ಕೋಲಾರ: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿದ್ದ ಬಿಹಾರ, ಉತ್ತರ ಪ್ರದೇಶ ಸೇರಿ ಇನ್ನಿತರ ರಾಜ್ಯಗಳ ವಲಸಿಗರನ್ನು ತವರಿಗೆ ವಾಪಸ್ ಕಳುಹಿಸುತ್ತಿದ್ದು ಇವರೊಂದಿಗೆ ತೆರಳಲು ಜಿಲ್ಲೆಯಲ್ಲಿನ ವಲಸಿಗರೂ ಪ್ರಯತ್ನಿಸುತ್ತಿರುವುದು ಮಾಲೂರು ತಾಲೂಕು ಆಡಳಿತ ಹಾಗೂ ಪೊಲೀಸರಿಗೆ ತಲೆನೋವಾಗಿದೆ.
ಕೂಲಿ ಕೆಲಸಕ್ಕಾಗಿ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ ನೂರಾರು ವಲಸಿಗ ಕಾರ್ಮಿಕರಿದ್ದಾರೆ. ಕೆಲವರು ಈಗಾಗಲೆ ಅನುಮತಿಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ಬೆಂಗಳೂರಿನಿಂದ ಬಿಎಂಟಿಸಿ ಬಸ್‌ಗಳಲ್ಲಿ ಮಾಲೂರಿಗೆ ಬಂದು ಇಲ್ಲಿಂದ ರೈಲುಗಳ ಮೂಲಕ 3 ಸಾವಿರಕ್ಕೂ ಅಧಿಕ ಕಾರ್ಮಿಕರು ಉತ್ತರ ಭಾರತದ ಕಡೆ ಪ್ರಯಾಣ ಬೆಳೆಸಿದ್ದು ಮಾಲೂರಿಗೆ ಹೋದರೆ ತಮ್ಮನ್ನೂ ಸಹ ರೈಲಿನಲ್ಲಿ ಕಳುಹಿಸಬಹುದೆಂಬ ಆಸೆಯಿಂದ ಜಿಲ್ಲೆಯಲ್ಲಿ ತಂಗಿರುವ ಉತ್ತರ ಪ್ರದೇಶದ ಜನರು ಪ್ರಯತ್ನಿಸಿ ಪ್ರಯಾಣಕ್ಕೆ ಅವಕಾಶ ಸಿಗದೆ ಪೇಚಿಗೆ ಸಿಲುಕಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡಿನಿಂದ ಇತ್ತೀಚೆಗೆ 10 ಮಂದಿ ಸೈಕಲ್ ಮೂಲಕ ಮಾಲೂರಿಗೆ ಬರಲು ಯತ್ನಿಸಿದ್ದರೆ ಎನ್ನಲಾಗಿದೆ. ಆದರೆ ಇವರನ್ನು ಗಡಿಯಲ್ಲಿ ತಡೆದ ಪೊಲೀಸರು, ಸದ್ಯಕ್ಕೆ ಬೆಂಗಳೂರಿನಲ್ಲಿರುವ ವಲಸಿಗರನ್ನು ಮಾತ್ರ ವಾಪಸ್ ಕಳುಹಿಸಲಾಗುತ್ತಿದೆ, ಮುಂದೆ ತಮಗೆ ಅವಕಾಶ ಸಿಗುವವರೆಗೂ ಜಿಲ್ಲೆಯಿಂದ ಕದಲಬೇಡಿ, ಕರೊನಾ ಹರಡಿದರೆ ಕಷ್ಟವಾಗುತ್ತದೆ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆಂಬ ಮಾಹಿತಿ ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಇವರ ಪರವಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲು ಕಾನೂನು ಸಲಹೆ ಪಡೆಯುತ್ತಿದ್ದು ಅನುಮತಿ ದೊರೆತಲ್ಲಿ ಸಾರಿಗೆ ವ್ಯವಸ್ಥೆಗೆ ಚಿಂತನೆ ನಡೆಸಿದ್ದಾರೆ. ಜಿಲ್ಲೆಯ ಅನೇಕರು ಸರಿಯಾದ ಮಾಹಿತಿ ಹಾಗೂ ತಿಳಿವಳಿಕೆ ಇಲ್ಲದೆ ಮಾಲೂರಿಗೆ ಬರುತ್ತಿರುವುದರಿಂದ ಪೊಲೀಸರು ವಲಸಿಗರಿಗೆ ಪಾಠ ಹೇಳುವುದೇ ದೊಡ್ಡ ಕಸುಬಾಗಿದೆ.
ಸಿಕ್ಕಿಬಿದ್ದ ಬಿಹಾರಿ: ಮಾಲೂರಿನ ಮಾರಿಕಾಂಬಾ ದೇವಾಲಯದ ಬಳಿ ಭಾನುವಾರ ಮಧ್ಯಾಹ್ನ ಬಿಹಾರಿಯೊಬ್ಬ ರೈಲ್ವೆ ನಿಲ್ದಾಣದ ಕಡೆ ಹೋಗುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ. ಹಿಂದಿಯಲ್ಲಿ ಮಾತನಾಡುತ್ತಿದ್ದರಿಂದ ಅನುಮಾನಗೊಂಡ ಜನ ಬೆಂಗಳೂರಿನ ಶಿವಾಜಿನಗರದಿಂದ ತಪ್ಪಿಸಿಕೊಂಡು ಬಂದಿರುವ ಕರೊನಾ ಸೋಂಕಿತ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ವಿಚಾರಿಸಿದಾಗ ವಲಸಿಗ ಎಂದು ತಿಳಿದು ಆಂಬುಲೆನ್ಸ್‌ಗೆ ಹತ್ತಿಸಲು ಮುಂದಾಗಿದ್ದಾರೆ. ಆದರೆ ಆತ ಹತ್ತಲು ನಿರಾಕರಿಸಿದಾಗ ಕ್ವಾರಂಟೈನ್ ಮಾಡಲು ಪೊಲೀಸರು ಆಟೋದಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ವಿಚಾರಣೆ ಮಾಡಿದ ಸಂದರ್ಭದಲ್ಲಿ ಆತ ಶನಿವಾರ ರಾತ್ರಿ ಇಲ್ಲಿಗೆ ಬಂದಿದ್ದು, ಬಿಹಾರಕ್ಕೆ ಹೋಗಬೇಕು. ನನ್ನನ್ನೂ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆಟೋದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರು ವಿಚಾರಣೆ ಬಳಿಕ ಬಿಹಾರಕ್ಕೆ ಕಳುಹಿಸಲು ಸಿದ್ಧತೆ ಕೈಗೊಂಡಿದ್ದಾರೆ.
ಸಂತೆಯಲ್ಲಿ ಗಲಿಬಿಲಿ: ಮಾಲೂರು ತಾಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ಭಾನುವಾರ ಸಂತೆಯಲ್ಲಿ ತರಕಾರಿ, ಹಣ್ಣು, ಕೋಳಿ ಕುರಿ ಹಾಗೂ ಮದ್ಯ ಮಾಂಸ ಖರೀದಿಗಾಗಿ ಜನರ ಮುಗಿಬಿದ್ದಿದ್ದರು. ಸ್ಥಳೀಯರಲ್ಲದೆ ತಮಿಳುನಾಡಿನಿಂದ ಜನ ಬಂದಿದ್ದರಿಂದ ಗಲಿಬಿಲಿ ಹೆಚ್ಚಾಯಿತು. ಸಂತೆಯಲ್ಲಿ ಸಾಮಾಜಿಕ ಅಂತರ ಇರಲಿಲ್ಲ, ಮಾಸ್ಕ್ ಧರಿಸಿರಲಿಲ್ಲ, ಈಗಾಗಲೆ ತಮಿಳುನಾಡಿನ ಗಡಿಯಲ್ಲಿ ಸೋಂಕು ಹೆಚ್ಚುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ.