ಮುಳಬಾಗಿಲು: ಜ್ಞಾನದ ಬೆಳಕು ಚೆಲ್ಲಬೇಕಾದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವ ದಾರಿಯೇ ದುರ್ವಾಸನೆಯಿಂದ ಕೂಡಿದ್ದರೆ, ಓದುಗರು ಲೈಬ್ರರಿಗೆ ಹೋಗುವುದಾದರೂ ಹೇಗೆ?, ಇದು ನಗರದ ಸಾರ್ವಜನಿಕ ಗ್ರಂಥಾಲಯದ ಪ್ರಸ್ತುತ ದುಸ್ಥಿತಿ. ತಾಲೂಕು ಕೇಂದ್ರದಲ್ಲಿರುವ ವಾಚನಾಲಯಕ್ಕೆ ಸುಗಮ ಪ್ರವೇಶ, ಸ್ವಚ್ಛ ಪರಿಸರ ಹಾಗೂ ಅಗತ್ಯ ಸೌಕರ್ಯಗಳಿಲ್ಲದೆ ಓದುಗರು ಪರದಾಡುವಂತಾಗಿದೆ.
ನಗರದ ಡಿವಿಜಿ ಕನ್ನಡ ಭವನದ ಹಿಂಭಾಗದಲ್ಲಿರುವ ಚಿಕ್ಕ ಕಟ್ಟಡದಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದ್ದು, ದಿನಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳು, ಸಾಹಿತ್ಯ ಕೃತಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಓದಲು ವಿದ್ಯಾರ್ಥಿಗಳು, ಯುವಕರು, ಹಿರಿಯ ನಾಗರಿಕರು ಬರುತ್ತಾರೆ. ಆದರೆ ಗ್ರಂಥಾಲಯ ತಲುಪಲು ಸರಿಯಾದ ಮಾರ್ಗವಿಲ್ಲದಿರುವುದು ಓದುಗರಿಗೆ ದೊಡ್ಡ ಸಮಸ್ಯೆಯಾಗಿದೆ.
ದುರ್ನಾತ ಬೀರುತ್ತಿರುವ ಕಿರಿದಾದ ದಾರಿಗಳು: ಗ್ರಂಥಾಲಯಕ್ಕೆ ತೆರಳಲು ಬಾಲಕಿಯರ ಕಾಲೇಜು ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನಡುವಿನ ಕಿರಿದಾದ ಮಾರ್ಗ ಸೇರಿ ಸಣ್ಣ ದಾರಿಗಳನ್ನು ಅವಲಂಬಿಸಬೇಕಾಗಿದೆ. ಈ ಮಾರ್ಗಗಳ ಬದಿಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶ ಗಬ್ಬುನಾರುತ್ತಿದೆ. ಗ್ರಂಥಾಲಯಕ್ಕೆ ಹೋಗುವ ಮುನ್ನವೇ ದುರ್ವಾಸನೆ ಓದುಗರನ್ನು ಸ್ವಾಗತಿಸುವಂತಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರೂ ಇದೇ ಮಾರ್ಗದಲ್ಲಿ ಸಂಚರಿಸಬೇಕಾಗಿರುವುದರಿಂದ ಅನೈರ್ಮಲ್ಯದ ವಾತಾವರಣ ತಲೆನೋವಾಗಿ ಪರಿಣಮಿಸಿದೆ.
ಗಾಳಿ, ಬೆಳಕಿಗೂ ಬರ: ಗ್ರಂಥಾಲಯದ ಕಟ್ಟಡವೂ ಕಿರಿದಾಗಿದ್ದು, ಸಮರ್ಪಕ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲವಾಗಿದೆ. ಓದುಗರು ನೆಮ್ಮದಿಯಿಂದ ಕುಳಿತು ಅಧ್ಯಯನ ಮಾಡಲು ಅಗತ್ಯ ವಾತಾವರಣವೂ ಇಲ್ಲದಂತಾಗಿದೆ. ಒಂದೆಡೆ ಕಟ್ಟಡದ ಅನಾನುಕೂಲ, ಮತ್ತೊಂದೆಡೆ ಪ್ರವೇಶ ಮಾರ್ಗದ ಅವ್ಯವಸ್ಥೆ, ಇವೆಲ್ಲದರ ನಡುವೆ ಓದುವ ಆಸಕ್ತಿಯಿಂದ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಂಥಾಲಯದ ಇಂತಹ ಪರಿಸ್ಥಿತಿಯಿಂದ ಓದುಗರ ಸಂಖ್ಯೆ ಕುಸಿಯುವ ಆತಂಕ ಎದುರಾಗಿದೆ.
ಗೇಟ್ ತೆರೆಯಲು ಮನವಿ: ಡಿವಿಜಿ ಕನ್ನಡ ಭವನದ ಮುಂಭಾಗದ ಗೇಟ್ಗೆ ಬೀಗ ಹಾಕಿರುವುದರಿಂದ ಗ್ರಂಥಾಲಯಕ್ಕೆ ನೇರವಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಗೇಟ್ ತೆರೆಯುವ ಮೂಲಕ ಸುಗಮ ಪ್ರವೇಶ ಕಲ್ಪಿಸಿದರೆ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ಓದುಗರ ಒತ್ತಾಯ.
ವಿಶಾಲ ಕಟ್ಟಡಕ್ಕೆ ಆಗ್ರಹ: ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳನ್ನು ಸಂಗ್ರಹಿಸಿಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜ್ಞಾನ ದೇಗುಲ. ಇಂತಹ ಮಹತ್ವದ ಸಾರ್ವಜನಿಕ ಸೌಲಭ್ಯಕ್ಕೆ ಕನಿಷ್ಠ ಮೂಲಸೌಕರ್ಯ ಕಲ್ಪಿಸದಿರುವುದು ವಿಪರ್ಯಾಸ. ತಾಲೂಕು, ಜಿಲ್ಲಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಂಥಾಲಯಕ್ಕೆ ತಕ್ಷಣ ಸುಗಮ ಪ್ರವೇಶ ಕಲ್ಪಿಸುವುದರ ಜತೆಗೆ ವಿಶಾಲ, ಸ್ವಚ್ಛ ಹಾಗೂ ಉತ್ತಮ ಗಾಳಿ&-ಬೆಳಕಿನ ವ್ಯವಸ್ಥೆಯುಳ್ಳ ಕಟ್ಟಡಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯ ವ್ಯವಸ್ಥೆ ಸರಿ ಮಾಡಲು ಈಗಾಗಲೇ ತಾಲೂಕು, ಜಿಲ್ಲಾಡಳಿತ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಪ್ರಯೋಜನವಾಗಿಲ್ಲ. ಈ ಸುಂದುಗಳಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಗ್ರಂಥಾಲಯಕ್ಕೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.- ಕನ್ನಿಕಾ ಪರಮೇಶ್ವರಿ, ವಕೀಲೆ ಹಾಗೂ ಲೇಖಕಿ, ಮುಳಬಾಗಿಲು.
ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯ ವ್ಯವಸ್ಥೆ ಸರಿ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು, ತಾಲೂಕು ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು.- ಕೆ.ಮಧುಸೂದನ್, ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಮುಳಬಾಗಿಲು