ಜಿಲ್ಲೆ

ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ ವಿದ್ಯಾವಂತರಿಗೆ ಕೌಶಲ ತರಬೇತಿಗೆ ಒತ್ತು

Kolar

ಕೋಲಾರ: ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ ವಿದ್ಯಾವಂತರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರ ಹೊರವಲಯದ ಸಿಬಿಐಟಿ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್‌ನಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಕ್ಕಿಲ್ಲ. ಉದ್ಯೋಗಾವಕಾಶ ಇದ್ದರೂ ಕೌಶಲ ಕೊರತೆಯಿಂದ ಅನೇಕರು ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸಕ್ತರಿಗೆ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ ಕೌಶಲ ತರಬೇತಿ ನೀಡಲು ಒತ್ತು ನೀಡಲಾಗುವುದು ಎಂದರು.

ಪದವಿ ಪಡೆದಿರುವ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟ. ಸದ್ಯ ಅವಕಾಶ ಸಿಕ್ಕ ಕ್ಷೇತ್ರದಲ್ಲಿ ದುಡಿದು ಜೀವನ ರೂಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಸ್ವಯಂ ಉದ್ಯೋಗ ಕೈಗೊಂಡು ಬೇರೆಯವರಿಗೂ ಕೆಲಸ ನೀಡಬೇಕು. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾವಂತ ನಿರುದ್ಯೋಗಿಗಳು ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಉದ್ಯೋಗವನ್ನು ಮನೆ ಬಾಗಿಲಿಗೆ ಕಲ್ಪಿಸುವ ಕೆಲಸ ಮಾಡಿದ್ದು, ಉದ್ಯೋಗ ಪಡೆದವರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ ಅವರು, ಇನ್ನು ಮುಂದೆ ವರ್ಷಕೊಮ್ಮೆ ಬೃಹತ್ ಉದ್ಯೋಗ ಮೇಳ ನಡೆಸಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಮೇಳಕ್ಕೆ 16,000ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. 280 ಉದ್ಯೋಗದಾತ ಕಂಪನಿಗಳು ಭಾಗವಹಿಸಿದ್ದವು. ಮೇಳದ ಮೊದಲ ದಿನ 800 ಮಂದಿಗೆ ಸ್ಥಳದಲ್ಲೇ ಉದ್ಯೋಗವಕಾಶ ಕಲ್ಪಿಸಲಾಗಿದೆ. 400ಕ್ಕೂ ಹೆಚ್ಚು ಮಂದಿಯನ್ನು ಅಂಪ್ರೆಂಟಿಶಿಪ್‌ಗೆ ಅವಕಾಶ ನೀಡಲಾಗಿದೆ. 2ನೇ ದಿನವೂ ಇನ್ನಷ್ಟು ಮಂದಿಗೆ ಉದ್ಯೋಗಾವಕಾಶ ಸಿಕ್ಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಸ್ವಾಮಿ, ಉಪವಿಭಾಗಾಧಿಕಾರಿ ಸೋಮಶೇಖರ್, ನಗರಸಭೆ ಪೌರಾಯುಕ್ತ ಆರ್. ಶ್ರೀಕಾಂತ್, ಸಿಬಿಐಟಿ ಕಾಲೇಜು ಕಾರ್ಯದರ್ಶಿ ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್, ಡಿಐಸಿ ಜಂಟಿ ನಿರ್ದೇಶಕ ಎಸ್. ಬಿ. ಪೂಜಾರ್, ಉಪ ನಿರ್ದೇಶಕ ಎನ್. ರವಿಚಂದ್ರ ಇತರರಿದ್ದರು.