ಕೋಲಾರ: ಕರೊನಾ ಹಿನ್ನೆಲೆಯಲ್ಲಿ ಚೀನಾದಿಂದ ಹೊರಬರುವ ಕೈಗಾರಿಕೆಗಳನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲು ವಿಶೇಷ ಟಾಸ್ಕ್ ಪೋರ್ಸ್ ರಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ, ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ 2ನೇ ಹಂತದಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಪ್ರಸ್ತಾಪಿತ ಜಮೀನು ಪರಿವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾದಿಂದ ಮುಂದುವರಿದ ರಾಷ್ಟ್ರಗಳ ಕೈಗಾರಿಕೆಗಳಿಗೂ ಹೊಡೆತ ಬಿದ್ದಿದೆ. ಚೀನಾ ವಿರುದ್ಧ ಅಮೆರಿಕ ಇನ್ನಿತರ ರಾಷ್ಟ್ರಗಳು ಆಶ್ರೋಶಗೊಂಡಿವೆ. ಅನೇಕ ಕೈಗಾರಿಕೆಗಳು ಚೀನಾ ಬಿಟ್ಟು ಭಾರತದತ್ತ ಮುಖ ಮಾಡಿವೆ. ಅವುಗಳನ್ನು ಸ್ವಾಗತಿಸಲು ಸಿಎಂ ಮಾರ್ಗದರ್ಶನದಲ್ಲಿ ವಿಶೇಷ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ಈ ಕಂಪನಿಗಳಿಗೆ ಆಹ್ವಾನ ನೀಡುವುದು, ಮೂಲಸೌಲಭ್ಯ ಕಲ್ಪಿಸುವ ಸಂಬಂಧ ಸಮಿತಿ ಈಗಾಗಲೆ ಎರಡು ಸಭೆ ನಡೆಸಿದೆ. ಕೈಗಾರಿಕೆಗಳು ಹೆಚ್ಚಾಗಿ ಬರಬೇಕು. ಈ ನಿಟ್ಟಿನಲ್ಲಿ ಬರುವ ಕೈಗಾರಿಕೆಗಳಿಗೆ ತಕ್ಷಣವೇ ಏಕಗವಾಕ್ಷಿ ಯೋಜನೆಯಡಿ ಭೂಮಿ ನೀಡಲು ಪೂರಕವಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.
ದೇಶದ ಹಲವು ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆ ಆರಂಭವಾಗದಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಶೇ. 90 ಕೈಗಾರಿಕೆಗಳು ಆರಂಭವಾಗಿವೆ. ಕರೊನಾದಿಂದ ತವರು ರಾಜ್ಯಗಳಿಗೆ ಹೋಗಿರುವ ಕಾರ್ಮಿಕರು ತಿಂಗಳೊಳಗೆ ವಾಪಸ್ ಬರುವ ವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆ ಉತ್ತಮವಾಗಿದ್ದು, ದೇಶದಲ್ಲಿ ಕರ್ನಾಟಕವನ್ನು ನಂ1 ಸ್ಥಾನಕ್ಕೆ ತರುವ ಗುರಿ ನಮ್ಮದಾಗಿದೆ. ಡೀಮ್ಡ್ ಪರ್ಮಿಷನ್ ಮೂಲಕ ಮತ್ತಷ್ಟು ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕೈಗಾರಿಕೆಗಳಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಮುಳಬಾಗಿಲಿನ ದೇವರಾಯಸಮುದ್ರ, ಕೋಲಾರದ ವೇಮಗಲ್ 2ನೇ ಹಂತ ಕ್ಯಾಲನೂರು, ನರಸಾಪುರ, ಕೆಜಿಎಫ್‌ನ ಬಿಜಿಎಂಎಲ್ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಪ್ರಸ್ತಾವನೆ ಬಂದಿದೆ. ಇಲ್ಲಿನ ಸಂಸದರು ಮತ್ತು ಜಿಲ್ಲಾಧಿಕಾರಿಗಳು ಕೈಗಾರಿಕೆಗಳ ವಿಸ್ತರಣೆಗೆ ಉತ್ಸುಕರಾಗಿದ್ದಾರೆ ಎಂದರು.
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಘೋಷಣೆಯಾಗಿದ್ದು, ಈ ಭಾಗಕ್ಕೆ ಬರುವ ಕೈಗಾರಿಕೆಗಳಿಗೆ ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ರಾಜ್ಯ ಸರ್ಕಾರದ ಪಾಲು ಕೊಡಲಾಗುವುದು ಎಂದರು.
ಸಂಸದ ಎಸ್.ಮುನಿಸ್ವಾಮಿ, ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಕಾರ್ತಿಕ್, ಡಿಸಿ ಸಿ. ಸತ್ಯಭಾಮ, ಉದ್ಯೋಗ ಮಿತ್ರ ಎಂಡಿ ರೇವಣ್ಣಗೌಡ, ಕೈಗಾರಿಕೆ ಮುಖ್ಯ ಅಭಿವೃದ್ಧಿ ಅಧಿಕಾರಿ ಎಂ. ರಾಮ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸುರೇಶ್, ಉಪನಿರ್ದೇಶಕ ಎನ್. ರವಿಚಂದ್ರ, ಎಸಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ ಇತರರಿದ್ದರು.
ನಿರುದ್ಯೋಗಿಗಳಿಗೆ ಉದ್ಯೋಗ: ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಉದ್ದಿಮೆಗಳು ಉತ್ಪಾದನಾ ಸಾಮರ್ಥ್ಯ ಕಡಿಮೆಗೊಳಿಸಿದ್ದರಿಂದ ಉದ್ಯೋಗ ಕಡಿತದ ಸಾಧ್ಯತೆ ಇದೆ. ಇನ್ನಷ್ಟು ದಿನ ಕಾದು ನೋಡಿ ಕೆಲಸ ಕಳೆದುಕೊಂಡಿರುವವರ ಸಮೀಕ್ಷೆ ವರದಿ ಆಧರಿಸಿ ಕರೊನಾ ವಿಶೇಷ ಪ್ಯಾಕೇಜ್‌ನಡಿ ನಿರುದ್ಯೋಗಿಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಗದೀಶ್ ಶೆಟ್ಟರ್ ಹೇಳಿದರು.
ಮನವಿ ಸಲ್ಲಿಕೆ: ಕೆಜಿಎಫ್ ಸೋಲಾರ್ ವಿದ್ಯುತ್ ಆಧಾರಿತ ಆಟೋಮೊಬೈಲ್ ಉಪಕರಣ ತಯಾರಿಕಾ ಘಟಕಕ್ಕೆ ಪ್ರಶಸ್ತವಾಗಿದೆ. ಬಿಜಿಎಂಎಲ್ ವ್ಯಾಪ್ತಿಯಲ್ಲಿನ 1000 ಎಕರೆ ಭೂಮಿಯನ್ನು ವಿಶೇಷ ಆರ್ಥಿಕ ವಲಯದಡಿ ಅಭಿವೃದ್ಧಿಪಡಿಸುವಂತೆ ಕೋರಿ ಸಂಸದ ಎಸ್.ಮುನಿಸ್ವಾಮಿ ಜಗದೀಶ್‌ಶೆಟ್ಟರ್‌ಗೆ ಮನವಿ ಸಲ್ಲಿಸಿದರು.
ಬಿ.ಎಸ್.ಯಡಿಯೂರಪ್ಪ ಮುಂದಿನ ಮೂರು ವರ್ಷ ಸಿಎಂ ಆಗಿರುತ್ತಾರೆ. ಅವರ ನೇತೃತ್ವದಲ್ಲಿ ನಾನು ಮಂತ್ರಿಯಾಗಿ ಕೆಲಸ ಮಾಡುತ್ತೇನೆ. ವಿಧಾನಪರಿಷತ್, ರಾಜ್ಯ ಸಭೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳು ಯಾರಾಗಬೇಕೆಂಬುದನ್ನು ಕೋರ್ ಸಭೆಯಲ್ಲಿ ನಿರ್ಧರಿಸಲಾಗುವುದು. ಜಗದೀಶ್ ಶೆಟ್ಟರ್, ಸಚಿವ