ಜಿಲ್ಲೆ

ಶಾಲಾಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಶಿಕ್ಷಣ ಇಲಾಖೆಯಿಂದ ಹೊಸ ಟಾಸ್ಕ್

Kolar

ಕೋಲಾರ: ಕರೊನಾ ಭೀತಿ ಹಿನ್ನೆಲೆಯಲ್ಲಿ 1ರಿಂದ 6ನೇ ತರಗತಿವರೆಗಿನ ಮಕ್ಕಳಿಗೆ ರಜೆ ಹಾಗೂ 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ರಜೆ ಘೋಷಿಸಿರುವ ಈ ಅವಧಿಯಲ್ಲಿ ಶಿಕ್ಷಕರಿಗೆ ಇಲಾಖೆ ಹಲವು ಟಾಸ್ಕ್‌ಗಳನ್ನು ನೀಡಿದೆ.

ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯಂತೆ ಶಿಕ್ಷಕರು 2020-21ನೇ ಸಾಲಿನ ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು, ಎಸ್‌ಡಿಎಂಸಿ ಸಹಕಾರದೊಂದಿಗೆ ಶಾಲೆಗಳಲ್ಲಿ ಲಭ್ಯವಿರುವ ಭೌತಿಕ ಸಂಪನ್ಮೂಲ, ಶೈಕ್ಷಣಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಮುಂದಿನ 3 ವರ್ಷಗಳ ಅವಧಿಗೆ ಶಾಲಾಭಿವೃದ್ಧಿಗೆ ಅಗತ್ಯವಿರುವ ಕ್ರಿಯಾಯೋಜನೆ ತಯಾರಿಸಬೇಕೆಂದು ಡಿಡಿಪಿಐ ಕೆ.ರತ್ನಯ್ಯ ಸೂಚನೆ ನೀಡಿದ್ದಾರೆ.

ಮಾ.19ರಂದು 2020-21ನೇ ಸಾಲಿನ ವೇಳಾಪಟ್ಟಿ, ತರಗತಿ ವೇಳಾಪಟ್ಟಿ ಸಿದ್ಧಪಡಿಸಿ, ಶಾಲಾ ಗ್ರಂಥಾಲಯದ ಪುಸ್ತಕಗಳು, ಭೂಪಟ, ಕ್ರೀಡಾ ಸಾಮಗ್ರಿ ಬಳಕೆಗೆ ಅನುಕೂಲವಾಗುವಂತೆ ವಿಂಗಡಿಸಿ, ಚಿತ್ರಕಲಾ ಹಾಗೂ ವೃತ್ತಿ ಶಿಕ್ಷಕರಿಂದ ಶಾಲಾ ಸೌಂದರ್ಯೀಕರಣ, ಪಾಠೋಪಕರಣ ತಯಾರಿಕೆಗೆ ಒತ್ತು ನೀಡುವುದು, ಮಾ.20ರಂದು ಬ್ಯಾಗ್ ರಹಿತ ‘ಸಂಭ್ರಮ ಶನಿವಾರ’ ನಿಮಿತ್ತ ಪ್ರತಿ ತಿಂಗಳು ಎರಡು ಶನಿವಾರದಂದು ನಡೆಸುವ ಕಾರ್ಯಕ್ರಮಕ್ಕೆ ಮಕ್ಕಳ ಭಾಗವಹಿಸುವಿಕೆ ಉತ್ತೇಜಿಸುವ ಚಟುವಟಿಕೆ ಹಾಗೂ ಈ ಚಟುವಟಿಕೆಗಳನ್ನು ನಿರ್ವಹಿಸುವ ವಿಧಾನಗಳ ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದು, ಇದರಲ್ಲಿ ಪೋಷಣೆ, ಸ್ವಾಸ್ಥ್ಯ, ಶುಚಿತ್ವ, ಅಂತರ್ಜಾಲ, ಸಾಧನೆ, ಮಾಧ್ಯಮದ ಸುರಕ್ಷಿತ ಉಪಯೋಗ, ರಸ್ತೆ ಸುರಕ್ಷತೆ, ಮೌಲ್ಯ, ನಾಗರಿಕ ಜವಾಬ್ದಾರಿಗಳ ಕುರಿತು ಚಟುವಟಿಕೆ ಸಿದ್ಧಪಡಿಸಲು ತಿಳಿಸಿದ್ದಾರೆ.

21ರಂದು ಮಕ್ಕಳ ಕಲಿಕೆಗೆ ವೆಚ್ಚರಹಿತ ಕಲಿಕಾ ಸಾಮಗ್ರಿ ಸಿದ್ಧಪಡಿಸಿ, 23ರಂದು ವಾರ್ಷಿಕ ಪಾಠ ಯೋಜನೆ, ಸಹಪಠ್ಯಚಟುವಟಿಕೆಗಳನ್ನು ಒಳಗೊಂಡ ವಾರ್ಷಿಕ ಶಾಲಾ ಪಂಚಾಂಗ ಸಿದ್ಧಪಡಿಸಲು ಸೂಚಿಸಲಾಗಿದೆ. 24ರಂದು 2019-20ನೇ ಸಾಲಿನ ವಾರ್ಷಿಕ ದಾಸ್ತಾನು ಪರಿಶೀಲನಾ ಕಾರ್ಯ, ಶಾಲಾ ನಗದು, ದಾಸ್ತಾನು ವಹಿಗಳ ನಿರ್ವಹಣೆ, 26ರಂದು 2020-21ನೇ ಸಾಲಿನ ಪಠ್ಯಪುಸ್ತಕಗಳ ದಾಸ್ತಾನು, ವಿತರಣೆಗೆ ಸಿದ್ಧತೆ, 27ರಂದು ಪ್ರೌಢಶಾಲಾ ಶಿಕ್ಷಕರು ಪಠ್ಯಪೂರಕವಾದ ಇ-ಕಂಟೆಂಟ್ ಸೃಜಿಸಿ ದೀಕ್ಷಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು, ಗ್ರಾಮಸ್ಥರು, ಎಸ್‌ಡಿಎಂಸಿ ಸಹಕಾರದಿಂದ ಶಾಲೆ ಕಟ್ಟಡ, ಪೀಠೋಪಕರಣ ದುರಸ್ತಿ ಮಾಡಬೇಕು ಎಂದಿದ್ದಾರೆ.

ಮಾ.28 ಶಾಲೆಯಲ್ಲಿ ಅನುಪಯುಕ್ತ ವಸ್ತುಗಳ ಗುರುತಿಸಿ ದುರಸ್ತಿ ಮಾಡಿಸಿ, ಮಾಡಲಾಗದ್ದನ್ನು ನಿಯಮಾನುಸಾರ ವಿಲೇವಾರಿ ಮಾಡಿ, 30ರಂದು 2020-21ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾಯೋಜನೆ ಸಿದ್ಧಪಡಿಸುವುದು, ಮಾ.31ರಂದು ಸಂಪೂರ್ಣ ಶಾಲಾ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಶಾಲೆ ಆವರಣ, ಕೊಠಡಿ, ಕುಡಿಯುವ ನೀರು, ಸ್ವಚ್ಛತಾ ಕಾರ್ಯ ನಡೆಸಿ ಶಾಲೆಯ ನೈರ್ಮಲ್ಯತೆಗೆ ಅಗತ್ಯ ಕ್ರಮವಹಿಸಲು ಸೂಚಿಸಿದ್ದಾರೆ. ಇಲಾಖೆಯಿಂದ ಯಾವುದೇ ಸಂದರ್ಭದಲ್ಲಿ ಮಾಹಿತಿ ಕೇಳಿದ ತಕ್ಷಣ ಶಾಲೆಗಳ ಅಗತ್ಯತೆಯನ್ನು ಕ್ರೋಡೀಕರಿಸಿ ಸಲ್ಲಿಸಲು ಕ್ರಿಯಾಯೋಜನೆ ನೆರವಾಗಲಿದೆ.

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರ ಹೊರತುಪಡಿಸಿ ಉಳಿದ ಶನಿವಾರ ಬೆಳಗಿನ 2 ಗಂಟೆ ಅವಧಿಯಲ್ಲಿ ಶ್ರಮದಾನದ ಮೂಲ ಸ್ವಚ್ಛ ಶನಿವಾರ ಆಚರಿಸುವಂತೆ ಮುಖ್ಯಮಂತ್ರಿಗಳ ಸೂಚನೆಯನ್ನು ಮುಖ್ಯಶಿಕ್ಷಕರು ಅನುಷ್ಠಾನಗೊಳಿಸಬೇಕು. ಕೆ.ರತ್ನಯ್ಯ, ಡಿಡಿಪಿಐ, ಕೋಲಾರ