ಕೋಲಾರ: ಅಂತಾರಾಜ್ಯ ಪ್ರಯಾಣದ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿರುವುದರಿಂದ ಕರೊನಾ ಆತಂಕದ ನಡುವೆಯೂ ಶ್ರೀನಿವಾಸಪುರದಲ್ಲಿ ಮಾವು ವಹಿವಾಟಿಗೆ ಅವಕಾಶ ನೀಡಲು ನಿರ್ಧರಿಸಿರುವ ಜಿಲ್ಲಾಡಳಿತ ಹೊಸ ಸವಾಲು ಎದುರಿಸುವಂತಾಗಿದೆ.
ರೈತರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡು ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿ ಮೇ 26ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧ್ಯಕ್ಷತೆಯಲ್ಲಿ ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಾಗೂ ಮಾವು ಬೆಳೆಗಾರರು, ವರ್ತಕರ ಜತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಮಾರುಕಟ್ಟೆಗೆ ಹೊರ ರಾಜ್ಯದ ಮಾವು ಬರಲು ಅವಕಾಶ ನೀಡದಿರುವುದು, ವ್ಯಾಪಾರಸ್ಥರು ಹೊರ ರಾಜ್ಯದಿಂದ ಲಾರಿ ಹಾಗೂ ಕೆಲಸದವರನ್ನು ಕರೆ ತರುವಂತಿಲ್ಲ, ಹೊರ ರಾಜ್ಯದ ಲಾರಿಗಳಿಗೆ ಪ್ರವೇಶ ನೀಡದಂತೆ ಚೆಕ್‌ಪೋಸ್ಟ್ ಬಿಗಿಗೊಳಿಸುವುದು, ಮಾವು ಸಾಗಾಟದ ಲಾರಿಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಸಿ ಮಾರುಕಟ್ಟೆಯೊಳಗೆ ಬಿಡುವುದು ಸೇರಿ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಮಾವು ವಹಿವಾಟು ನಡೆಸಲು ನಿರ್ಧರಿಸಲಾಗಿತ್ತು.
ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ವಯ ಹೊರ ರಾಜ್ಯಗಳಿಂದ ಕರ್ನಾಟಕ ಪ್ರವೇಶಿಸುವವರಿಗೆ ಅನುಮತಿ ಅಗತ್ಯವಿಲ್ಲ, ಸೇವಾಸಿಂಧು ಪೋರ್ಟಲ್‌ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭೇಟಿ ಉದ್ದೇಶ ಇನ್ನಿತರ ವಿವರ ನೋಂದಣಿ ಮಾಡಿಕೊಳ್ಳಬೇಕು, ಬಂದರೆ 7 ದಿನ ಸಾಂಸ್ಥಿಕ ಕ್ವಾರಂಟೈನ್, 7 ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು. ಮಹಾರಾಷ್ಟ್ರದಿಂದ ಬರುವವರು ಐಸಿಎಂಆರ್ ಅನುಮೋದಿತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪ್ರಮಾಣ ಪತ್ರ ತಂದು 14 ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು, ವ್ಯಾಪಾರ ಇನ್ನಿತರ ಉದ್ದೇಶಕ್ಕಾಗಿ ಬಂದಿದ್ದರೆ 7 ದಿನದೊಳಗೆ ಮರು ಪ್ರಯಾಣದ ಟಿಕೆಟ್ ಹೊಂದಿರಬೇಕು ಎಂಬ ನಿಯಮ ವಿಧಿಸಲಾಗಿದೆ.
ಶ್ರೀನಿವಾಸಪುರದ ಮಾವು ಮಾರುಕಟ್ಟೆಗೆ ಹಮಾಲಿಗಳು, ಕೂಲಿ ಕಾರ್ಮಿಕರಾಗಿ ಬರುವವರು ಹೆಚ್ಚಿನವರು ಆಂಧ್ರ, ತಮಿಳುನಾಡಿನವರು. ಜಿಲ್ಲಾಡಳಿತದ ಹಿಂದಿನ ನಿರ್ಧಾರದಂತೆ ಇದೆಲ್ಲದಕ್ಕೂ ತಡೆ ಇತ್ತು. ಹೊಸ ಮಾರ್ಗಸೂಚಿ ಪ್ರಕಾರ ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಿಂದ ಬರುವವರಿಗೆ ಹೆಚ್ಚಿನ ನಿರ್ಬಂಧ ಇಲ್ಲದಿರುವುದರಿಂದ ಯಾವ ಭಾಗದಿಂದಲಾದರೂ ಕಾರ್ಮಿಕರು ಬಂದು ಕ್ವಾರಂಟೈನ್ ಆಗಿ 14 ದಿನಗಳ ಬಳಿಕ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಹೊರ ರಾಜ್ಯದಿಂದ ಮಾವು ಬಂದರೂ ಮಾರುಕಟ್ಟೆ ಪ್ರವೇಶ ನಿರ್ಬಂಧಿಸುವಂತಿಲ್ಲ.
ಹೊಸ ನಿಯಮ ಜಿಲ್ಲಾಡಳಿತ, ಕೃಷಿ ಮಾರುಕಟ್ಟೆ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದು, ಮಾರುಕಟ್ಟೆಯನ್ನು ಕರೊನಾಮುಕ್ತವಾಗಿ ಸರಿಸುಮಾರು 6 ವಾರಗಳ ಕಾಲ ನಿರ್ವಹಿಸಲು ಹೊಸ ಕಸರತ್ತು ನಡೆಸುವಂತಾಗಿದೆ.
ಮೇ 29ರಂದೇ ಪ್ರಾಯೋಗಿಕವಾಗಿ ಕೆಲ ಮಂಡಿಗಳಿಗೆ ವಹಿವಾಟು ಆರಂಭಿಸಲು ಅನುಮತಿ ನೀಡಿದ್ದು, ಸೋಮವಾರದಿಂದ ಅಧಿಕೃತವಾಗಿ ಮಾವು ವಹಿವಾಟು ಚುರುಕುಗೊಳ್ಳಬೇಕಿತ್ತು.
ಆದರೆ ಶೇ. 25 ಮಂಡಿಗಳು ಮಾತ್ರ ತಲೆಎತ್ತಿವೆ. ಈ ಮಂಡಿಗಳಲ್ಲೂ ಸ್ಯಾನಿಟೈಸರ್ ಇಟ್ಟಿದ್ದು ಬಿಟ್ಟರೆ ಜಿಲ್ಲಾಡಳಿತ ವಿಧಿಸಿರುವ ಬಹುತೇಕ ನಿಬಂಧನೆ ಪಾಲನೆಯಾಗುತ್ತಿಲ್ಲ. ಹೊರರಾಜ್ಯದ ಕಾರ್ಮಿಕರು ಬಂದಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಈಗಲೇ ಜಿಲ್ಲಾಡಳಿತ ಎಚ್ಚೆತ್ತು ಬಿಗಿ ಕ್ರಮ ಕೈಗೊಳ್ಳದಿದ್ದರೆ ಶ್ರೀನಿವಾಸಪುರ ಕರೊನಾ ಹಾಟ್‌ಸ್ಪಾಟ್ ಆಗುವ ಆತಂಕ ಕಾಡುತ್ತಿದೆ.
ಸರ್ಕಾರದ ಹೊಸ ಮಾರ್ಗಸೂಚಿಯನ್ವಯ ಹೊರರಾಜ್ಯದಿಂದ ಮಾವು ತರುವುದು, ಹೊರರಾಜ್ಯದ ಕಾರ್ಮಿಕರ ಪ್ರವೇಶಕ್ಕೆ ನಿರ್ಬಂಧ ಇರುವುದಿಲ್ಲ. ಆದರೂ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಿದೆ. ಸೋಂಕು ದೃಢಪಟ್ಟರೂ ಸಂಬಂಧಪಟ್ಟ ಮಂಡಿ ಸೀಲ್‌ಡೌನ್ ಮಾಡಿ ಸೋಂಕು ನಿವಾರಕ ಸಿಂಪಡಿಸಿ ಉಳಿದಂತೆ ವಹಿವಾಟಿಗೆ ಅವಕಾಶ ನೀಡಬೇಕಾಗುತ್ತದೆ. ಬಿ.ಶಿವಸ್ವಾಮಿ, ಅಪರ ಜಿಲ್ಲಾಧಿಕಾರಿ, ಕೋಲಾರ