ಮುಳಬಾಗಿಲು: ಮಕ್ಕಳಿಗೆ ಪೌಷ್ಟಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ, ಆರೋಗ್ಯ ಸೇವೆ ಒದಗಿಸಬೇಕಾದ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಗ್ರಹಣ ಹಿಡಿದು ಅರ್ಧಕ್ಕೆ ನಿಂತಿದ್ದು, ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಎದುರಾಗಿದೆ.
ತಾಲೂಕಿನ ಕುಮದೇನಹಳ್ಳಿಯಲ್ಲಿ ಗ್ರಾಪಂ ಮತ್ತು ತಾಪಂನಿಂದ ಸುಮಾರು 5 ವರ್ಷದ ಹಿಂದೆ ಅಂಗನವಾಡಿ ಕಟ್ಟಡ ನಿಮಾರ್ಣ ಕಾಮಗಾರಿ ಆರಂಭಿಸಿದ್ದು, ಅನುದಾನ ಕೊರತೆಯಿಂದ ಇಂದಿಗೂ ಪೂರ್ಣಗೊಂಡಿಲ್ಲ. ಗೋಡೆಗಳು ನಿಮಾರ್ಣಗೊಂಡಿದ್ದರೂ ಕಟ್ಟಡಕ್ಕೆ ಅಂತಿಮ ರೂಪ ನೀಡುವ ಕೆಲಸ ಬಾಕಿ ಉಳಿದಿದ್ದು, ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ.
ಗ್ರಾಪಂ, ತಾಪಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಸ್ಥಗಿತಗೊಳ್ಳಲು ಕಾರಣವೇನು ಎಂಬುದನ್ನು ಪರಿಶೀಲಿಸಿ, ಅನುದಾನ ಒದಗಿಸುವ ಮೂಲಕ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಅನುದಾನವಿಲ್ಲದೆ ಅತಂತ್ರ: ಕುಮದೇನಹಳ್ಳಿಯಲ್ಲಿ ನಿಮಾರ್ಣ ಹಂತದಲ್ಲಿರುವ ಕಟ್ಟಡ ಐದು ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿರುವುದು ಯೋಜನೆಯ ಅನುಷ್ಠಾನದ ಕುರಿತು ಪ್ರಶ್ನೆ ಮೂಡಿಸಿದೆ. ಕಟ್ಟಡದ ಗೋಡೆಗಳು ನಿಮಾರ್ಣಗೊಂಡಿದ್ದು, ಛಾವಣಿ ಸೇರಿ ಮುಂದಿನ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ. ಕಟ್ಟಡದ ಸುತ್ತಲೂ ಗಿಡ&ಗಂಟಿ ಬೆಳೆದಿದ್ದು, ಕಾಮಗಾರಿ ನಡೆದ ಜಾಗ ನಿರ್ವಹಣೆಯಿಲ್ಲದೆ ವಿಷ ಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.
ಮಕ್ಕಳ ಹಿತದೃಷ್ಟಿಯಿಂದ ಕ್ರಮ ಅಗತ್ಯ:ಅಂಗನವಾಡಿ ಕಟ್ಟಡ ನಿಮಾರ್ಣಕ್ಕೆ ಸಂಬಂಧಿಸಿದಂತೆ ಅಗತ್ಯ ಅನುದಾನ ಬಿಡುಗಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈಗಾಗಲೇ ನಿರ್ಮಿಸಿರುವ ಕಟ್ಟಡವನ್ನು ಉಳಿದ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಬಳಕೆಗೆ ಸಿದ್ಧಪಡಿಸಬೇಕಿದೆ. ಗ್ರಾಮೀಣ ಮಕ್ಕಳ ಕಲಿಕೆ, ಪೌಷ್ಟಿಕತೆ, ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದ್ದು, ಹಲವು ವರ್ಷಗಳಿಂದ ಅಪೂರ್ಣವಾಗಿರುವ ಕಟ್ಟಡ ಪೂರ್ಣಗೊಳಿಸುವುದು ಅಗತ್ಯ.
ಗ್ರಾಮದಲ್ಲಿ 5 ವರ್ಷದ ಹಿಂದೆ ಅಂಗನವಾಡಿ ಕಟ್ಟಡ ನಿಮಾರ್ಣ ಕಾರ್ಯ ಆರಂಭಿಸಿ ಬಳಿಕ ಅನುದಾನ ಇಲ್ಲದೆ ಅರ್ಧದಲ್ಲೇ ನಿಂತಿದೆ. ಸಂಬಂಧಿಸಿದ ಇಲಾಖೆಯವರು ತಕ್ಷಣ ಕ್ರಮ ಕೈಗೊಂಡು ಕಟ್ಟಡ ಪೂರ್ಣಗೊಳಿಸಬೇಕು.-ಕೋತ್ಮೀರಿ ಜೈ ಮಂಜುನಾಥ ರೈತ ಸಂಘದ ಜಿಲ್ಲಾಧ್ಯಕ್ಷ, ಕುಮದೇನಹಳ್ಳಿ
ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಅನುದಾನ ಇಲ್ಲದ ಕಾರಣ ಸ್ಥಗಿತಗೊಂಡಿದೆ. ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಿಸಿ ಪೂರ್ಣಗೊಳಿಸಲಾಗುವುದು.-ರವಿಚಂದ್ರ ನರೇಗಾ ಸಹಾಯಕ ನಿರ್ದೇಶಕ, ತಾಪಂ ಮುಳಬಾಗಿಲು
ಐದು ವರ್ಷವಾದರೂ ಪೂರ್ಣಗೊಳ್ಳದ ಕುಮದೇನಹಳ್ಳಿ ಅಂಗನವಾಡಿ ಕಟ್ಟಡ ನಿಮಾರ್ಣ ಕಾಮಗಾರಿ ಸ್ಥಗಿತ ಬಗ್ಗೆ ತಾಪಂ ಇಒ ಅವರೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ಕೋರಲಾಗುವುದು.- ಎಂ.ರಮ್ಯಾ, ಸಿಡಿಪಿಒ ಮುಳಬಾಗಿಲು
ಐದು ವರ್ಷವಾದರೂ ಪೂರ್ಣಗೊಳ್ಳದ ಕುಮದೇನಹಳ್ಳಿ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತ ಕುರಿತು ದಾಖಲೆಗಳನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು.- ಎನ್.ವಿ.ಬಾಬು, ತಾಪಂ ಇಒ ಮುಳಬಾಗಿಲು