟಲಾಗಿದ್ದು, ಲಭ್ಯವಿರುವ ಜಲ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ನಿಭಾಯಿಸುವಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿನ 154 ಗ್ರಾಪಂ ವ್ಯಾಪ್ತಿಯಲ್ಲಿ 155 ನೀರಿನ ಅದಾಲತ್ ಸಭೆ ನಡೆಸಿದ್ದು, ಒಟ್ಟು 1,531 ಗ್ರಾಮಗಳ ಪೈಕಿ 1,508 ಗ್ರಾಮಗಳಲ್ಲಿ 55 ಎಲ್‌ಪಿಸಿಡಿಗಿಂತ ಹೆಚ್ಚು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, 23 ಗ್ರಾಮಗಳಲ್ಲಿ 55 ಲೀ. (36ರಿಂದ 54 ಲೀಟರ್) ಕಡಿಮೆ ನೀರು ಸಬರಾಜು ಮಾಡಲಾಗುತ್ತಿದೆ. ಕಡಿಮೆ ನೀರು ಲಭ್ಯವಾಗಿರುವ ಗ್ರಾಮಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗಿತ್ತು. ಕೋಲಾರ ತಾಲೂಕು ತಲಗುಂದ, ಪುರಹಳ್ಳಿ, ಮುಳಬಾಗಿಲು ತಾಲೂಕಿನ ಪಾಯಸ್ಥನಹಳ್ಳಿ, ಕೆಜಿಎಫ್ ತಾಲೂಕಿನ ಬೇತಮಂಗಲ, ಶ್ರೀನಿವಾಸಪುರ ತಾಲೂಕಿನ ಚಲ್ಲಿಗಾನಹಳ್ಳಿ, ಬಂಗಾರಪೇಟೆ ತಾಲೂಕು ಬಲಮಂದೆಯಲ್ಲಿ ನಿಗದಿತ ಲೀಟರ್‌ಗಿಂತ ಕಡಿಮೆ ಪ್ರಮಾಣದಲ್ಲಿ ನೀರು ಸರಬರಾಜು ಮಾಡುತ್ತಿದ್ದರಿಂದ ಲಭ್ಯವಿರುವ ಸಂಪನ್ಮೂಲವನ್ನೇ ಉಪಯೋಗಿಸಿಕೊಂಡು ಜನರಿಗೆ ತೊಂದರೆಯಾಗದಂತೆ ಎಚ್ಚರಹಿಸಲಾಗಿತ್ತು.
ಮಾಲೂರು ತಾಲೂಕಿನ ಸೊನ್ನಪ್ಪನಹಳ್ಳಿ, ಅರಸನಹಳ್ಳಿ, ಪೇಲುವನಹಳ್ಳಿ, ನಿದರಮಂಗಲದಲ್ಲಿ ಸರ್ಕಾರಿ ಕೊಳವೆಬಾವಿ ಬತ್ತಿ ಹೋಗಿದ್ದರಿಂದ ಖಾಸಗಿ ಕೊಳವೆಬಾವಿಯಿಂದ ನೀರನ್ನು ಸರಬರಾಜು ಮಾಡಿ ಸಮಸ್ಯೆ ಬಗೆಹರಿಸಲಾಯಿತು. ಸಮಸ್ಯೆ ಎದುರಾಗಬಹುದಾದ ವಾರ್ಡ್, ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ಅಡಿಯಲ್ಲೂ ಕೊಳವೆಬಾವಿ ಕೊರೆಸಿ ಸಮಸ್ಯೆಯು ತೀವ್ರಗೊಳ್ಳದಂತೆ ಅಧಿಕಾರಿಗಳು ಕ್ರವಹಿಸಿದ್ದರು.
ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ಹೆಚ್ಚಾಗಿ ನೀರಿನ ಸಮಸ್ಯೆ ಎದುರಾಗು ಸಂಭವ ಇತ್ತು, ಮುಂಜಾಗ್ರತೆ ಕೈಗೊಂಡು ನೀರಿನ ಆಡಿಟ್, ಅದಾಲತ್ ನಡೆಸಿದ್ದರಿಂದ ನೀರಿನ ಲಭ್ಯತೆ ಗೊತ್ತಾಯಿತು, ಅದನ್ನು ವೈಜ್ಞಾನಿಕವಾಗಿ ಬಳಕೆ ಮಾಡಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದರಿಂದ ಸಮಸ್ಯೆ ಎದುರಾಗಲಿಲ್ಲ. ಇದರ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ.
- ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ
ನೀರಿನ ಅಡಿಟ್ ಮತ್ತು ಅದಾಲತ್ ನಿಂದಾಗಿ ಲಭ್ಯತೆ, ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಅದೇ ರೀತಿ ಜನ ಸಹ ಇದಕ್ಕೆ ಸಾಥ್ ನೀಡಿದ್ದು, ಸಮಸ್ಯೆ ನಿವಾರಣೆಗೆ ಸಲಭವಾಯಿತು.
- ಡಾ.ಪ್ರವೀಣ್ ಪಿ.ಬಾಗೇವಾಡಿ, ಸಿಇಒ. ಜಿ.ಪಂ ಕೋಲಾರ