ಜಿಲ್ಲೆ

ಆನೆ ಹಾವಳಿ ತಡೆಗೆ ಕಠಿಣ ಕ್ರಮ, ಅರಣ್ಯ ಸಚಿವ ಆನಂದ್ ಸಿಂಗ್ ಭರವಸೆ

Kolar

ಕೋಲಾರ/ಬೂದಿಕೋಟೆ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಡೆಗೆ ಶೀಘ್ರವೇ ತಜ್ಞರೊಂದಿಗೆ ಬಂಗಾರಪೇಟೆ, ಕೆಜಿಎ್ ಹಾಗೂ ಮಾಲೂರಿಗೆ ಖುದ್ದು ಭೇಟಿ ನೀಡಿ ಸ್ಥಳೀಯ ಶಾಸಕರು ಮತ್ತು ಗ್ರಾಮೀಣ ಜನರೊಂದಿಗೆ ಚರ್ಚಿಸಿ ಕಾರ್ಯಕ್ರಮ ಪ್ರಕಟಿಸುವುದಾಗಿ ಅರಣ್ಯ ಸಚಿವ ಆನಂದ್ ಸಿಂಗ್ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಜಿಲ್ಲೆಯ ಶಾಸಕರು, ಅಧಿಕಾರಿಗಳೊಂದಿಗೆ ಆನೆಗಳ ಹಾವಳಿ ಕುರಿತು ಚರ್ಚೆ ನಡೆಸಿ, ಜಿಲ್ಲೆಯ ಗಡಿಭಾಗಕ್ಕೆ ನುಸುಳಿರುವ ಆನೆಗಳನ್ನು ಓಡಿಸಲು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆನೆಗಳು ಕೃಷಿಭೂಮಿ ಮತ್ತು ಜನವಸತಿ ಪ್ರದೇಶಕ್ಕೆ ನುಗ್ಗದಂತೆ ತಡೆಯಲು ಬೃಹತ್ ಕಂದಕ ನಿರ್ಮಿಸಲಾಗುವುದು, ರೈಲ್ವೆ ಕಂಬಿಗಳಿಂದ ತಡೆಗೋಡೆ, ಆನೆ ಮತ್ತು ಮಾನವನ ನಡುವೆ ಸಂಘರ್ಷ ತಪ್ಪಿಸಲು ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಎಂದರು.

ಇದರಿಂದ ಕೆರಳಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕಳೆದ 9 ವರ್ಷಗಳಲ್ಲಿ ಆನೆ ದಾಳಿಗೆ 11 ಜನರು ಸತ್ತಿದ್ದಾರೆ. ಮೃತ ಕುಟುಂಬಳಿಗೆ ನೀವು ಕೊಡುವ ಹಣ ಹಾಗೂ ಬೆಳೆ ಹಾನಿಗೆ ನೀಡುವ ಪರಿಹಾರ ಕಡಿಮೆ, ಆನೆ ದಾಳಿಯಿಂದ ಸತ್ತವರ ಕುಟುಂಬಕ್ಕೆ ಕನಿಷ್ಠ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಆನೆಗಳನ್ನು ನಿಯಂತ್ರಿಸಲು ಕಾರಿಡಾರ್ ನಿರ್ಮಿಸುವಂತೆ 5 ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಸರ್ಕಾರ ಬಿಡಿಗಾಸೂ ನೀಡಿಲ್ಲ. ಇಲಾಖೆಯಲ್ಲಿ ಸಮನ್ವಯತೆ ಕೊರತೆ ಇದೆ. ಆನೆ ದಾಳಿಯಿಂದ ಜನ ಸತ್ತರೆ ಗ್ರಾಮೀಣ ಜನತೆ ನಿಮ್ಮನ್ನು ಕೇಳಲ್ಲ, ನಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದಾರೆ, ಕಾರಿಡಾರ್ ನಿರ್ಮಿಸಲು ಹಿಂದೆ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಯೋಜನೆ ಜಾರಿಗೆ ತರಬೇಕು ಎಂದು ಪಟ್ಟು ಹಿಡಿದರು.

ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಹಾಗೂ ಎಲಿಫೆಂಟ್ ಯೋಜನಾಧಿಕಾರಿ ರಂಗರಾವ್ ಮಾತನಾಡಿ, ಆನೆ ಹಾವಳಿ ಕೋಲಾರ ಜಿಲ್ಲೆಗೆ ಸೀಮಿತವಾಗಿಲ್ಲ. ರಾಜ್ಯದ ವಿವಿಧೆಡೆಯೂ ಜನ ಸತ್ತಿದ್ದಾರಲ್ಲದೆ, ಬೆಳೆ ನಾಶವಾಗಿದೆ. ಆನೆ ನಿಯಂತ್ರಿಸಲು ಇಲಾಖೆಯಿಂದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆನೆಗಳ ತಡೆಗಾಗಿ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಲು ಅಂದಾಜು 650 ಕೋಟಿ ರೂ. ಬೇಕಾಗುತ್ತದೆ. ಪ್ರಸ್ತುತ ಬಜೆಟ್‌ನಲ್ಲಿ ಕೇವಲ 50 ಕೋಟಿ ರೂ. ಮೀಸಲಿಡಲಾಗಿದೆ. 1 ಕಿಮೀ ರೈಲ್ವೆ ಕಂಬಿ ಅಳವಡಿಸಲು ಕನಿಷ್ಠ 1.20 ಕೋಟಿ ರೂ. ಬೇಕಾಗುವುದರಿಂದ ಹೆಚ್ಚುವರಿ ಅನುದಾನ ಹೊಂದಿಸಲು ಸಚಿವರು ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ಆನೆ ಹಾವಳಿಯಿಂದ ಜನ ಬೇಸತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದ್ದು ಆಹಾರ ಮತ್ತು ನೀರಿಗಾಗಿ ನಾಡಿಗೆ ಬರಲಾರಂಭಿಸಿವೆ. ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಪರಿಹಾರ ಕಾರ್ಯ ಸಾಲದು, ಜನರ ಸುರಕ್ಷತೆಗಾಗಿ ಪರಿಣಾಮಕಾರಿ ಯೋಜನೆ ಜಾರಿಗೆ ತರಬೇಕು ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಆನೆಗಳು ತಮಿಳುನಾಡು ಹಾಗೂ ಆಂಧ್ರ ಕಡೆಯಿಂದ ಬರುತ್ತಿರುವುದರಿಂದ ಈ ಎರಡು ರಾಜ್ಯಗಳ ಜತೆ ನಮ್ಮ ಅಧಿಕಾರಿಗಳು ಸಭೆ ನಡೆಸಿ ಆನೆಗಳನ್ನು ವಾಪಸ್ ಕಳುಹಿಸಲು ಮಾರ್ಗ ಕಂಡುಕೊಳ್ಳುವಂತೆ ಸಲಹೆ ನೀಡಿದರು.

ಬೆಂಗಳೂರಿನ ಅರಣ್ಯ ಭವನದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಕೋಲಾರ ಜಿಲ್ಲೆಯಲ್ಲಿ ಆನೆಗಳ ಹಾವಳಿ ಹಾಗೂ ದುರಂಗಳ ಕುರಿತು ಡಿಎಫ್‌ಒ ವೈ.ಚಕ್ರಪಾಣಿ ಮಾಹಿತಿ ನೀಡಿದರು.