ಜಿಲ್ಲೆ

ಜನಪ್ರತಿನಿಧಿಗಳ ಮುಖವಾಡ ಧರಿಸಿ ಅಣಕು ಪ್ರತಿಭಟನೆ, ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ

Kolar

ಕೋಲಾರ: ಅಮೃತ ಯೋಜನೆಯಡಿ ಕುಡಿಯುವ ನೀರು, ಯುಜಿಡಿಗೆ ಅಗೆದಿರುವ ಕಾಲುವೆಗಳನ್ನು ಸರಿಯಾಗಿ ನಿರ್ವಹಿಸದಿರುವ ಕ್ರಮ ಖಂಡಿಸಿ ರೈತ ಸಂಘದ ಮುಖಂಡರು ಮಾಸ್ಕ್ ಹಾಕಿ ಜನಪ್ರತಿನಿಧಿಗಳ ಮುಖವಾಡ ಧರಿಸಿ ಧೂಳಿನ ನಗರವೆಂದು ನಾಮಕರಣ ಮಾಡುವಂತೆ ಅಣಕು ಪ್ರತಿಭಟನೆ ನಡೆಸಿದರು.

ನಗರದ ರೇಷ್ಮೆ ಗೂಡು ಮಾರುಕಟ್ಟೆ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಧೂಳಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸ್ಥಳೀಯ ಶಾಸಕರು ನಗರಾಭಿವೃದ್ಧಿ ಮರೆತರೆ ಉಸ್ತುವಾರಿ ಸಚಿವರು ಮುಳಬಾಗಿಲಿಗೆ ಮಾತ್ರ ಸಚಿವರೆಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಗರದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿ ಸರಿಯಾಗಿ ನಡೆಸಿಲ್ಲ. ಅಮೃತ ಯೋಜನೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಒಳಚರಂಡಿ ಕಾಮಗಾರಿ ನೆಪದಲ್ಲಿ ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಪೈಪ್‌ಲೈನ್ ಅಳವಡಿಸಲು ಅಗೆದಿರುವ ಕಾಲುವೆಗಳನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಧೂಳು ಏಳುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೋಲಾರಕ್ಕೆ ಧೂಳಿನ ನಗರ ಎಂದು ನಾಮಕರಣ ಮಾಡುವುದು ಸೂಕ್ತ ಎಂದು ಛೇಡಿಸಿದರು.

ಮಹಿಳಾ ಘಟಕ ಅಧ್ಯಕ್ಷೆ ಎ.ನಳಿನಿ ಮಾತನಾಡಿ, ನಗರದ ಎಂ.ಜಿ. ರಸ್ತೆ ಕಾಮಗಾರಿ ಮುಗಿದು ವರ್ಷವಾಗಿಲ್ಲ. ಮತ್ತೆ ಕುಡಿಯುವ ನೀರು, ಪೈಪ್‌ಲೈನ್ ನೆಪದಲ್ಲಿ ರಸ್ತೆ ಅಗೆಯುತ್ತಿದ್ದಾರೆ. ರಸ್ತೆಗಳ ಅವ್ಯವಸ್ಥೆ ಬಗ್ಗೆ ಕೇಳಿದರೆ, ಯುಜಿಡಿ ನೆಪ ಹಾಗೂ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯವರು ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡಿದ್ದಾರೆ. ಅಮೃತ ಸಿಟಿ ಯೋಜನೆಯ ಕಾಮಗಾರಿ ಹೆಸರಲ್ಲಿ ಜನರಿಗೆ ಧೂಳು ಉಣಿಸುತ್ತಿದ್ದಾರೆ ಎಂದು ಟೀಕಿಸಿದರು.

ಪೌರಾಯುಕ್ತ ಶ್ರೀಕಾಂತ್ ಮನವಿ ಸ್ವೀಕರಿಸಿ ಮಾತನಾಡಿ, ನಗರದ ರಸ್ತೆಗಳು ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ನಿಜ. ಯುಜಿಡಿ ಟೆಂಡರ್‌ದಾರರನ್ನು ಕರೆದು ಪೈಪ್ ಅಳವಡಿಸಿದ ನಂತರ ರಸ್ತೆ ಸರಿಪಡಿಸುವಂತೆ ಸೂಚಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಾದ ವಡ್ಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ಪೂವಣ್ಣ ಮುಣಿಯಪ್ಪ, ಸುಪ್ರೀಂಚಲ, ಜಗದೀಶ್, ವಿನೋದ್, ರಾಮಮೂರ್ತಿ, ಮುನಿರಾಜು, ಸುನೀಲ್, ಮಾಲೂರು ಅಧ್ಯಕ್ಷ ವೆಂಕಟೇಶ್ ಪಾಲ್ಗೊಂಡಿದ್ದರು.