ಕೋಲಾರ: ಲಾಕ್‌ಡೌನ್ ಜಾರಿಯಿಂದ ಸ್ಥಗಿತಗೊಂಡಿದ್ದ ನಚಿಕೇತ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಜೀರ್ಣೋದ್ಧಾರ ಕಾಮಗಾರಿ ಕಳೆದೊಂದು ವಾರದಿಂದ ಭರದಿಂದ ಸಾಗಿದೆ.
ಎಪ್ಪತ್ತೈದು ವರ್ಷಗಳ ಹಿಂದೆ ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಿರಿಯ ಮುತ್ಸದ್ಧಿ ರಾಜಕಾರಣಿ, ಮಾಜಿ ಸಚಿವ ಟಿ.ಚನ್ನಯ್ಯನವರು ನಗರದ ಹೃದಯ ಭಾಗವಾದ ನಗರಸಭೆ ಸಮೀಪದ ವಿಶಾಲ ಜಾಗದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಪಣತೊಟ್ಟರು.
ಭೂಮಿ ಮಂಜೂರು ಮಾಡಿಸಿ 1954ರ ಮಾ.27ರಂದು ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಂದ ಶಂಕುಸ್ಥಾಪನೆ ಮಾಡಿಸಿ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಿ 1955ರ ಜು.29ರಂದು ಕಟ್ಟಡ ಲೋಕಾರ್ಪಣೆ ಮಾಡಿ ನಚಿಕೇತ ನಿಯಯ ಎಂದು ನಾಮಕಾರಣ ಮಾಡಿದರು.
ವಿದ್ಯಾರ್ಥಿ ನಿಲಯದಲ್ಲಿ ಸುಮಾರು 250 ವಿದ್ಯಾರ್ಥಿಗಳು ತಂಗಲು 40 ಕೊಠಡಿಗಳಿವೆ, ಗ್ರಂಥಾಲಯ, ಕ್ರೀಡೆ, ವ್ಯಾಯಾಮ, ವಿಶೇಷ ಬೋಧನೆ, ಸಿಸಿ ಟಿವಿ ವ್ಯವಸ್ಥೆ ಎಲ್ಲವೂ ಇದ್ದರೂ ಆಗಿನ ಕಾಲಕ್ಕೆ ತಕ್ಕ ವ್ಯವಸ್ಥೆಯಡಿ ಕಟ್ಟಡ ನಿರ್ಮಿಸಲಾಗಿದ್ದರಿಂದ ಮಳೆಗಾಲದಲ್ಲಿ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ತೊಂದರೆ ಆಗುತ್ತಿತ್ತು. ದುರಸ್ತಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ನಚಿಕೇತ ನಿಲಯಕ್ಕೆ ಕಾಯಕಲ್ಪ ನೀಡಬೇಕೆಂಬ ಒತ್ತಾಯ ವಿದ್ಯಾರ್ಥಿಗಳಿಂದ ಮತ್ತು ವಿವಿಧ ಸಂಘಟನೆಗಳಿಂದ ಕೇಳಿ ಬಂದಿದ್ದರಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ಎಸ್.ಮುನಿಸ್ವಾಮಿ ಸರ್ಕಾರಕ್ಕೆ ವಾಪಸ್ ಹೋಗಿದ್ದ ಅನುದಾನ ತರಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮೇಲೆ ಒತ್ತಡ ಹೇರಿ 1.35 ಕೋಟಿ ರೂ. ಹಣ ಬಿಡುಗಡೆ ಮಾಡಿಸಿ ಲಾಕ್‌ಡೌನ್‌ಗೆ ಮುಂಚೆಯೇ ಕಾಮಗಾರಿಗೆ ಚಾಲನೆ ನೀಡಿದ್ದರಾದರೂ ಕರೊನಾ ಅರ್ಭಟದಿಂದ ಕಾಮಗಾರಿಗೆ ಕೆಲಸಗಾರರು ಸಿಗದೆ ಸ್ಥಗಿತಗೊಂಡಿತ್ತು.
ಲಾಕ್‌ಡೌನ್ ಸಡಲಿಕೆ ಬಳಿಕ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಬಾಲಾಜಿ ಅವರೊಂದಿಗೆ ಸಭೆ ನಡೆಸಿ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಮುಗಿಸಲು ಸೂಚಿಸಿರುವುದರಿಂದ ಈಗ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. 40 ಕೊಠಡಿಗಳಿಗೆ ಗ್ರಾನೈಟ್ ಕಲ್ಲುಗಳನ್ನು ಹಾಸಲಾಗಿದೆ, ಕಿಟಕಿಗಳಿಗೆ ಅಲ್ಯುಮಿನಿಯಂ ಫ್ರೇಮ್ ಒಳಗೊಂಡ ಗ್ಲಾಸ್ ಅಳವಡಿಸಲಾಗಿದೆ, ಡೈನಿಂಗ್ ಹಾಲ್ ಕಾಮಗಾರಿ ಸೇರಿ ಕೆಳ ಅಂತಸ್ಥಿನ ಕೆಲಸ ನಡೆಯುತ್ತಿದ್ದು, ಪ್ರಸ್ತುತ 50 ವಿದ್ಯಾರ್ಥಿಗಳಿದ್ದ ವಿದ್ಯಾರ್ಥಿ ನಿಲಯದಲ್ಲಿ 250 ಮಕ್ಕಳು ಇರುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಯಾರಿ ನಡೆಯುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಧಿಕಾರಿ ಪ್ರಯತ್ನದಿಂದ ನಚಿಕೇತ ನಿಲಯದ ಜೀರ್ಣೋದ್ಧಾರ ಕಾಮಗಾರಿ ನಡೆಸಲಾಗುತ್ತಿದೆ, ಲಾಕ್‌ಡೌನ್ ನಿಂದ ಕೆಲಸ ಸ್ಥಗಿತಗೊಂಡಿತ್ತು, ಮತ್ತೆ ಚಾಲನೆ ನೀಡಲಾಗಿದೆ, ಸೆಪ್ಟೆಂಬರ್ ಒಳಗೆ ಕಾಮಗಾರಿ ಮುಗಿಯುವ ವಿಶ್ವಾಸವಿದೆ. ಬಾಲಾಜಿ, ಜಂಟಿ ನಿರ್ದೇಶಕ(ಪ್ರಭಾರ), ಸಮಾಜ ಕಲ್ಯಾಣ ಇಲಾಖೆ, ಕೋಲಾರ. ನಚಿಕೇತ ನಿಲಯದ ಜೀರ್ಣೋದ್ಧಾರ ಕೆಲಸ ನಡೆಯುತ್ತಿರುವುದು ಸಂತೋಷ. ಹೊಸದಾಗಿ ಕಾಂಪೌಂಡ್ ನಿರ್ಮಿಸಲು ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಬೇಕು, ಕಟ್ಟಡ ಸುಂದರವಾಗಿದ್ದರೆ ಸಾಲದು, ಸ್ವಚ್ಛತೆಗೆ ಗಮನ ಹರಿಸಬೇಕು, ಭದ್ರತಾ ಸಿಬ್ಬಂದಿ ನೇಮಕ ಹಾಗೂ ಸೌಲಭ್ಯ ಒದಗಿಸಬೇಕು, ಕಾಮಗಾರಿ ಇನ್ನು ಮುಗಿಯದಿರುವುದರಿಂದ ಲೋಪಗಳ ಕುರಿತು ಮಾತನಾಡುವುದಿಲ್ಲ. ವಕ್ಕಲೇರಿ ರಾಜಪ್ಪ, ಹಿರಿಯ ದಲಿತ ಮುಖಂಡ, ಕೋಲಾರ