ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಅನುದಾನದ ಕೊರತೆ ಇಲ್ಲ, ಆದರೆ ಸಮಪರ್ಕವಾಗಿ ಪಾರದರ್ಶಕವಾಗಿ ಬಳಕೆಯಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬರ ನಿರ್ವಹಣಾ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಹೋಬಳಿವಾರು ಕುಡಿಯುವ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಸೀಲ್ದಾರ್, ತಾಪಂ ಇಒ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದರು.
ನೀರಿನ ಸಮಸ್ಯೆ ಕಂಡುಬಂದರೆ ಮೊದಲ ಆದ್ಯತೆಯಾಗಿ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಖಾಸಗಿ ಕೊಳವೆಬಾವಿ ಸಿಗದಿದ್ದರೆ ಟ್ಯಾಂಕರ್ ಮೂಲಕ, ನಂತರ ಕೊಳವೆ ಬಾವಿಗಳ ಮರು ಕೊರೆಯುವಿಕೆಗೆ, ಕೊನೇ ಆದ್ಯತೆಯಾಗಿ ಹೊಸ ಕೊಳವೆಬಾವಿ ಕೊರೆಸಬೇಕು ಎಂದರು.
ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ಜನರು ನೀರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಪಡೆದುಕೊಳ್ಳಬೇಕು. ಕೊಳವೆಬಾವಿ ಕೊರೆಯಲು ಕರೊನಾ ಮುಗಿಯುವವರೆಗೂ ಸ್ಥಳೀಯರಿಗೆ ಆದ್ಯತೆ ನೀಡಿ, ಬೇರೆ ರಾಜ್ಯದಿಂದ ಕೊಳವೆಬಾವಿ ಕೊರೆಯಲು ಬರುವವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಪಾಯಿಂಟ್ ಮಾಡುವ ಜಿಯಾಲಜಿಸ್ಟ್‌ಗಳು ಕೇವಲ ರಸ್ತೆ ಇರುವ ಕಡೆ ಹೊಗಿ ಪಾಯಿಂಟ್ ಮಾಡುವುದನ್ನು ಬಿಟ್ಟು ಒಳಪ್ರದೇಶಗಳಿಗೆ ಹೋಗಿ ನೀರು ಬರುವ ಹಾಗೆ ಪಾಯಿಂಟ್ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪಕ್ಕದ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಿಂದ ಯಾರೂ ಜಿಲ್ಲೆಗೆ ನುಸುಳದಂತೆ ನೋಡಿಕೊಳ್ಳಬೇಕು. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಜಿಲ್ಲೆಗೆ ಯಾರೇ ಬಂದರೂ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.
ಜಿಪಂ ಸಿಇಒ ಎಚ್.ವಿ. ದರ್ಶನ್ ಮಾತನಾಡಿ, ರೈತರಿಂದ ಬಾಡಿಗೆಗೆ ಪಡೆಯುವ ಖಾಸಗಿ ಕೊಳವೆಬಾವಿಗಳಿಗೆ ಬೆಸ್ಕಾಂನವರು ವಾಣಿಜ್ಯ ವಿದ್ಯುತ್ ದರ ವಿದಿಸುತ್ತಾರೆ. ಕೆಲ ವೇಳೆ ವಿಜಿಲೆನ್ಸ್ ಅವರು ರೈತರಿಗೆ ದಂಡ ವಿದಿಸುತ್ತಾರೆ. ಈ ರೀತಿ ಆಗಬಾರದು. ಕುಡಿಯುವ ನೀರಿನ ಉದ್ದೇಶಕ್ಕೆ ನೀಡಿರುವುದರಿಂದ ಸಾಮಾನ್ಯ ವಿದ್ಯುತ್ ದರವನ್ನೇ ವಿಧಿಸಬೇಕು. ಜಿಲ್ಲೆಯಲ್ಲಿ ಕೊಳವೆ ಬಾವಿಗಳ ಸಕ್ಸಸ್ ರೇಟ್ ಕಡಿಮೆ ಇದ್ದು, ಇದು ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.