ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಈಗಾಗಲೇ ನಿರ್ಮಾಣ ಮಾಡಲಾಗಿರುವ ವೀರಗಲ್ಲು ಪಾರ್ಕ್.
ಕಿರುವಾರ ಎಸ್. ಸುದರ್ಶನ್ ಕೋಲಾರ
ಚೋಳರು, ಅರಸರು ಆಳ್ವಿಕೆ ನಡೆಸಿದ ಜಿಲ್ಲೆಯ ಐತಿಹಾಸಿಕ ತಾಣಗಳ ಪುನಶ್ವೇತನಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮುಂದಡಿ ಇಟ್ಟಿದೆ.
ಜಿಲ್ಲೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಐತಿಹಾಸಿಕವಾಗಿ ಶ್ರೀಮಂತ ಪರಂಪರೆ ಹೊಂದಿದೆ. ರಾಜ ಮನೆತನದವರು ಆಳ್ವಿಕೆ ನಡೆಸಿದ್ದಾರೆ ಎಂಬುದಕ್ಕೆ ಇರುವ ಸಾಕ್ಷಿಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಸಂರಕ್ಷಣೆಗೆ ಮುಂದಾಗಿದೆ.
ವೀರಗಲ್ಲುಗಳು, ಸ್ಮಾರಕಗಳು ಮತ್ತು ಶಾಸನಗಳು ಪ್ರಾಚೀನ ವೀರರ ತ್ಯಾಗವನ್ನು ಸ್ಮರಿಸುವ ಐತಿಹಾಸಿಕ ಅವಶೇಷಗಳಾಗಿದ್ದು, ಇವುಗಳನ್ನು ಸಂರಕ್ಷಿಸುವುದು ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆ ಉಳಿಸುವ ಮುಖ್ಯ ಉದ್ದೇಶವಾಗಿದೆ.
ಇವುಗಳನ್ನು ರಕ್ಷಿಸಲು ಒತ್ತುವರಿ ತೆರವು, ಸ್ವಚ್ಛತಾ ಕಾರ್ಯ ಮತ್ತು ಶಾಸನ ತಜ್ಞರ ಅಧ್ಯಯನಗಳನ್ನು ನಡೆಸುವುದು, ಮಾಹಿತಿ ಸಂಗ್ರಹಿಸುವುದು, ಕಾಲೇಜಿನ ಇತಿಹಾಸ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಒಳಗೊಳ್ಳುವಂತೆ ಮಾಡುವಲ್ಲಿ ಡಾ.ಎಂ.ಆರ್.ರವಿ ಕ್ರಮವಹಿಸಿದ್ದಾರೆ.
ಕೋಲಾರಮ್ಮ ದೇವಾಲಯ, ಸೋಮೇಶ್ವರ, ಕುರುಡುಮಲೆ ಗಣಪತಿ, ಅವಣಿ ಬೆಟ್ಟ, ಕೋಲದೇವಿ ಆಂಜನೇಯಸ್ವಾಮಿ ದೇವಾಲಯ, ವಿರೂಪಾಕ್ಷಸ್ವಾಮಿ, ಬೂದಿಕೋಟೆ, ಬಂಗಾರಪೇಟೆ, ಕೆಜಿಎಫ್, ಮಾಲೂರು. ಶ್ರೀನಿವಾಸಪುರ ವ್ಯಾಪ್ತಿಯಲ್ಲೂ ಸಹ ಅನೇಕ ಪುರಾವೆಗಳಿದ್ದು. ಪುರಾತತ್ವ ಇಲಾಖೆ, ಮುಜರಾಯಿ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಹಾಗೂ ಸಮುದಾಯದ ಸಹ ಭಾಗಿತ್ವದಲ್ಲಿ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ.
ಈಗಾಗಲೇ ಜಿಪಂನಿಂದ ಆರಾಭಿಕೊತ್ತನೂರು, ಬಂಗಾರಪೇಟೆ ತಾಲೂಕಿನ ಹುನಕುಂದ, ಮುಳಬಾಗಿಲು ತಾಲೂಕಿನ ಜೋಗಲಕಾಪ್ಪಿಯಲ್ಲಿ ವೀರಗಲ್ಲು ಉದ್ಯಾನ ನಿರ್ಮಾಣ ಮಾಡಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.
* ಸಮುದಾಯಕ್ಕೆ ಆಸಕ್ತಿ ಮುಖ್ಯ
ಶಾಸನ ಮತ್ತು ವೀರಗಲ್ಲುಗಳ ಸಂರಕ್ಷಣೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಮುಂದಾಗಿ ಈ ಐತಿಹಾಸಿಕ ಸಂಪತ್ತನ್ನು ಉಳಿಸಬೇಕಾಗಿದೆ. ಈಗಿನ ಅಧಿಕಾರಿಗಳಿಗೆ ಇವುಗಳ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ತಹಸೀಲ್ದಾರ್, ತಾಪಂ ಇಒ, ಗ್ರಾಪಂ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವುದು. ಅವರ ಪಾತ್ರ, ಜವಾಬ್ದಾರಿ ಏನು ಎಂಬುದರ ಬಗ್ಗೆ ಅರಿವು ಮೂಡಿಸಿ ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ರಕ್ಷಣೆ ಮಾಡಲು ಕ್ರಮವಹಿಸಲು ಮುಂದಾಗಿದೆ. ಜತೆಗೆ ಸಮುದಾಯ ಸಹ ಭಾಗಿತ್ವ ಈ ಕಾರ್ಯಕ್ಕೆ ಬಹಳ ಮುಖ್ಯವಾಗಿದೆ.
* ಜ.23ಕ್ಕೆ ವಿವಿಧ ಇಲಾಖಾಧಿಕಾರಿಗಳ ಸಭೆ
ರಾಜಮನೆತನದ ಆಳ್ವಿಕೆ ಜತೆಗೆ ಬ್ರಿಟಿಷ್ ಆಳ್ವಿಕೆಯ ಸಾಕ್ಷಿಗಳೂ ಈ ನೆಲದಲ್ಲಿವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಜಿಲ್ಲಾಮಟ್ಟದ ಮ್ಯೂಸಿಯಂ ಇಲ್ಲಿಲ್ಲ. ಪರಂಪರೆಯ ರಕ್ಷಣೆಗೆ ಜತೆಗೆ ಮ್ಯೂಸಿಯಂ ಸ್ಥಾಪನೆ ಆಗಬೇಕಾಗಿದೆ. ಇದಕ್ಕೆ ಪೂರಕವಾಗಿ ಜ.23ರಂದು ಮುಜರಾಯಿ, ಪುರಾತತ್ವ ಇಲಾಖೆ, ಕಂದಾಯ, ಪ್ರವಾಸೋದ್ಯಮ ಶೇ ಷ ಇಲಾಖೆ ಅಧಿಕಾರಿಗಳ ಸಭೆ ನಿಗದಿಪಡಿಸಲಾಗಿದೆ. ವೀರಗಲ್ಲು, ಸ್ಮಾರಕಗಳ ಗುರುತಿಸಿ ರಕ್ಷಣೆ ಮಾಡುವ ಕುರಿತು ಚರ್ಚೆ ನಡೆಯಲಿದೆ.
ಇತಿಹಾಸ ಎಂಬುದು ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಹಿಂದಿನ ಹಾಗೂ ಮುಂದಿನ ಆಗು-ಹೋಗುಗಳನ್ನು ತಿಳಿಸುತ್ತದೆ. ಶ್ರೀಮಂತ ಪರಂಪರೆ ಹೊಂದಿರುವ ಜಿಲ್ಲೆಗೆಯಲ್ಲಿನ ಐತಿಹಾಸಿಕ, ಸಾಕ್ಷಿಗಳನ್ನು ಉಳಿಸಿ ರಕ್ಷಿಸಲು ಕ್ರಮವಹಿಸಲಾಗುವುದು.
- ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ
ಜಿಲ್ಲೆಯಲ್ಲಿ ಅನೇಕ ಪುರಾತನ ವೀರಗಲ್ಲು, ಸ್ಮಾರಕ, ಶಾಸನಗಳು ಇವೆ. ಪರಂಪರೆ ಉಳಿಸಲು ಇವುಗಳನ್ನು ರಕ್ಷಣೆ ಮಾಡಬೇಕಿದೆ. ಜತೆಗೆ ಜಿಲ್ಲಾ ಮ್ಯೂಸಿಯಂ ಸಹ ಆಗಬೇಕಾಗಿದೆ.
- ಪ್ರೊ.ಶಿವಪ್ಪ ಅರಿವು ಮುಖ್ಯಸ್ಥ, ಇತಿಹಾಸ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರ