ಜಿಲ್ಲೆ

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೋಲಾರ ನಗರಸಭೆಯಿಂದ ಸ್ವಚ್ಛತೆ, ಕಸಮುಕ್ತ ನಗರಕ್ಕೆ ಪಣ

Kolar

ಪಿ.ಎಸ್. ಹರೀಶ್ ಕೋಲಾರ

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೋಲಾರ ನಗರಸಭೆಯಿಂದ ಸ್ವಚ್ಛತೆ ಅರಿವು ಮೂಡಿಸಲು ಆಂದೋಲನ, ಗೋಡೆಬರಹ, ಬೀದಿನಾಟಕ, ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಇನ್ನಿತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರಸಭೆ 35 ವಾರ್ಡ್‌ಗಳನ್ನು ಹೊಂದಿದ್ದು, ಜನಸಂಖ್ಯೆ 1.60 ಲಕ್ಷ ದಾಟಿದೆ. ದಿನನಿತ್ಯ 60 ಟನ್ ತ್ಯಾಜ್ಯ ಹೊರಬೀಳುತ್ತಿದೆ. 4 ವರ್ಷಗಳ ಹಿಂದೆ ಕ್ಲೀನ್ ಸಿಟಿ ಎಂಬ ಹೆಸರಿಗೆ ಭಾಜನವಾಗಿದ್ದ ಕೋಲಾರದಲ್ಲಿ ಸ್ವಚ್ಛತಾ ಕಾರ್ಯ ಹಳಿತಪ್ಪಿ ಗಾರ್ಬೇಜ್ ಸಿಟಿಯಂತಾಗಿದೆ. ಪೌರ ಕಾರ್ಮಿಕರ ಕೊರತೆಯಿದೆ. ಮೂಲದಲ್ಲೇ ಹಸಿ ಮತ್ತು ಒಣಕಸ ಪ್ರತ್ಯೇಕಿಸಿ ನೀಡುವಲ್ಲಿ ಸಾರ್ವಜನಿಕರ ಅಸಹಕಾರವೂ ಕಾರಣ. ಇದೀಗ ಮತ್ತೆ ಜನಜಾಗೃತಿ ಮೂಡಿಸಲು ಮುಂದಾಗಿದೆ.

8 ಲಕ್ಷ ರೂ. ಬಿಡುಗಡೆ: ನಗರಸಭೆಗೆ 2014-15ನೇ ಸಾಲಿನಲ್ಲಿ 8 ಲಕ್ಷ ರೂ. ಮಂಜೂರಾಗಿತ್ತು. ಕಳೆದ ವರ್ಷ ಅನುದಾನ ಬಿಡುಗಡೆಯಾಗಿದ್ದು, 1.50 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದರಡಿ ಜನರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮ ರೂಪಿಸಿದೆ.

ಜಾಗೃತಿ ಕಾರ್ಯಕ್ರಮ: 35 ವಾರ್ಡ್‌ಗಳಲ್ಲಿ ಸ್ವಚ್ಛತಾ ಆಂದೋಲನ, ವಿದ್ಯಾರ್ಥಿಗಳ ಸಹಕಾರದಿಂದ ಜಾಥಾ, ಪ್ರಮುಖ ವೃತ್ತ, ಜನಸಂದಣಿ ಸ್ಥಳಗಳಲ್ಲಿ ಬೀದಿ ನಾಟಕದ ಮೂಲಕ ಸ್ವಚ್ಛತೆ ಜಾಗೃತಿ ಮೂಡಿಸುವುದು, ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ರಂಗೋಲಿ ಇನ್ನಿತರ ಸ್ಪರ್ಧೆ, ಸಾರ್ವಜನಿಕ ಪ್ರಕಟಣೆಯಡಿ ಮನೆಮನೆಗೆ ಕರಪತ್ರ ವಿತರಣೆ, ಭಿತ್ತಿಪತ್ರದ ಮೂಲಕ ಪ್ರಚುರಪಡಿಸಲು ಉದ್ದೇಶಿಸಲಾಗಿದೆ.

ಆಕರ್ಷಕ ಗೋಡೆ ಬರಹ: ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ಗೋಡೆ ಬರಹ ಬರೆಸಲು ಸೋಮವಾರ ಚಾಲನೆ ನೀಡಲಾಗಿದೆ. ಮೆಕ್ಕೆ ವೃತ್ತ, ಕ್ಲಾಕ್ ಟವರ್ ಸಮೀಪದ ಪ್ಲೈ ಓವರ್ ಸೇರಿ ಹತ್ತಾರು ಕಡೆ ಗೋಡೆಬರಹ ಬರೆಸಲು ಉದ್ದೇಶಿಸಿದ್ದು, ನಗರಸಭೆ ಕಾಂಪೌಂಡ್‌ನಲ್ಲಿ ಚಿತ್ರಗಳು ಅರಳಿವೆ.

ಮನೆ ಕಸವನ್ನು ವಿಲೇವಾರಿ ವಾಹನಗಳಿಗೆ ನೀಡಿ ಸ್ವಚ್ಛತೆ ಮತ್ತು ಕಸಮುಕ್ತ ನಗರವಾಗಿಡಲು ಸಹಕರಿಸಿ, ಪ್ಲಾಸ್ಟಿಕ್ ನಿರ್ಮೂಲನೆಗೆ ಕೈ ಜೋಡಿಸಿ, ಬಯಲು ಶೌಚಮುಕ್ತ ನಗರವನ್ನಾಗಿಸಲು ಸಹಕರಿಸಿ, ಹಸಿಕಸ, ಒಣಕಸ ವಿಂಗಡಿಸಿ ಎಂಬ ಒಕ್ಕಣೆಯೊಂದಿಗೆ ಆಕರ್ಷಕ ಚಿತ್ರಗಳು ಗಮನ ಸೆಳೆಯುತ್ತಿವೆ.

ಸಂಸ್ಥೆಗೆ ಹೊಣೆ: ಜಾಗೃತಿ ಕಾರ್ಯಕ್ರಮಗಳ ನಿರ್ವಹಣೆ ಜವಾಬ್ದಾರಿಯನ್ನು ಮೈಸೂರಿನ ಗ್ರೀನ್ ಗ್ರಾಮಾಭಿವೃದ್ಧಿ ಸಂಸ್ಥೆ ವಹಿಸಿಕೊಂಡಿದ್ದು, ಸಂಯೋಜನಾಧಿಕಾರಿಗಳಾದ ಮಹದೇವಸ್ವಾಮಿ ಮತ್ತು ಎಂ.ಶಿವಪ್ಪ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಸಾಧನೆ: 2014-15ನೇ ಸಾಲಿನಲ್ಲೇ ನಗರ ಬಯಲು ಬಹಿರ್ದೆಸೆಮುಕ್ತ (ಒಡಿಎಫ್)ವಾಗಿದೆ. ನಗರದಲ್ಲಿ ಎಲ್ಲ ಮನೆಗಳಿಗೆ ಯುಜಿಡಿ ಸಂಪರ್ಕ ಮತ್ತು ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಶೇ.90 ಸಾಧನೆ ಆಗಿದ್ದು, ಪೂರ್ಣಗೊಂಡಲ್ಲಿ ಒಡಿಎಫ್ ಪ್ಲಸ್‌ಗೆ ನಗರಸಭೆ ಅರ್ಹತೆ ಪಡೆಯುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಮತ್ತೆ ಸಂಕಷ್ಟ?: ತ್ಯಾಜ್ಯ ವಿಲೇವಾರಿ ಘಟಕ ಹೊಂದಲು ಸೂಕ್ತ ಜಾಗಕ್ಕಾಗಿ ನಗರಸಭೆ ದಶಕಗಳಿಂದ ಹರಸಾಹಸಪಡುತ್ತಿದೆ. ಗುರುತಿಸಿದ ಜಾಗ ಕೈಗೆ ಬರುವಷ್ಟರಲ್ಲಿ ಕೈ ಜಾರುತ್ತಿದೆ. ಮುಳಬಾಗಲು ರಸ್ತೆಯ ಪೊಂಬರಹಳ್ಳಿ ಬಳಿ ಗುರುತಿಸಿದ್ದ ಜಾಗ ಕೋಲಾರದ ವೀರಾಪುರದಲ್ಲಿನ ಡಿಆರ್‌ಡಿಒ ಸಂಸ್ಥೆಯ 20 ಕಿಮೀ ಒಳಗಿನ ಬಫರ್‌ಜೋನ್ ವ್ಯಾಪ್ತಿಯಲ್ಲಿರುವ ಕಾರಣಕ್ಕೆ ಪರಿಸರ ಇಲಾಖೆಯಿಂದ ಎನ್‌ಒಸಿ ಸಿಕ್ಕಿಲ್ಲ. ಸ್ಥಳೀಯರ ವಿರೋಧ ವ್ಯಕ್ತವಾಗಿರುವುದರಿಂದ ಈ ಜಾಗವೂ ಕೈ ಜಾರಿದಂತೆಯೇ!

ಸ್ವಚ್ಛ ಭಾರತ್ ಮಿಷನ್ ಅಡಿ ಸ್ವಚ್ಛತೆ ಕುರಿತು ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ನಗರಸಭೆಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಸಮುಕ್ತ ನಗರವಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಆರ್.ಶ್ರೀಕಾಂತ್, ಪೌರಾಯುಕ್ತ, ಕೋಲಾರ ನಗರಸಭೆ ಸಾರ್ವಜನಿಕ ಸ್ಥಳಗಳಲ್ಲಿ ಬರೆದಿರುವ ಗೋಡೆಬರಹಗಳು ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದು, ತಡೆಯುವ ಸಲುವಾಗಿ ಸ್ವಚ್ಛತೆ ಜಾಗೃತಿ ಮೂಡಿಸುವ ಚಿತ್ರ ಬರೆಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ರಸಪ್ರಶ್ನೆ, ರಂಗೋಲಿ ಸ್ಪರ್ಧೆ ನಡೆಸಲಾಗುವುದು. ಎಂ.ಎಸ್.ಪುನೀತ್, ಪರಿಸರ ಇಂಜಿನಿಯರ್, ಕೋಲಾರ ನಗರಸಭೆ