ಜಿಲ್ಲೆ

ಕೋಲಾರ ನಗರಸಭೆ ಪಾರುಪತ್ಯಕ್ಕೆ ಕಾಂಗ್ರೆಸ್-ಜೆಡಿಎಸ್ ಕಸರತ್ತು

Kolar

ಕೋಲಾರ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲು ನಿಗದಿಪಡಿಸಿದ ಬೆನ್ನಲ್ಲೇ ಅಧಿಕಾರ ಹಿಡಿಯಲು ಕಾಂಗ್ರೆಸ್, ಜೆಡಿಎಸ್ ರಾಜಕೀಯ ಲೆಕ್ಕಾಚಾರಕ್ಕೆ ಇಳಿದಿವೆ.

ಅಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 35 ಸದಸ್ಯರನ್ನು ಒಳಗೊಂಡಿರುವ ನಗರಸಭೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆಯಾದರೂ ಬಹುಮತದ ಕೊರತೆ ಎದುರಿಸುತ್ತಿದೆ. ಜೆಡಿಎಸ್ 8, ಎಸ್‌ಡಿಪಿಐ 4, ಬಿಜೆಪಿ 3 ಹಾಗೂ ಪಕ್ಷೇತರರು 8 ಮಂದಿ ಆಯ್ಕೆಯಾಗಿದ್ದು, ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷೇತರರನ್ನು ಓಲೈಸುವುದು ಅನಿವಾರ್ಯವಾಗಿದೆ.

ಇದೇ ಮೊದಲ ಬಾರಿಗೆ 4 ಸ್ಥಾನ ಗೆದ್ದಿರುವ ಎಸ್‌ಡಿಪಿಐ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರ್ಣಾಯಕವಾಗಲಿದೆ. ಮುಸ್ಲಿಂ ಸಮುದಾಯದ 15 ಜನರು ಆಯ್ಕೆಯಾಗಿದ್ದು, ಈ ಪೈಕಿ ಬಿಸಿಎಂ(ಎ) ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿರುವುದರಿಂದ ಅಧಿಕಾರ ಹಿಡಿಯಲು ಈ ಸಮುದಾಯದ ಮುಖಂಡರು ಕಾಂಗ್ರೆಸ್, ಜೆಡಿಎಸ್ ಹಾಗೂ ಎಡಿಪಿಐಗೆ ಗಾಳ ಬೀಸಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಪ್ರತಿಷ್ಠೆ: ಕಾಂಗ್ರೆಸ್ 12 ಸ್ಥಾನ ಗೆದ್ದಿದ್ದರೂ ಬಹುಮತಕ್ಕಾಗಿ ಇನ್ನೂ 7 ಸದಸ್ಯರನ್ನು ಒಗ್ಗೂಡಿಸುವುದು ಸವಾಲಾಗಿದೆ. ಜೆಡಿಎಸ್ ಮತ್ತು ಎಸ್‌ಡಿಪಿಐ ಹಾಗೂ ಪಕ್ಷೇತರರಾಗಿ ಗೆದ್ದಿರುವ ಸದಸ್ಯರನ್ನು ತಮ್ಮತ್ತ ಸೆಳೆಯಲು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ತಂತ್ರ ಫಲಿಸಲು ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಸಹಕಾರ ಅತಿ ಮುಖ್ಯ. ಆದರೆ ಇವರಿಬ್ಬರ ಸಂಬಂಧ ಹಳಸಿರುವುದರಿಂದ ಗುರಿ ಸಾಧಿಸುವುದು ಸುಲಭದ ಮಾತಲ್ಲ.

ನಗರಸಭೆಯಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಅಖಾಡಕ್ಕೆ ಇಳಿದಿರುವ ಮುನಿಯಪ್ಪ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ರಾಜಕೀಯ ಶತ್ರುಗಳನ್ನು ಮಿತ್ರರನ್ನಾಗಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಮಂಡಿಯೂರುವುದು ಅನಿವಾರ್ಯವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸು ಕೊಡುತ್ತದೋ ನೋಡಬೇಕು.

ನಗರಸಭೆಯಲ್ಲಿ ಮೇಲುಗೈ ಸಾಧಿಸಲು ಅಪೇಕ್ಷಿಸಿರುವ ಮುನಿಯಪ್ಪ, ಎಂಎಲ್‌ಸಿ ನಜೀರ್ ಅಹಮ್ಮದ್ ಸೇರಿ ವಿರೋಧಿ ಬಣದವರೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಕೆಪಿಸಿಸಿಗೆ ಹೊಸದಾಗಿ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹಮ್ಮದ್ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇತ್ತ ಶಾಸಕ ಕೆ.ಶ್ರೀನಿವಾಸಗೌಡ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದು ನಗರಸಭೆಯಲ್ಲಿ ಪಾರುಪತ್ಯಕ್ಕೆ ಮುಂದಾಗಿದ್ದು ಬಹುಮತಕ್ಕಾಗಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ. 8 ಸದಸ್ಯರನ್ನು ಹೊಂದಿರುವ ಜೆಡಿಎಸ್‌ಗೆ ಅಧಿಕಾರ ಹಿಡಿಯಲು ಇನ್ನೂ 11 ಸದಸ್ಯರ ಅವಶ್ಯಕತೆಯಿದೆ. ಎಸ್‌ಡಿಪಿಐ 4, ಬಿಜೆಪಿ 3 ಸದಸ್ಯರಲ್ಲದೆ ಕನಿಷ್ಠ 4 ಪಕ್ಷೇರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದು, ಕೈ ಎಂಎಲ್‌ಸಿ ನಜೀರ್ ಅಹಮ್ಮದ್ ತಮಗೂ ಆಪ್ತರಾಗಿರುವುದರಿಂದ ಇವರ ಬೆಂಬಲಕ್ಕಾಗಿ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಬಿಜೆಪಿ ಬೆಂಬಲ ಅನಿವಾರ್ಯ: ಕೇವಲ 3 ಸ್ಥಾನ ಗೆದ್ದಿರುವ ಬಿಜೆಪಿ ಅಧಿಕಾರ ಹಿಡಿಯವುದು ಸುಲಭದ ಮಾತಲ್ಲ, ಆದರೆ ಯಾರೇ ಅಧಿಕಾರ ಹಿಡಿಯಲು ಬಿಜೆಪಿ ಬೆಂಬಲ ಪಡೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಸದ ಎಸ್.ಮುನಿಸ್ವಾಮಿ ನಗರಸಭೆಯಲ್ಲಿ ಹಿಡಿತ ಸಾಧಿಸಲು ಜೆಡಿಎಸ್‌ಗೆ ಬೆಂಬಲ ನೀಡುವ ಸಾಧ್ಯತೆಗಳಿವೆ. ಬಿಸಿಎಂ(ಎ)ಗೆ ಸೇರಿದ ಮಹಿಳಾ ಸದಸ್ಯರಲ್ಲಿ ಕೆಲವರು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು, ಗಾಡ್‌ಫಾದರ್ ಮೂಲಕ ಕುರ್ಚಿ ಏರಲು ಪ್ರಯತ್ನಿಸುತ್ತಿದ್ದಾರೆ. ಯಾರಿಗೆ ಕೋಲಾರಮ್ಮನ ಆಶೀರ್ವಾದ ಸಿಗುತ್ತದೋ ನೋಡಬೇಕು.