ಜಿಲ್ಲೆ

ಮುಂದುವರಿದ ಕಾಡಾನೆಗಳ ದಾಳಿ, ಕಾರ್ಯಾಚರಣೆಗೆ ಬಾರದ ಸಿಬ್ಬಂದಿ

Kolar

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಮುತ್ತೇನಹಳ್ಳಿ, ಬೊಮ್ಮಗಾನಹಳ್ಳಿ ಬುಡ್ಡಗಾನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಗುರುವಾರ ರಾತ್ರಿ 30ಕ್ಕೂ ಹೆಚ್ಚಿನ ಕಾಡಾನೆಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ, ಆಲೂಗಡ್ಡೆ, ತೆಂಗು, ಎಲೆಕೋಸು ಸೇರಿ ಹಲವು ಬೆಳೆಗಳನ್ನು ನಾಶ ಮಾಡಿವೆ.

ಕರೊನಾ ಭೀತಿಯಿಂದ ಬೆಳೆಗಳಿಗೆ ಸಮರ್ಪಕ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಆನೆಗಳ ಉಪಟಳ ಮತ್ತಷ್ಟು ಮಾರಕವಾಗಿದೆ.

ಮುತ್ತೇನಹಳ್ಳಿ ಗ್ರಾಮದ ರೈತ ರಾಮಚಂದ್ರಪ್ಪ ಅವರ ಆಲೂಗಡ್ಡೆ ರಾಶಿ, ನೀರಿನ ಪೈಪು, ಚಲಪತಿ ಅವರ ಎಲೆಕೋಸು ಹಾಗೂ ನೀರಿನ ಪೈಪ್‌ಗಳು, ಬೊಮ್ಮಗಾನಹಳ್ಳಿ ರೈತ ಶಿವಪ್ಪ ಅವರ ಟೊಮ್ಯಾಟೊ ಬೆಳೆ ಸೇರಿ ಇತರ ಬೆಳೆಗಳನ್ನು ನಾಶ ಮಾಡಿವೆ. ಆಲೂಗಡ್ಡೆ ರಾಶಿಗೆ ಕಾವಲು ಕಾಯಲು ಹೋಗಿದ್ದ ಮುತ್ತೇನಹಳ್ಳಿ ಗ್ರಾಮದ ಇಬ್ಬರು ಹುಡುಗರು ಆನೆಗಳ ದಾಳಿಯಿಂದ ಪಾರಾಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಕಾರ್ಯಾಚರಣೆಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.