ಜಿಲ್ಲೆ

ಹವಾಮಾನ ವೈಪರೀತ್ಯದ ಹೊಡೆತಕ್ಕೆ ಮಾವು ಇಳುವರಿಯಲ್ಲಿ ಕುಸಿತ

Kolar

ಪಿ.ಎಸ್.ಹರೀಶ್ ಕೋಲಾರ

ಮುಡಿತುಂಬಾ ಹೂವು ಮುಡಿದು ಘಮಘಮಿಸಬೇಕಿದ್ದ ಮಾವಿನ ತೋಟಗಳಲ್ಲಿ ಸಕಾಲಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಹೂವು ಬಿಡದಿರುವುದರಿಂದ ಪ್ರಸಕ್ತ ವರ್ಷ ಮಾವು ಇಳುವರಿಯನ್ನು ಶೇ.30ರಿಂದ 40ರಷ್ಟು ಮಾತ್ರ ನಿರೀಕ್ಷಿಸಲಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯುವ ಪ್ರದೇಶ ಕೋಲಾರ. ಶ್ರೀನಿವಾಸಪುರ ಮಾವಿನ ತವರೂರು, ಇಲ್ಲಿನ ಮಣ್ಣಿನ ಸೊಗಡಿನಲ್ಲಿ ಬೆಳೆದ ಮಾವಿಗೆ ಅದೇನೋ ರುಚಿ. ಜಿಲ್ಲೆಯ ಒಟ್ಟು 45,265 ಹೆಕ್ಟೇರ್ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ಶ್ರೀನಿವಾಸಪುರದಲ್ಲಿ ಮಾತ್ರವೇ 28,000 ಹೆಕ್ಟೇರ್ ಪ್ರದೇಶವಿದೆ. ಪ್ರಮುಖವಾಗಿ ತೋತಾಪುರಿ, ಬೇನಿಷಾ, ಮಲ್ಲಿಕಾ, ನೀಲಂ, ಬಾದಾಮಿ, ಸಿಂಧೂರ ತಳಿಗಳ ಮಾವು ಹೆಚ್ಚು ಬೆಳೆಯಲಾಗುತ್ತಿದೆ.

ಹವಾಮಾನ ವೈಪರೀತ್ಯ: ಈ ವರ್ಷ ಮಾವು ಏರು ಹಂಗಾಮು ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಪರಿಣಾಮ ಇಳಿ ಹಂಗಾಮಿನಂತಾಗಿದೆ. ಸಾಮಾನ್ಯವಾಗಿ ನವೆಂಬರ್ ಕಡೇ ವಾರ ಅಥವಾ ಡಿಸೆಂಬರ್‌ನಲ್ಲಿ ಮಾವು ಹೂವು ಬಿಡುತ್ತಿತ್ತು. ಈ ಬಾರಿ ತಂಪು ವಾತಾವರಣ ಇದ್ದುದರಿಂದ ಹೂವು ಬಿಡುವ ಪ್ರಕ್ರಿಯೆ ಒಂದೂವರೆ ತಿಂಗಳು ವಿಳಂಬವಾಗಿದೆ. ಫೆಬ್ರವರಿ ಎರಡನೇ ವಾರಕ್ಕೆ ಶೇ. 46ರಷ್ಟು ಹೂವು ಬಿಟ್ಟಿದ್ದರೆ ತಿಂಗಳಾಂತ್ಯಕ್ಕೆ ಶೇ. 50ರಷ್ಟು ಹೂವು ಬಿಟ್ಟಿದೆ.

ಯಾವ್ಯಾವ ತಳಿ ಎಷ್ಟು?: ಜಿಲ್ಲೆಯಲ್ಲಿ 4683.22 ಹೆಕ್ಟೇರ್‌ನಲ್ಲಿ ಬಾದಾಮಿ ತಳಿಯ ಮಾವು ಇದ್ದು, ಶೇ.40ರಿಂದ 45ರಷ್ಟು ಪ್ರಮಾಣದಲ್ಲಿ ಹೂವು ಬಿಟ್ಟಿದೆ. ತೋತಾಪುರಿ 29,130 ಹೆಕ್ಟೇರ್ ಪ್ರದೇಶವಿದ್ದು, ಶೇ.55ರಿಂದ 60ರಷ್ಟು ಹೂವು ಬಿಟ್ಟಿದೆ, ಬೇನಿಶಾ 2371 ಹೆಕ್ಟೇರ್ ಪೈಕಿ ಶೇ.20ರಿಂದ 25ರಷ್ಟು ಮಾತ್ರ ಹೂವು ಬಿಟ್ಟಿದೆ. ಮಲ್ಲಿಕ 4683 ಹೆಕ್ಟೇರ್ ಪ್ರದೇಶದಲ್ಲಿದ್ದು, ಶೇ.40ರಷ್ಟು ಹೂವು ಅರಳಿದೆ. ಉಳಿದಂತೆ ಮಲಗೋವಾ 218 ಹೆಕ್ಟೇರ್, ರಾಜಗಿರ 442 ಹೆಕ್ಟೇರ್, ನೀಲಂ 4598 ಹೆಕ್ಟೇರ್, ಇತರ ತಳಿಯ ಮಾವುಗಳು 415 ಹೆಕ್ಟೇರ್‌ನಲ್ಲಿದ್ದು, ಶೇ.25ರಿಂದ 30ರಷ್ಟು ಹೂವು ಬಿಟ್ಟಿರಬಹುದೆಂದು ಅಂದಾಜಿಸಲಾಗಿದೆ.

ಫಸಲು ಕಡಿಮೆ-ಉತ್ತಮ ದರ: ಈ ವರ್ಷ ಹೂವು ಬಿಟ್ಟಿರುವ ಪ್ರಮಾಣ ಕಡಿಮೆಯಾಗಿರುವುದರಿಂದ ಫಸಲು ಕೂಡ ಕಡಿಮೆಯಾಗಲಿದ್ದು, ಶೇ.30ರಿಂದ 40ರಷ್ಟು ಮಾತ್ರ ಇಳುವರಿ ಸಿಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಒಣ ಪ್ರದೇಶದಲ್ಲಿ ಮಾವು ಬೆಳೆಯುವುದರಿಂದ ಎರಡ್ಮೂರು ಬಾರಿ ನೀರುಣಿಸಿದರೆ ಫಸಲು ಕಾಪಾಡಿಕೊಳ್ಳಬಹುದು.

ಔಷಧೋಪಚಾರ: ಜಿಲ್ಲೆಯಲ್ಲಿ ಮಾವಿಗೆ ಜಿಗಿಹುಳು ಬಾಧೆ ಹೆಚ್ಚು. ಹೂವು ಮೊಗ್ಗು ಹೊರಟ ನಂತರ ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ 1.7 ಮಿಲೀ ಅಥವಾ ಕ್ಲೋರೋಪೈರಿಫಸ್ 2 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ನೆಲ್ಲಿಕಾಯಿ ಗಾತ್ರಕ್ಕೆ ಮಿಡಿ ಬೆಳೆದ ಸಂದರ್ಭದಲ್ಲಿ ಮ್ಯಾಂಗೋ ಸ್ಪೆಷಲ್ 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಶ್ರೀನಿವಾಸಪುರದ ಹೊಗಳಗೆರೆಯ ಮಾವು ಉತೃಷ್ಟ ಕೇಂದ್ರದಲ್ಲಿ ಶೇ. 50ರ ರಿಯಾಯಿತಿ ದರಕ್ಕೆ ರೈತರಿಗೆ ನೀಡಲಾಗುತ್ತಿದೆ. ಎಕರೆಗೆ 8ರಿಂದ 10 ಲಿಂಗಾಕರ್ಷಕ ಮೋಹಕಬಲೆ ಕಟ್ಟುವುದರಿಂದ ಹಣ್ಣಿನ ನೊಣಗಳ ನಿಯಂತ್ರಣ ಸಾಧ್ಯ.

ಜಿಲ್ಲೆಯಲ್ಲಿ ಈ ವರ್ಷ ಮಾವು ಶೇ.45ರಿಂದ 59ರಷ್ಟು ಮಾತ್ರ ಹೂವು ಬಿಟ್ಟಿದ್ದು, ಶೇ.40ರಷ್ಟು ಇಳುವರಿ ನಿರೀಕ್ಷಿಸಲಾಗಿದೆ. ಮಾವು ಕಾಯಿಕಚ್ಚಿದ ನಂತರ ಎರಡ್ಮೂರು ಬಾರಿ ನೀರುಣಿಸಿ ಫಸಲು ಉಳಿಸಿಕೊಂಡಲ್ಲಿ ಈ ವರ್ಷ ರೈತರಿಗೆ ಉತ್ತಮ ಧಾರಣೆ ಸಿಗಲಿದೆ.

ಎಂ.ಗಾಯತ್ರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಕೋಲಾರ

ಈ ವರ್ಷ ಮಾಮರಗಳಲ್ಲಿ ಸರಿಯಾಗಿ ಹೂವು ಬಿಟ್ಟಿಲ್ಲ. ತಂಪಾದ ವಾತಾವರಣದಿಂದ ಶೇ.20ರಷ್ಟು ಮರಗಳಲ್ಲಿ ಚಿರಗು ಬಂದಿದೆ. ಹೂವು ಬಿಟ್ಟ ಮರಗಳಲ್ಲಿ ಈಗಾಗಲೆ ಜಿಗಿಹುಳು ಕಾಣಿಸಿಕೊಂಡಿದ್ದು, ಔಷಧ ಸಿಂಪಡಿಸಿದರೂ ಹೂವು ಬೆಂದು ಕಪ್ಪಾಗಿದೆ. ಈನಿರೀಕ್ಷಿತ ಫಸಲು ಸಿಗುವುದು ಅನುಮಾನ. ಕೊಯ್ಲು ತಡವಾಗಲಿರುವುದರಿಂದ ಪೂರ್ವ ಮುಂಗಾರು ಮಳೆಯ ಭೀತಿ ಇದೆ.

ಟಿ.ವಿ. ರಮೇಶ್, ಮಾವು ಬೆಳೆಗಾರ, ಕೋಲಾರ