ಬೂದಿಕೋಟೆ: ಮಾಲೂರು ನೂಟವೆ ಘಟನೆ ಮಾಸುವ ಮುನ್ನವೇ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕಾಡಾನೆಗಳು ಮತ್ತೊಬ್ಬ ರೈತನ ಮೇಲೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೂದಿಕೋಟೆ ಹೋಬಳಿಯ ಭೀಮಗಾನಹಳ್ಳಿ ಗ್ರಾಮದ ಅನ್ವರ್‌ಪಾಷಾ(35) ಎಂಬವರ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ ತುಳಿದು ಗಾಯಗೊಳಿಸಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುತ್ತೇನಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ 5ಕ್ಕೂ ಮೇಲ್ಪಟ್ಟ ಆನೆಗಳ ಗುಂಪು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಟೊಮ್ಯಾಟೊ, ಆಲೂಗಡ್ಡೆ, ಕ್ಯಾರೆಟ್, ಎಲೆಕೋಸು, ರಾಗಿ ಬೆಳೆ ಸೇರಿ ಹಲವಾರು ಬೆಳೆಗಳು ನಾಶ ಮಾಡಿವೆ.
ಮುತ್ತೇನಹಳ್ಳಿ ಗ್ರಾಮದ ರೈತ ಚಂದ್ರಪ್ಪ ಅವರ ಎರಡು ಎಕರೆ ಟೊಮ್ಯಾಟೊ ಬೆಳೆ, ನೀರಿನ ಪೈಪ್ ಮತ್ತು ಹನಿ ನೀರಾವರಿ ಪೈಪ್‌ಗಳನ್ನು ಸಂಪೂರ್ಣ ನಾಶ ಪಡಿಸಿವೆ. ಇದೇ ಗ್ರಾಮದ ರೈತ ರಾಮಚಂದ್ರಪ್ಪಗೆ ಸೇರಿದ ಒಂದು ಎಕರೆ ರಾಗಿ ಬೆಳೆ ಮತ್ತು ಎರಡು ಎಕರೆ ಪ್ರದೇಶದ ಆಲೂಗಡ್ಡೆ, ರವಿಕುಮಾರ್ ಅವರ ಎರಡು ಎಕರೆ ಕ್ಯಾರೆಟ್, ಅನಂತ್ ಅವರಿಗೆ ಸೇರಿದ ಎರಡು ಎಕರೆ ಎಲೆಕೋಸು, ಸುರೇಶ್ ಅವರ ಎರಡು ಎಕರೆ ಎಲೆಕೋಸು ಬೆಳೆ ನಾಶ ಮಾಡಿವೆ.
ಕಳೆದ ಮೂರು ತಿಂಗಳಿಂದ ಬೆಳೆ ನಾಶ ಮಾಡುತ್ತಿದ್ದು, ಎರಡು ದಿನಗಳಿಂದ ರೈತರ ಮೇಲೆ ದಾಳಿ ಮಾಡುತ್ತಿವೆ ದಾಳಿಯಿಂದ ಈಗಾಗಲೆ ಇಬ್ಬರು ಮೃತಪಟ್ಟಿದ್ದು, ಒಬ್ಬ ರೈತ ತೀವ್ರ ಪ್ರಮಾಣದ ಗಾಯಗಳಿಂದ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮತ್ತೊಂದು ಘಟನೆ ನಡೆದಿದ್ದು ಜನರು ಭಯದಲ್ಲೇ ಜೀವನ ನಡೆಸುವಂತಾಗಿದೆ.
ಆನೆ ದಾಳಿಯಿಂದ ತೀವ್ರ ಗಾಯಗೊಂಡಿರುವ ರೈತ ಅನ್ವರ್ ಪಾಷಾ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾಗೆ ದಾಖಲಿಸಲಾಗಿದೆ. ಅವರ ಎಲ್ಲ ಚಿಕಿತ್ಸೆಯನ್ನು ಅರಣ್ಯ ಇಲಾಖೆಯೇ ಭರಿಸಲಿದೆ. ಸಂತೋಷ್, ಆರ್‌ಎಫ್‌ಒ ಬಂಗಾರಪೇಟೆ ಆನೆಗಳ ದಾಳಿಯಿಂದ ಸಾವುಗಳು ಉಂಟಾದರೆ ಮಾತ್ರ ಸಚಿವರು ಮತ್ತು ಅಧಿಕಾರಿಗಳು ಭೇಟಿ ನೀಡುತ್ತಾರೆ. ಅದೇ ದೇಶದ ಬೆನ್ನೆಲುಬು ಎಂದು ಕರೆಯುವ ರೈತರ ಬೆಳೆ ನಾಶವಾದರೆ ಯಾವೊಬ್ಬ ಅಧಿಕಾರಿ ಮತ್ತು ಜನಪ್ರತಿನಿಧಿಗಳೂ ಬರಲ್ಲ. ಪ್ರತಿನಿತ್ಯ ಆನೆ ದಾಳಿ ಬಗ್ಗೆ ಪತ್ರಿಕೆಯವರು ಪ್ರಕಟಿಸಿದರೂ ಯಾವೊಬ್ಬ ಅಧಿಕಾರಿ ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ನವೀನ್, ರೈತ ಮುತ್ತೇನಹಳ್ಳಿ