ಪಾ.ಶ್ರೀ.ಅನಂತರಾಮ್ ಕೋಲಾರ
ರಾಜಕೀಯ ಚಾಣಾಕ್ಷತನದಿಂದ ಸಂಸತ್ತಿಗೆ 7 ಬಾರಿ ಆಯ್ಕೆಯಾಗಿದ್ದ ಕೆ.ಎಚ್.ಮುನಿಯಪ್ಪ 2019ರ ಚುನಾವಣೆಯಲ್ಲಿ ಕಂಡ ಸೋಲು ಮರೆತು ವಿರೋಧಿಗಳಿಗೆ ಪಾಠ ಕಲಿಸಲು ಶಪಥ ಮಾಡಿದ್ದಾರೆಂದು ತಿಳಿದು ಬಂದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕಹಿ ಅನುಭವದಿಂದ ಪಾಠ ಕಲಿತಿರುವ ಮುನಿಯಪ್ಪ ಮುಂದಿನ ಚುನಾವಣೆಯಲ್ಲಿ ಮೈತ್ರಿ ಇಲ್ಲದೆ ಜೆಡಿಎಸ್ ಜತೆ ಪ್ರೆಂಡ್ಲಿ ಫೈಟ್ ಮೂಲಕ ಗುರಿ ಸಾಧಿಸಲು ಎಚ್.ಡಿ.ದೇವೇಗೌಡರ ಬೆಂಬಲಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದಾಗ ವಿರೋಧಿಗಳ ಲೆಕ್ಕಾಚಾರ ಮೀರಿ ಗೆದ್ದಿರುವ ಮುನಿಯಪ್ಪ 2019ರ ಚುನಾವಣೆಯಲ್ಲಿ ಸ್ವಪಕ್ಷದವರ ಬಂಡಾಯ, ಜೆಡಿಎಸ್ ಪರವಾಗಿದ್ದ ಒಕ್ಕಲಿಗರು ಕೈಕೊಟ್ಟಿದ್ದು ಹಾಗೂ ದಲಿತ ಸಮುದಾಯ ವಿಭಜನೆಯಿಂದ ಸೋಲಬೇಕಾಯಿತು, ಆದರೆ ಮುಂದಿನ ಚುನಾವಣೆಗೆ ಮೈತ್ರಿ ಇಲ್ಲದೆ ಹೋರಾಟಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
ಟಿಕೆಟ್ ತಪ್ಪಿಸಲು ಸ್ವಪಕ್ಷೀಯರು ಪ್ರಯತ್ನಿಸಿದ್ದ ವಿಷಯ ಗೊತ್ತಿದ್ದರೂ ಮುನಿಯಪ್ಪ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸದೆ ಉದಾಸೀನ ಮಾಡಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಲಾಭ ಮಾಡಿಕೊಂಡರು, ಇತ್ತ ಜೆಡಿಎಸ್‌ನ ಅನೇಕ ಮುಖಂಡರು ಮೈತ್ರಿ ಧರ್ಮ ತಿರಸ್ಕರಿಸಿ ಬಿಜೆಪಿಗೆ ಅನುಕೂಲ ಮಾಡಿದರು. ಆಪ್ತನಿಗೆ ಸಹಾಯ ಮಾಡಲಾಗದೆ ಎಚ್.ಡಿ.ದೇವೇಗೌಡರೂ ಅಸಹಾಯಕರಾಗಿದ್ದರಿಂದ ಸೋಲಿನಿಂದ ತಪ್ಪಿಸಿಕೊಳ್ಳುವುದು ಕಷ್ಟವಾಯಿತು.
ಸೋತ ನಂತರ ಕೆಲ ದಿನ ತಟಸ್ಥರಾಗಿದ್ದ ಮುನಿಯಪ್ಪ ಕಳೆದ 10 ತಿಂಗಳಿಂದ ಮತ್ತೆ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ತಮ್ಮೊಂದಿಗೆ ರಾಜಿ ಮಾಡಿಕೊಳ್ಳದೆ ವಿರೋಧ ಮುಂದುವರಿಸುತ್ತಿರುವ ಮುಖಂಡರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಜಿಎಫ್, ಮಾಲೂರು ಹೊರತುಪಡಿಸಿ ಉಳಿದ 4 ಕ್ಷೇತ್ರಗಳಲ್ಲಿ ತಮ್ಮ ಪಡೆ ಬಲಪಡಿಸುವ ಮೂಲಕ ವಿರೋಧಿಗಳಿಗೆ ಗೇಟ್‌ಪಾಸ್ ನೀಡುವುದು ಮುನಿಯಪ್ಪ ಅವರ ಪ್ರಮುಖ ಅಜೆಂಡಾ ಆಗಿದೆ ಎನ್ನಲಾಗಿದೆ.
ವಿರೋಧಿಗಳನ್ನು ಮಟ್ಟ ಹಾಕಲು ದೇವೇಗೌಡರ ಬೆಂಬಲಕ್ಕೆ ಪ್ರಯತ್ನಿಸಿರುವ ಅವರು ಇತ್ತೀಚೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ನೆಪದಲ್ಲಿ ಮಾಜಿ ಪಿಎಂ ಅವರನ್ನು ಭೇಟಿಯಾಗಿ ಬಿಜೆಪಿ ಕಟ್ಟಿ ಹಾಕಲು ಬೆಂಬಲ ಕೋರಿದ್ದಾರಲ್ಲದೆ, ತಮ್ಮ ವಿರುದ್ಧ ್ರೆಂಡ್ಲಿ ಫೈಟ್‌ಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಬಿಡುವಂತೆ ಬೆಂಬಲಿಗರಿಂದ ಒತ್ತಡ ಹೆಚ್ಚಾಗುತ್ತಿದ್ದರೂ ದುಡುಕಿನ ನಿರ್ಧಾರ ಕೈಗೊಳ್ಳದ ಮುನಿಯಪ್ಪ, ಇನ್ನಷ್ಟು ದಿನ ಕಾದು ನೋಡಲು ತೀರ್ಮಾನಿಸಿದ್ದಾರಲ್ಲದೆ, ಜೆಡಿಎಸ್ ಜತೆ ಮೈತ್ರಿ ಬದಲು ಸ್ನೇಹ ಮುಂದುವರಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ.
ತೇಪೆ ಹಚ್ಚಲು ಡಿಕೆಶಿ ಕಸರತ್ತು: ಕೋಲಾರ ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವ ಮೂಲಕ 6 ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಆಸೆ ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ ಮತ್ತು ವಿರೋಧ ಬಣದ ನಡುವೆ ತೇಪೆ ಹಚ್ಚಲು ಉದ್ದೇಶಿಸಿದ್ದು ಕಾರ್ಯಕರ್ತರು ಕುತೂಹಲದಿಂದ ಕಾಯುತ್ತಿದ್ದಾರೆ.