ಜಿಲ್ಲೆ

ಎಚ್ಚರವಹಿಸಿ ಕೆಲಸ ಮಾಡದಿದ್ದರೆ ನಾನು ತಲೆ ತಗ್ಗಿಸಬೇಕಾಗುತ್ತದೆ

Kolar

ಕೋಲಾರ: ಡಿಸಿಸಿ ಬ್ಯಾಂಕಿನ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ, ಸಣ್ಣ ತಪ್ಪು ಕಂಡರೂ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾದು ಕುಳಿತಿದ್ದಾರೆ. ಬ್ಯಾಂಕಿನ ಹಾಗೂ ಎಸ್‌ಎಫ್‌ಸಿಎಸ್‌ಗಳ ಸಿಬ್ಬಂದಿ ಎಚ್ಚರವಹಿಸಿ ಕೆಲಸ ಮಾಡದಿದ್ದರೆ ನಾನು ತಲೆ ತಗ್ಗಿಸಬೇಕಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ನಗರದ ಜಿಲ್ಲಾ ಸಹಕಾರ ಭವನದಲ್ಲಿ ಶನಿವಾರ ಬ್ಯಾಂಕಿನ ವಿವಿಧ ತಾಲೂಕುಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬ್ಯಾಂಕಿನಲ್ಲಿರುವುದು ಸಾರ್ವಜನಿಕರ ಹಣ, ನಮ್ಮ ಸ್ವಂತ ಹಣದಿಂದ ಬ್ಯಾಂಕ್ ನಡೆಸುತ್ತಿಲ್ಲ, ಅಧಿಕಾರಿಗಳು ಮತ್ತು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡದಿದ್ದರೆ ನೀವು ಮಾಡುವ ತಪ್ಪಿಗೆ ನಮ್ಮ ಮರ್ಯಾದೆ ಬೀದಿಗೆ ಬರುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಜನರ ಹಣದಲ್ಲಿ ಸಂಬಳ ಪಡೆಯುತ್ತಿರುವ ನೀವು ಬ್ಯಾಂಕಿಗೆ ಮೋಸ ಮಾಡಿದರೆ ಉದ್ಧಾರವಾಗಲ್ಲ, ಅದೇ ರೀತಿ ಬ್ಯಾಂಕಿನ ಬಗ್ಗೆ ಸತ್ಯಾಂಶ ತಿಳಿಯದೆ ಆರೋಪ ಮಾಡಿದರೆ ದೇವರು ಕ್ಷಮಿಸಲ್ಲ ಎಂದು ಎಚ್ಚರಿಸಿದರು.

ಸೊಸೈಟಿಗಳ ಆಡಿಟ್ ಜತೆಗೆ ಗಣಕೀಕರಣ ಕೆಲಸ ತ್ವರಿತವಾಗಿ ನಡೆಯಬೇಕು. ನಾನು ನೀಡಿದ ಗುರಿಯನ್ನು ಶೇ.90 ಸೊಸೈಟಿಗಳು ತಲುಪಿದ್ದು ಉಳಿದವರು ಆ.20ರೊಳಗೆ ಆಡಿಟ್ ಮುಗಿಸಿ ಕಡತಗಳನ್ನು ಬ್ಯಾಂಕಿಗೆ ತಲುಪಿಸಬೇಕೆಂದು ಸೊಸೈಟಿಗಳ ಸಿಒಗಳಿಗೆ ಮತ್ತು ಸಿಬ್ಬಂದಿಗೆ ತಾಕೀತು ಮಾಡಿದರು.

ಬ್ಯಾಂಕಿನ ಬಗ್ಗೆ ಮತ್ತು ನನ್ನ ಬಗ್ಗೆ ನಮ್ಮವರೇ ಕೆಲವರು ಸರ್ಕಾರಕ್ಕೆ ಇಲ್ಲಸಲ್ಲದ ದೂರು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸೊಸೈಟಿಗಳಲ್ಲಿ ಆಗುವ ತಪ್ಪಿಗೆ ನಾ ಹೇಗೆ ಹೊಣೆಯಾಗಲಿ. ಇನ್ನು ಮುಂದೆ ಲೆಕ್ಕ-ಪತ್ರಗಳ ವಿಚಾರದಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದರು.

ಎರಡೂ ಜಿಲ್ಲೆಗಳ ಒಟ್ಟು 191 ಸೊಸೈಟಿಗಳ ಪೈಕಿ 175 ಎಸ್‌ಎಫ್‌ಸಿಎಸ್‌ಗಳು ಲೆಕ್ಕಪರಿಶೋಧನೆ ಹಾಗೂ ಗಣಕೀಕರಣ ಪ್ರಕ್ರಿಯೆ ಮುಗಿಸಿವೆ, ಉಳಿದವರಿಗೆ ಸಮಸ್ಯೆ ಏನು ಎಂದು ತರಾಟೆಗೆ ತೆಗೆದುಕೊಂಡ ಗೋವಿಂದಗೌಡ, ಆಡಿಟ್ ಹಾಗೂ ಗಣಕೀಕರಣ ಮುಗಿಸದ ಸೊಸೈಟಿಗಳಿಗೆ ಸಾಲ ಸೌಲಭ್ಯ ಒದಗಿಸದಂತೆ ಬ್ಯಾಂಕ್ ಎಂಡಿಗೆ ಸೂಚಿಸಿದರು.

ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ನಾಗನಾಳ ಸೋಮಣ್ಣ, ಹನುಮಂತರೆಡ್ಡಿ, ಅಶ್ವತ್ಥ್ಥಪ್ಪ, ಕೆ.ವಿ.ದಯಾನಂದ್, ನಾರಾಯಣರೆಡ್ಡಿ, ಚೆನ್ನರಾಯಪ್ಪ, ನಾಗಿರೆಡ್ಡಿ, ವೆಂಕಟರೆಡ್ಡಿ, ದ್ಯಾವಪ್ಪ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್,ಖಲೀಮುಲ್ಲಾ, ಚೌಡಪ್ಪ, ಹುಸೇನ್ ದೊಡ್ಡಮನಿ ಮತ್ತಿತರರಿದ್ದರು.

ಬ್ಯಾಂಕಿಗೆ ಖಾತೆ ವರ್ಗಾಯಿಸಿ: ನಿಮ್ಮ ಶಾಖೆ, ಸೊಸೈಟಿ ವ್ಯಾಪ್ತಿಯ ಡೇರಿ ಮತ್ತು ಸದಸ್ಯರ ಉಳಿತಾಯ ಖಾತೆಯನ್ನು ಬೇರೆ ಬ್ಯಾಂಕಿನಿಂದ ಡಿಸಿಸಿ ಬ್ಯಾಂಕಿಗೆ ಬದಲಿಸಿಕೊಳ್ಳಿ ಎಂದು ಸೂಚಿಸಿದರು. ಸಾಲ ನೀಡುವುದರಲ್ಲಿ ಸಾಧನೆ ತೋರಿದರೆ ಸಾಲದು, ಠೇವಣಿ ಸಂಗ್ರಹದಲ್ಲೂ ಗುರಿ ಸಾಧಿಸಬೇಕು, ಕೆಜಿಎಫ್ ತಾಲೂಕಿನಲ್ಲಿ ಅಲ್ಲಿನ ಶಾಸಕರು ಮತ್ತು ನಿರ್ದೇಶಕರ ಸಲಹೆ ಪಡೆದು ಠೇವಣಿ ಸಂಗ್ರಹಿಸಬೇಕೆಂದು ಸೂಚಿಸಿದರು.

8-ಕೆಎಲ್‌ಆರ್-9

ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸೊಸೈಟಿಗಳ ಕಾರ್ಯದರ್ಶಿಗಳು, ಬ್ಯಾಂಕ್ ಶಾಖಾ ಅಧಿಕಾರಿ, ಸಿಬ್ಬಂದಿ ಸಭೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದಲ್ಲಿ ನಡೆಯಿತು. ಬ್ಯಾಂಕಿನ ಎಂಡಿ ರವಿ ಹಾಗೂ ನಿರ್ದೇಶಕರು ಹಾಜರಿದ್ದರು.