ಮಾಜಿ ಶಾಸಕ ಮಂಜುನಾಥ್ ಗೌಡ ಸರ್ವೇ ಜಾಗಕ್ಕೆ ತೆರಳಲು ಅಧಿಕಾರಿಗಳು ಅಡ್ಡಿಪಡಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಕೋಲಾರ: ಅಗಲಕೋಟೆ ಸಮೀಪ ಸರ್ಕಾರಿ ಜಮೀನು ಸರ್ವೇ ನಡೆಸಿ ಗುರುತ್ತಿಸಿದ್ದ ಒತ್ತುವರಿಯನ್ನು ಪೊಲೀಸ್ ಬಂದೋಬಸ್ತ್ ನೊಂದಿಗೆ ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಮಾಲೂರು ತಾಲೂಕು ಟೇಕಲ್ ಹೋಬಳಿ ಅಗಲಕೋಟೆಯ ಸರ್ವೇ ನಂ.1 ರಿಂದ 67ರ ವರೆಗಿನ ಜಮೀನನ್ನು ಜೂ.29ರಂದು ಸರ್ವೇ ನಡೆಸಿದಾಗ ಕೆರೆ, ಕುಂಟೆ, ರಾಜಕಾಲುವೆ, ಕಾಲುದಾರಿ ಸೇರಿ ಇನ್ನಿತರ ಉದ್ದೇಶಕ್ಕೆ ಕಾಯ್ದಿರಿಸಬಹುದಾದ 51 ಎಕರೆ ಸರ್ಕಾರಿ ಸ್ವತ್ತನ್ನು ಗುರುತಿಸಿದ್ದರು. ಅದರಂತೆ ತಹಸೀಲ್ದಾರ್ ರೂಪಾ ತೆರವು ಕಾರ್ಯಾಚರಣೆ ನಿಗದಿಪಡಿಸಿ, ತಾಲೂಕು ಪಂಚಾಯಿತಿ ಇಒ, ಭೂ ದಾಖಲೆಗಳ ಸಹಾಯಕ ನಿರ್ದೇಶಕ, ತಾಲೂಕು ಭೂ ಮಾಪಕರು, ಪೊಲೀಸರಿಗೆ, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರಿಗೆ ನೋಟಿಸ್ ನೀಡಿ ಹಾಜರಾಗುವಂತೆ ತಿಳಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದೂರುದಾರ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಹಾಗೂ ಜಮೀನು ಮಾಲೀಕರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, ಇನ್ನೂ ಮುಂದುವರಿಯಲಿದೆ.
ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಹಾಗೂ ಮುಖಂಡ ಹೂಡಿ ವಿಜಯ್ ಕುಮಾರ್ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿದ್ದರು. ಸರ್ವೇ ಜಾಗಕ್ಕೆ ತೆರಳಲು ಪೊಲೀಸರು ನಿರ್ಬಂಧ ಹೇರಿದ್ದರು. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಹೈಡ್ರಾಮ ನಡೆಯಿತು. ಪೊಲೀಸರು, ತಹಸೀಲ್ದಾರ್ ರೂಪಾ, ತಾಪಂ ಇಒ ಕೃಷ್ಣಪ್ಪ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಂಡಿತು.
ದೂರುದಾರ ಹಾಗೂ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡಮಾತನಾಡಿ, ಅಗಲಕೋಟೆ ಭೂ ವಿವಾದವು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ, ಮೊದಲ ದಿನ ಸರ್ವೇ ಕಾರ್ಯ ದಿನಗತಿಯಲ್ಲಿ ನಡೆದಿದೆ. ಅಧಿಕಾರಿಗಳು ಸುಮಾರು 20ಕ್ಕೂ ಹೆಚ್ಚು ಜೆಸಿಬಿ ಸಮೇತ ಬಂದು ಕೆಲಸ ಮಾಡಿದರೆ 3 ದಿನದಲ್ಲಿ ಕೆಲಸ ಮುಗಿಯುತ್ತಿತ್ತು. ಕೆರೆ, ಕುಂಟೆ, ಸ್ಮಶಾನಗಳು ಮುಚ್ಚಿ ಹೋಗಿದ್ದು, ನಾಲೆಗಳು ಮಾಯವಾಗಿವೆ. ಆದರೆ ಜಾಗದಲ್ಲಿ ನೀಲಗಿರಿ, ಖಾಲಿ ಜಾಗದಲ್ಲಿ ಮಾವಿನ ಮರಗಳು ಹೇಗೆ ಬೆಳೆದವು? ಸಾರ್ವಜನಿಕರ ಆಸ್ತಿಯು ರಕ್ಷಣೆ ಮಾಡುವಾಗ ಅಧಿಕಾರಿಗಳು ಪಾರದರ್ಶಕತೆ ಕಾಪಾಡಬೇಕು. ಸಾರ್ವಜನಿಕರನ್ನು, ಮಾದ್ಯಮದವರನ್ನು ಬಿಡದೆ ಇರುವುದು ಸಹ ವಿಷಾದಕರ ಸಂಗತಿಯಾಗಿದೆ ಎಂದು ಕಿಡಿಕಾರಿದರು. ತೆರವು ಕಾರ್ಯಾಚರಣೆ ವೇಳೆ ಕೆಲ ವ್ಯಕ್ತಿಗಳು ತಹಸೀಲ್ದಾರ್‌ಗೆ ಏಕವಚನದಲ್ಲಿ ಮಾತನಾಡಿದ್ದಾರೆ.
ಯಾವ ರೀತಿ ಕ್ರಮತೆಗೆದುಕೊಳ್ಳುತ್ತಾರೊ ನೋಡಬೇಕು. ಒತ್ತುವರಿ ಆಗಿರುವುದಕ್ಕೆ ಸಂಪೂರ್ಣ ದಾಖಲೆಗಳು ಇವೆ. ಇಷ್ಟು ಇದ್ದರೂ ಸಹ ಎಲ್ಲಿ ಒತ್ತುವರಿ ಆಗಿದೆ ಎಂದು ಪ್ರಶ್ನಿಸಿದರೆ ಏನರ್ಥ? ಮಾರಮ್ಮನ ಮೇಲೆ ಆಣೆ ಮಾಡಿ ಹೇಳ್ತಿರಾ?. ಇದರ ಮಾಲೀಕರು, ಬೋಕರ್ ಯಾರು, ಪಹಣಿದಾರರು ಬಂದು ಆಣೆ ಮಾಡ್ತಾರಾ ಎಂದು ಸವಾಲು ಹಾಕಿದರು.
ಅಗಲಕೋಟೆಯ ಸುಮಾರು 51.26 ಎಕರೆ ಜಾಗವನ್ನು ಶ್ರೀನಿವಾಸ ಎಂಬುವರು ಶೈಕ್ಷಣಿಕ ಇಲಾಖೆಗೆ ದಾನ ಮಾಡಿರುವ ವಿಚಾರವು ಮುನ್ನೆಲೆಗೆ ಬಂದಿತ್ತು. ಈ ಜಾಗ ರಕ್ಷಣೆ ಮಾಡಬೇಕು ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಜಾಗವು ಉದ್ಯಮಿ ಗಂಗಾಧರಯ್ಯ ಎಂಬುವರಿಗೆ ಸೇರಿದಾಗಿದ್ದು, ಗ್ರಾಮಸ್ಥರಿಂದ ಖರೀದಿ ಮಾಡಿದ್ದಾರೆ. ಜಮೀನಿನಲ್ಲಿ ರೈತರ ಜಾಗವೂ ಇದೆ, ಯಾರನ್ನೂ ಒಕ್ಕಲೆಬ್ಬಿಸಬಾರದು ಎಂಬುದು ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ವಾದವಾಗಿದೆ. ಈ ಇಬ್ಬರ ನಡುವೆ ಶಾಸಕ ಕೆ.ವೈ.ನಂಜೇಗೌಡ ಅವರು ಸರ್ಕಾರಿ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಂಡು, ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಎಸಿ ರೇಣುಕಾ ಪ್ರಸಾದ್ ದಿಲೀಪ್ ಜಂಬಗಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ ಬೆನ್ನಲೇ ಕಂದಾಯ ಇಲಾಖೆಯ ಕಾರ್ಯದರ್ಶಿ ಸಹ ಎಸ್ ಐಟಿ ರಚನೆ ಮಾಡಿದ್ದಾರೆ.
ಒತ್ತುವರಿ ಪದ ಬಳಕೆಗೆ ಆಕ್ಷೇಪ
ಅಗಲಕೋಟೆ ಗ್ರಾಮದ ಸರ್ವೇ 1ರಿಂದ 67 ಜಮೀನಿನ ನಕಾಶೆಯಂತೆ ಸರ್ವೇ ನಂ.1ರಲ್ಲಿ ಸರ್ಕಾರಿ ಕೆರೆ 4.6 ಎಕರೆ, ಸರ್ವೇ ನಂ.46ರಲ್ಲಿ ಕೆರೆ 25.38 ಎಕರೆ, ಸರ್ವೇ ನಂ.66ರಲ್ಲಿ ಕೆರೆ ಮುಳುಗಡೆ ಪ್ರದೇಶ 5.39 ಎಕರೆ ಸರ್ವೇ ನಂ 42ರಲ್ಲಿ ಗಲ್ಲುಗುಟ್ಟೆ 24 ಗುಂಟೆ, ಸರ್ವೇ 44ರಲ್ಲಿ ಸರ್ಕಾರಿ ಖರಾಬು 2.2 ಎಕರೆ, ಬಂಡಿದಾರಿ 14 ಗುಂಟೆ, ಹದ್ದಿ ಹಿಡಿದ ದಾರಿ 2.1 ಎಕರೆ, ಸಿಮೇಗೆ ಹಿಡಿದ ಮಾರ್ಗ 22 ಗುಂಟೆ, ಹಳ್ಳ 11 ಗುಂಟೆ, ಹದ್ದಿಗೆ ಹಳ್ಳ 2.25 ಎಕರೆ, ಗ್ರಾಮಠಾಣಾ 4.27 ಜಾಗವನ್ನು ಸರ್ವೇ ಕಾರ್ಯದಲ್ಲಿ ತಾಲೂಕು ಭೂ ಮಾಪಕರು, ಕಂದಾಯ ಇಲಾಖೆ ಸಿಬ್ಬಂದಿ ಗುರುತಿಸಲ್ಪಟ್ಟ ಸರ್ಕಾರಿ ಖರಾಬು ಹದ್ದುಬಸ್ತು ಗುರುತಿಸಿದ್ದು, ಈ ಜಾಗದಲ್ಲಿ ಮರಗಳಿದ್ದು ನಿಯಮಾನುಸರ ತೆರವುಗೊಳಿಸಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಎ ಸುಧೀಂದ್ರ ಓದಿ ತಿಳಿಸಿದರು. ಈ ವೇಳೆ ಮಹಜರು ವರದಿಯಲ್ಲಿ ಒತ್ತುವರಿ ಪದ ಬಳಕೆ ಮಾಡಲಾಗಿದೆ ಎಂದು ಹೂಡಿ ವಿಜಯ್ ಕುಮಾರ್ ಇತರರು ಆಕ್ಷೇಪ ವ್ಯಕ್ತಪಡಿಸಿ ಮತ್ತೊಮ್ಮೆ ಓದಿ ಹೇಳುವಂತೆ ಪಟ್ಟು ಹಿಡಿದರು.
ಅಗಲಕೋಟೆ ಸಮೀಪದ 308 ಎಕರೆ ಜಮೀನಿನ ಪೈಕಿ 250 ಎಕರೆ ಹಿಡುವಳಿ ಜಮೀನಾಗಿದ್ದು, ಎಷ್ಟು ಭಾರಿ ಬೇಕಾದರೂ ತನಿಖೆ ಮಾಡಲಿ, ಇದರಲ್ಲಿ ಒಂದು ಎಕರೆ ಒತ್ತುವರಿ ಕಂಡು ಬಂದರೂ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒತ್ತುವರಿ ಕಂಡು ಬಂದಿಲ್ಲ ಎಂದಾದರೆ, ಅರ್ಜಿದಾರರು ಏನು ಮಾಡ್ತಾರೆ?.
- ಹೂಡಿ ವಿಜಯ್ ಕುಮಾರ್ ಜೆಡಿಎಸ್ ಮುಖಂಡ