ಕೋಲಾರ: ಹೊರ ರಾಜ್ಯ ಮತ್ತು ಅಂತರ ಜಿಲ್ಲೆಗಳಿಂದ ಬರುತ್ತಿರುವ ಜನರಿಂದ ಹಸಿರು ವಲಯವಾಗಿದ್ದ ಕೋಲಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಜಿಲ್ಲೆಯನ್ನು ಕರೊನಾಮುಕ್ತಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ನೆರೆಯ ಆಂಧ್ರ, ತಮಿಳುನಾಡಿನಿಂದ ಕೋಲಾರಕ್ಕೆ ಬರುವ ಜನರು ಗಡಿ ದಾಟುವ ಮುನ್ನ ಸರಿಯಾಗಿ ತಪಾಸಣೆ ಮಾಡಿದಲ್ಲಿ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದರು.
ಜಿಲ್ಲೆಗೆ ಬೇರೆ ಕಡೆಯಿಂದ ಬರುವ ರೈತರು, ವ್ಯಾಪಾರಿಗಳು, ಸರಕು ಸಾಗಾಣೆ ವಾಹನ ಚಾಲಕರು ಹಾಗೂ ಕ್ಲಿನರ್‌ಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕು, ಸರ್ಕಾರದ ಮಾರ್ಗಸೂಚಿ ನಿರ್ಲಕ್ಷಿಸುವವರ ವಿರುದ್ಧ ಕ್ರಮವಹಿಸಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು.
45 ದಿನಗಳ ಅವಧಿಯಲ್ಲಿ ಒಂದೇ ಒಂದು ಪಾಸಿಟಿವ್ ಕೇಸ್ ಇರಲಿಲ್ಲ, ಇದ್ದಕ್ಕಿದಂತೆ ಸೋಂಕು ವ್ಯಾಪಿಸಿರುವುದು ಅಚ್ಚರಿಯನ್ನುಂಟು ಮಾಡಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಜ್ವರ, ನೆಗಡಿ, ಕೆಮ್ಮು, ಹೃದಯ ಸಂಬಂಧಿ ಕಾಯಿಲೆ ಇರುವವರನ್ನು ತಪಾಸಣೆಗೆ ಒಳಪಡಿಸಿ ಸೋಂಕಿತರು ಪತ್ತೆಯಾದಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸಲಹೆ ನೀಡಿದರು.
ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು, ಹೊರ ರಾಜ್ಯದವರು ಸಲೀಸಾಗಿ ಜಿಲ್ಲೆಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಸೋಂಕಿತರೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಕ್ವಾರೆಂಟೈನ್‌ಗೆ ಒಳಪಡಿಸಬೇಕು. ಹಾಸ್ಟೆಲ್, ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಈ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದರು.
ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಸಾರ್ವಜನಿಕರು ದುರುಪಯೋಗ ಪಡಿಸಿಕೊಳ್ಳದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಗತ್ಯ ವಸ್ತು ಮಾರಾಟ ಮತ್ತು ಖರೀದಿಗಾಗಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಅಂಗಡಿ ತೆರೆಯಲು ಆದೇಶಿಸಲಾಗಿದೆ. ಅಂಗಡಿಗಳನ್ನು 3 ಶಿಫ್ಟ್‌ಗಳಾಗಿ ವಿಂಗಡಿಸಿ ತೆರೆಯುವ ಹಾಗೆ ವ್ಯವಸ್ಥೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದರು.
ಡಿಸಿ ಸಿ.ಸತ್ಯಭಾಮ ಮಾತನಾಡಿ, ಕ್ವಾರೆಂಟೈನ್‌ನಲ್ಲಿರುವವರಿಗೆ ಸೌಕರ್ಯದ ಕೊರತೆ ಆಗಿರುವ ದೂರು ಬಂದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಲಾಗಿದೆ. ಕರೊನಾ ಎದುರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಜಿಪಂ ಸಿಇಒ ಎಚ್.ವಿ.ದರ್ಶನ್, ಜಿಲ್ಲಾ ಎಸ್ಪಿ ಕಾರ್ತಿಕ್‌ರೆಡ್ಡಿ, ಕೆಜಿಎಫ್ ಎಸ್ಪಿ ಮೊಹಮದ್ ಸುಜೀತಾ, ಎಡಿಸಿ ಬಿ. ಶಿವಸ್ವಾಮಿ, ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ಎಸ್‌ಎನ್‌ಆರ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ,, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಿಣಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.