ಕೋಲಾರ: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಸಿ ಬೆಳಗ್ಗೆಯಿಂದ ರಾತ್ರಿ 7 ಗಂಟೆಯವರೆಗೆ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದ್ದು, ಕರೊನಾ ಬಗ್ಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್‌ಡೌನ್ ಸಡಿಲಿಕೆ ಭಾಗವಾಗಿ ಬೆಳಗ್ಗೆ 9 ರಿಂದ 7ರವರೆಗೆ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಎಲ್ಲ ವಹಿವಾಟುಗಳಿಗೂ ರಾತ್ರಿ 7ರ ವರೆಗೆ ಅವಕಾಶ ನೀಡಲಾಗಿದೆ. ಕ್ಷೌರಿಕ, ದಂತ ವೈದ್ಯರಿಗೆ ವಿಧಿಸಿದ್ದ ನಿರ್ಬಂಧವನ್ನೂ ಸಡಿಲಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ದೇವಸ್ಥಾನ, ಮಸೀದಿ, ಚರ್ಚ್ ಇನ್ನಿತರ ಧಾರ್ಮಿಕ ಕೇಂದ್ರಗಳಲ್ಲಿ ನಿತ್ಯ ಧಾರ್ಮಿಕ ಕೈಂಕರ್ಯಕ್ಕೆ ಸಂಬಂಧಪಟ್ಟವರಿಗೆ ಮಾತ್ರ ಅವಕಾಶವಿದ್ದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಯಾಣಕ್ಕೆ ಅನುಮತಿ: ಜಿಲ್ಲೆಯಲ್ಲಿ ತೆರೆದಿರುವ ಅಂತಾರಾಜ್ಯ ಗಡಿಯ 20 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮುಂದುವರಿಯಲಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಕರ್ತವ್ಯಕ್ಕೆ ತೆರಳುವವರಿಗೆ ಪ್ರತ್ಯೇಕ ಪಾಸ್ ಬೇಕಿಲ್ಲ, ಚೆಕ್‌ಪೋಸ್ಟ್‌ಗಳಲ್ಲಿ ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದು. ಇನ್ನು ಮುಂದೆ ಮದುವೆ ಇನ್ನಿತರ ಅಗತ್ಯಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಾಸ್ ವಿತರಿಸಲಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಶೇ.50ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕರೊನಾ ಪ್ರಕರಣ ಎದುರಿಸಲು ಕೋವಿಡ್ ಆಸ್ಪತ್ರೆಯಾಗಿ ಗುರುತಿಸಿರುವ ಜಾಲಪ್ಪ ಆಸ್ಪತ್ರೆಯಲ್ಲಿ 100 ಹಾಸಿಗೆ, ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಯಲ್ಲಿ 25 ಹಾಗೂ ಕೆಜಿಎಫ್‌ನ ಸಂಭ್ರಮ್ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಬಿಎಲ್‌ಒಗಳ ಮೂಲಕ ಕುಟುಂಬ ಸಮೀಕ್ಷೆ ಪ್ರಗತಿಯಲ್ಲಿದ್ದು, ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಲಿದೆ. ಈಗಾಗಲೆ ಸಮೀಕ್ಷೆ ಶೇ. 50ರಷ್ಟು ಪೂರ್ಣಗೊಂಡಿದೆ ಎಂದರು.
ಶೀಘ್ರ ಲ್ಯಾಬ್: ಜಿಲ್ಲಾ ಕೇಂದ್ರದಲ್ಲಿ ಕರೊನಾ ಪರೀಕ್ಷಾ ಪ್ರಯೋಗಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಯೋಗಾಲಯ ನಿರ್ವಹಣೆ ಬಗ್ಗೆ ಕೋವಿಡ್ 19ನ ಸಿಬ್ಬಂದಿ ತರಬೇತಿ ಪಡೆದಿದ್ದಾರೆ. ಶೀಘ್ರ ಪ್ರಯೋಗಾಲಯ ಆರಂಭವಾಗಲಿದೆ ಎಂದರು.
ಜಿಲ್ಲೆಯ ಸುತ್ತಮುತ್ತ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳು ಕೆಂಪು ವಲಯದಲ್ಲಿರುವುದರಿಂದ ಜಿಲ್ಲೆ ಅಪಾಯದಲ್ಲಿದೆ. ಹಸಿರು ವಲಯದಲ್ಲಿರುವ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯಿಸಿದರು. ಅಪರ ಜಿಲ್ಲಾಧಿಕಾರಿ ಬಿ. ಶಿವಸ್ವಾಮಿ ಹಾಜರಿದ್ದರು.
ಜಿಲ್ಲಾಡಳಿತ ಸನ್ನದ್ಧ: ಸರ್ಕಾರದ ನಿರ್ದೇಶನದಂತೆ ಕರೊನಾ ಪರಿಸ್ಥಿತಿ ನಿರ್ವಹಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಇಷ್ಟು ದಿನ ಕೋಲಾರ ಜಿಲ್ಲೆ ಹಸಿರು ವಲಯವಾಗಿ ಉಳಿಸಿಕೊಳ್ಳ ಶಿಶು ನೋಡಿಕೊಳ್ಳುವ ರೀತಿ ನಮ್ಮ ಎಲ್ಲ ಸಿಬ್ಬಂದಿ ವರ್ಗ ಶ್ರಮಿಸಿದ್ದಾರೆ. ಇನ್ನು ಮುಂದೆ ಜನರ ಕೈಯಲ್ಲಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಕರೊನಾದಿಂದ ರಕ್ಷಿಸಿಕೊಳ್ಳಬೇಕು ಎಂದು ಸತ್ಯಭಾಮ ಹೇಳಿದರು.