ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಗ್ರಾ.ಪಂಗೆ ಭೇಟಿ ನೀಡಿದ್ದರು.
ಕೋಲಾರ: ಶ್ರೀನಿವಾಸಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿನ ಅಧಿಕಾರಿ, ಸಿಬ್ಬಂದಿಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ವಿವಿಧ ಗ್ರಾಪಂಗಳಿಗೆ ಸಂಬಂಧಿಸಿದಂತೆ 23 ಸ್ವಯಂ ಪ್ರಕರಣ ದಾಖಲಿಸಿದ್ದು, 169 ಮಂದಿ ಎದುರುದಾರರಾಗಿ ಮಾಡಲಾಗಿದೆ.
ಸಾರ್ವಜನಿಕರಿಂದ ದೂರು ಸಲ್ಲಿಕೆಯಾದ ಮೇರೆಗೆ ಇತ್ತೀಚೆಗೆ ಶ್ರೀನಿವಾಸಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ 'ಭೇಟಿ ವೇಳೆ ನೀಡಿ ಪರಿಶೀಲಿಸಿದ್ದರು.
ಸೆ.30, ಅ.4 ಹಾಗೂ ಡಿ.2ರಂದು ಶ್ರೀನಿವಾಸಪುರ ತಾಲೂಕು ದಳಸನೂರು, ಮಾಸ್ತೇನಹಳ್ಳಿ, ಗೌನಿಪಲ್ಲಿ, ಜಿ.ತಿಮ್ಮಸಂದ್ರ, ಅರಿಕುಂಟೆ, ಭೈರಗಾನಪಲ್ಲಿ, ರಾಯಲ್ಪಾಡು, ಯರಂವಾರಿಪಲ್ಲಿ, ಕೂರಿಗೇಪಲ್ಲಿ, ಮುದಿಮಡಗು, ಪುಲಗೂರ ಕೋಟಿ, ಸೋಮಯಾಜಲಹಳ್ಳಿ, ತಾಡಿಗೋಳ್, ಲಕ್ಷ್ಮೀಸಾಗರ, ಯಲ್ಲೂರು, ಮುತಕಪಲ್ಲಿ, ಕೊಳತೂರು, ಲಕ್ಷ್ಮೀಪುರ, ಅಡ್ಡಗಲ್, ರೋಣೂರು, ಹೊದಲಿ ಗ್ರಾಪಂಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದಾಗ ಹಲವು ಲೋಪ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಲೋಪ ಎಸಗಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಡೆಟಾ ಎಂಟ್ರಿ ಅಪರೇಟರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತಾಪಂ ಇಒ ಸೇರಿ 169 ಮಂದಿ ವಿರುದ್ಧ 23 ಪ್ರಕರಣ ದಾಖಲಿಸಲಾಗಿದೆ. ಎಲ್ಲ ಪ್ರಕರಣದಲ್ಲೂ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಸ್.ಸುರೇಶ್, ಕಿರಿಯ ಅಭಿಯಂತ ಕೃಷ್ಣಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸರ್ವೇಶ್ ಎಲ್ಲ ಪ್ರಕರಣಗಳಲ್ಲೂ ಎದುರುದಾರರಾಗಿದ್ದಾರೆ.
ಕೆರೆ ಒತ್ತುವರಿ ತೆರವುಗೊಳಿಸದಿರುವುದು, ತೆರಿಗೆ ವಸೂಲಿಗೆ ನಿರ್ಲಕ್ಷ್ಯ, ಹಣ ದುರುಪಯೋಗ, ಗ್ರಾಪಂ ಸ್ವತ್ತನ್ನು ವಶಪಡಿಸಿಕೊಳ್ಳದಿರುವುದು, ಕಾಮಗಾರಿ ಮಾಡದೆ ಬಿಲ್‌ಡ್ರಾ, ಇ ಸ್ವತ್ತು ವಿತರಣೆಗೆ ರಿಜಿಸ್ಟ್ರಾರ್ ನಿರ್ವಹಣೆಗೆ ನಿರ್ಲಕ್ಷ್ಯ, ಚಲನವಲನ ಪುಸ್ತಕ ನಿರ್ವಹಣೆ, ಬೀದಿದೀಪ ಅಸಮರ್ಪಕ ನಿರ್ವಹಣೆ, ಕುಡಿಯುವ ನೀರಿನ ಘಟಕಗಳ ರಿಪೇರಿಗೆ ಅಸಡ್ಡೆ, ಬೋರ್ ವೇಲ್ ರಿಪೇರಿಗೆ ಹಣ ಡ್ರಾ ಮಾಡಿಯೂ ಕೆಲಸ ಮಾಡದಿರುವುದು, ನರೇಗಾದಲ್ಲಿ ಅಕ್ರಮ, ಮಿತಿ ಮೀರಿ ಬ್ಯಾಂಕ್ ವಹಿವಾಟು, ಜೆಜೆಎಂ ಅನುದಾನ ದುರುಪಯೋಗ ಸೇರಿ ಅನೇಕ ಲೋಪ ಕಂಡು ಬಂದಿದ್ದವು.