ಜಿಲ್ಲೆ

ಶಕ್ತಿಕೇಂದ್ರದ ಪದಾಧಿಕಾರಿಗಳಿಗೆ ಸಂಸದರ ಟಾಸ್ಕ್

Kolar

ಕೋಲಾರ: ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ, ಬಡವರಿಗೆ ಸ್ಪಂದಿಸಿದ ರೀತಿಯಲ್ಲೇ ಸೋಂಕು ಉಲ್ಬಣಿಸುತ್ತಿರುವ ಸಂದರ್ಭದಲ್ಲಿ ಆಯಾ ಶಕ್ತಿಕೇಂದ್ರ, ಬೂತ್‌ಮಟ್ಟದಲ್ಲಿ ತಂಡ ರಚಿಸಿ ಜನರಿಗೆ ಸ್ಪಂದಿಸುವಂತೆ ಸಂಸದ ಎಸ್. ಮುನಿಸ್ವಾಮಿ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಎಲ್ಲ ಮೋರ್ಚಾ ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ಬೆಂಗಳೂರಿನಿಂದಲೇ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮಾಸ್ಕ್ ವಿತರಣೆ, ಬಡವರಿಗೆ ದಿನಸಿ ಕಿಟ್, ಔಷಧ ವಿತರಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪ್ರಸ್ತುತ ಕರೊನಾ ಪ್ರಕರಣ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಬೂತ್, ಮಹಾಶಕ್ತಿಕೇಂದ್ರ, ಮಂಡಲ ಪದಾಧಿಕಾರಿಗಳು, ಎಲ್ಲ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಎಷ್ಟು ಮಂದಿ ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್‌ಗಳಿದ್ದಾರೆ ಎಂಬುದನ್ನು ಪಟ್ಟಿ ಮಾಡಿ ಹೆಸರು, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು, ಶಕ್ತಿಕೇಂದ್ರ ವ್ಯಾಪ್ತಿಯಲ್ಲಿನ ಮಂದಿರ, ಮಸೀದಿ ಚರ್ಚ್‌ಗಳಲ್ಲಿನ ಮುಖ್ಯಸ್ಥರ ಮನವೊಲಿಸಿ ಧ್ವನಿವರ್ಧಕ ಬಳಸಿಕೊಂಡು ಸಾರ್ವಜನಿಕರಿಗೆ ಕರೊನಾ ನಿಯಂತ್ರಣ ಕ್ರಮದ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವಂತೆ ತಿಳಿಹೇಳಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಂಬಂಧ ಕಷಾಯ ಸೇವಿಸುವಂತೆ ಜಾಗೃತಿ ಮೂಡಿಸಬೇಕು, ಅವಶ್ಯವಿದ್ದವರಿಗೆ ಕಷಾಯ ಪದಾರ್ಥ ನೀಡಿ ನೆರವಾಗಿ, 60 ವರ್ಷ ಮೇಲ್ಪಟ್ಟವರು, ಉಸಿರಾಟದ ಸಮಸ್ಯೆ ಇದ್ದವರನ್ನು ಗುರುತಿಸಿ ಆಸ್ಪತ್ರೆಗೆ ಸೇರಿಸಲು ನೆರವಾಗುವಂತೆ ತಂಡ ರಚಿಸಿ ಎಂದು ಟಾಸ್ಕ್ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಜತೆಗೆ ಸರ್ಕಾರ ಬಿಡುಗಡೆ ಮಾಡಿರುವ ಪಡಿತರವನ್ನು ಫಲಾನುಭವಿಗಳ ಮನೆಗೆ ತಲುಪಿಸುವ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಜನದಟ್ಟಣೆ ತಪ್ಪಿಸಬಹುದು. ಈ ಎಲ್ಲ ಅಂಶಗಳ ಕುರಿತು ಶೀಘ್ರ ಮತ್ತೊಮ್ಮೆ ಸಭೆ ಕರೆದು ಮತ್ತೊಮ್ಮೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಕರೊನಾ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಪ್ರಯೋಜನವನ್ನು ಜನತೆಗೆ ತಲುಪಿಸಿದಾಗ ಪ್ರತಿಪಕ್ಷಗಳು ನಡೆಸುತ್ತಿರುವ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನಕ್ಕೆ ತಕ್ಕ ಉತ್ತರ ನೀಡಿದಂತಾಗುತ್ತದೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿಯನ್ನು ಗೆಲ್ಲಿಸಿದ ಜನರು ಕಷ್ಟಕಾಲದಲ್ಲಿ ಪಕ್ಷದ ಮುಖಂಡರು ಸ್ಪಂದಿಸುತ್ತಾರೆಂಬ ಭಾವನೆ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಬೂತ್, ಶಕ್ತಿ ಕೇಂದ್ರ ಮಟ್ಟದಿಂದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕೋರಿದ್ದಾರೆ.