ಕೋಲಾರ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದಿಂದ ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ 1.50 ಕೋಟಿ ರೂ. ಅವ್ಯವಹಾರ ನಡೆದಿದ್ದು, ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ ಎಂದು ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನೆ ಹಾಗೂ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಸಾಲ ವಿತರಣೆಯಾಗದಿರುವ ಬಗ್ಗೆ ಆಯೋಗಕ್ಕೆ ದೂರು ವ್ಯಕ್ತವಾದ್ದರಿಂದ ಪ್ರಕರಣವನ್ನು ಉನ್ನತ ತನಿಖೆಗೆ ಒಪ್ಪಿಸಲಾಗಿದೆ. ಜಿಲ್ಲೆಯಲ್ಲಿ ನಡೆದ ಅಕ್ರಮ ಇಡೀ ರಾಜ್ಯದ ಮೇಲೆ ಪರಿಣಾಮ ಬೀರಿದ್ದು ಅಧಿಕಾರಿಗಳು ಇನ್ನಾದರು ಎಚ್ಚೆತ್ತು ಬದ್ಧತೆಯಿಂದ ಕೆಲಸ ಮಾಡಿ ಸಫಾಯಿ ಕರ್ಮಚಾರಿಗಳಿಗೆ ನ್ಯಾಯ ಒದಗಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಅರಿವಿದೆ. ನಾಯಕರು, ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದೆ ಯೋಜನೆಗಳ ಅನುಷ್ಠಾನದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 212 ಖಾಯಂ ಕಾರ್ಮಿಕರು, ಸಮಾನ ಕೆಲಸ, ಸಮಾನ ವೇತನದಡಿ 29, ದಿನಗೂಲಿ ನೌಕರರು 45 ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರು 349 ಸೇರಿ ಒಟ್ಟು 635 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸಕಾಲದಲ್ಲಿ ಸವಲತ್ತು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿಬ್ಬಂದಿ ಮಾಹಿತಿ: ಕೋಲಾರ ನಗರಸಭೆಯಲ್ಲಿ 189, ಕೆಜಿಫ್ ನಗರಸಭೆಯಲ್ಲಿ 121, ಮುಳಬಾಗಿಲು ನಗರಸಭೆಯಲ್ಲಿ 81, ಬಂಗಾರಪೇಟೆ ಪುರಸಭೆಯಲ್ಲಿ 115, ಮಾಲೂರು ಪುರಸಭೆಯಲ್ಲಿ 89 ಹಾಗೂ ಶ್ರೀನಿವಾಸಪುರ ಪುರಸಭೆಯಲ್ಲಿ 40 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಕ್ರಿಯಿಸಿದ ಜಗದೀಶ್ ಹಿರೇಮಣಿ, ಕಾಗದದ ಮೇಲೆ ಅಂಕಿ-ಅಂಶ ಬರೆದು ಕೊಡುವುದು ಸುಲಭ. ವಾಸ್ತವವಾಗಿ ಪ್ರಗತಿ ಸಾಧನೆ ಆಗಿಲ್ಲ. ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸುರಕ್ಷ ಸಲಕರಣೆ ನೀಡದಿರುವ ಬಗ್ಗೆ ಪೌರಕಾರ್ಮಿಕರು ದೂರು ನೀಡಿದ್ದು ಕೂಡಲೇ ಸಲಕರಣೆ ವಿತರಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಾದ್ಯಂತ 1991 ಮಂದಿ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು, ಜತೆಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕು ಎಂದು ಸಲಹೆ ನೀಡಿದರು.
ಆಯೋಗದ ರಾಜ್ಯ ಕಾರ್ಯದರ್ಶಿ ಆರ್.ರಮಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ , ಜಿಪಂ ಸಿಇಒ ಎಚ್.ವಿ.ದರ್ಶನ್ ಉಪಸ್ಥಿತರಿದ್ದರು.
ಆರೋಗ್ಯ ಸೇವೆ ಕಲ್ಪಿಸಿ: ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸರ್ಕಾರದ ಸವಲತ್ತು ತಲುಪಿಸಲು ಅಧಿಕಾರಿಗಳು ಮುಂದಾಗಬೇಕು. ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಅವರಿಗೆ ನೀಡುತ್ತಿರುವ ಸ್ವಚ್ಛತಾ ಉಪಕರಣಗಳನ್ನು ಸರಿಯಾಗಿ ಬಳಸುವಂತೆ ಅರಿವು ಮೂಡಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ಮನೆ ಹಾಗೂ ಆರೋಗ್ಯಸೇವೆ ಕಲ್ಪಿಸಬೇಕು ಎಂದು ಜಗದೀಶ್ ಸೂಚಿಸಿದರು.