ಜಿಲ್ಲೆ

ಅರಣ್ಯೀಕರಣದಿಂದ ಪರಿಸ್ಥಿತಿ ಸುಧಾರಣೆ

Kolar

ಕೋಲಾರ: ಜಿಲ್ಲೆ ಎದುರಿಸುತ್ತಿರುವ ನೀರಿನ ಬವಣೆಯ ಪರಿಸ್ಥಿತಿ ಸುಧಾರಿಸಲು ಪೂರಕವಾಗುವಂತೆ ಕೃಷಿ ಅರಣ್ಯ ಚಟುವಟಿಕೆ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸಾಮಾಜಿಕ ಅರಣ್ಯ ಇಲಾಖೆಯಿಂದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವೃತ್ತ ಮಟ್ಟದ ಕೃಷಿ ಅರಣ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಲ್ಲ. ಮೊದಲು ನೀರಿನ ಬವಣೆ ಸರಿದೂಗಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಅರಣ್ಯೀಕರಣ ಚಟುವಟಿಕೆ ಕೈಗೊಳ್ಳಲು ರೈತರನ್ನು ಉತ್ತೇಜಿಸಬೇಕು ಎಂದು ಸೂಚಿಸಿದರು.

ಶ್ರೀಗಂಧ ಲಾಭದಾಯಕ ಬೆಳೆ. ಜಿಲ್ಲೆಯ ಅನುಕೂಲಕ್ಕೆ, ನೀರಿನ ಲಭ್ಯತೆಗೆ ಅನುಗುಣವಾಗಿ ಏನು ಬೆಳೆಯಬಹುದು ಎಂಬುದನ್ನು ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿಸಿಕೊಡಬೇಕು. ಕೃಷಿ ಅರಣ್ಯೀಕರಣದಡಿ ಕೆಲವೊಂದು ಜಾತಿಯ ಗಿಡಮರಗಳ ಬೆಳೆಗೆ ವಿಮಾ ಸೌಲಭ್ಯ ಇಲ್ಲದಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಎತ್ತಿನಹೊಳೆ ಅನುಷ್ಠಾನ ಶತಸಿದ್ಧ: ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳ್ಳಬೇಕು. ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸಂಸದರು, ಎಲ್ಲ ಶಾಸಕರು, ಜಿಪಂ ಜನಪ್ರತಿನಿಧಿಗಳು ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಿಎಂ ಜತೆ ಚರ್ಚಿಸಿ ಆದಷ್ಟು ಬೇಗ ಜಿಲ್ಲೆಗೆ ನೀರು ತಂದೇ ತರುತ್ತೇನೆ. ಇದು ನನ್ನ ಶಪಥ ಎಂದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ರೈತ ದೇಶದ ಬೆನ್ನೆಲುಬು. ಜಿಲ್ಲೆಯ ರೈತ ದೇಶಕ್ಕೆ ಬೆನ್ನೆಲುಬು. ಇಂತಹ ಕಾರ್ಯಾಗಾರಗಳಲ್ಲಿ ರೈತರು ಭಾಗವಹಿಸುವುದರಿಂದ ಸರ್ಕಾರದ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ಸಿಕ್ಕಂತಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಶ್ರೀಗಂಧಕ್ಕೆ ಉತ್ತಮ ಬೇಡಿಕೆ ಇದೆ. ಕೋಲಾರ ಜಿಪಂ ರೈತರ ಪರವಾಗಿರುತ್ತದೆ. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಅಜಯ್ ಮಿಶ್ರಾ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ನಡೆದ ಸರ್ವೇಯಲ್ಲಿ ರಾಜ್ಯದಲ್ಲಿ 1025 ಚದರ ಕಿಮೀ ಅರಣ್ಯ ಹೆಚ್ಚಳವಾಗಿದ್ದು ಕಂಡುಬಂದಿದೆ. ಕೃಷಿ ಲಾಭದಾಯಕವನ್ನಾಗಿಸಲು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಲ್ಲಿ ಕೃಷಿ ಅರಣ್ಯವೂ ಮುಖ್ಯವಾದುದು. 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿಗಳ ಮಹತ್ವಾಕಾಂಕ್ಷೆ ಈಡೇರಲು ಕೃಷಿ ಅರಣ್ಯ ಸಹಕಾರಿಯಾಗಲಿದೆ ಎಂದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಮಾತನಾಡಿ, ಕೃಷಿ ಅರಣ್ಯ ಚಟುವಟಿಕೆ ಕೈಗೊಳ್ಳಲು ಸಬ್ಸಿಡಿ ಸೌಲಭ್ಯಕ್ಕೆ ಸರ್ಕಾರ ಆದೇಶ ಮಾಡಿದೆ ಎಂದರು.

ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಜಿಪಂ ಸದಸ್ಯರಾದ ಅರವಿಂದ್, ಅರುಣ್ ಪ್ರಸಾದ್, ಮುಳಬಾಗಲಿ ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಡಿಎಫ್‌ಒ ಚಕ್ರಪಾಣಿ, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ದೇವರಾಜ್, ನಿವೃತ್ತ ಡಿಎಫ್‌ಒ ಚಂದ್ರಪ್ರಭಾ, ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷ ವೆಂಕಟಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಬಾಲಕೃಷ್ಣ, ಜಗನ್ನಾಥರೆಡ್ಡಿ, ಡಾ. ಹನುಮಂತಪ್ಪ, ಜಿಲ್ಲಾ ಜಾಗೃತಿ ಸಮತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಇತರರು ಹಾಜರಿದ್ದರು.