ಜಿಲ್ಲೆ

ದೇಶದ ಅಭಿವೃದ್ಧಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ

ಕೋಲಾರ: ಜಿಎಸ್‌ಟಿ ಅನುಷ್ಠಾನಗೊಂಡ ನಂತರ ತೆರಿಗೆ ಸಂಗ್ರಹಣೆಯ ಬೆಳವಣಿಗೆ ಕಡಿಮೆಯಾಗಿದ್ದು, ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು ಎಂದು ವಾಣಿಜ್ಯ ತೆರಿಗೆ ಆಯುಕ್ತ (ಆಡಳಿತ) ಕೆ.ಎಸ್. ನಿಂಗೇಗೌಡ ವರ್ತಕರಲ್ಲಿ ಕೋರಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸರಕು ಮತ್ತು ಸೇವಾ ತೆರಿಗೆ ಇಲಾಖೆ ಹಾಗೂ ವಿವಿಧ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಮಾತನಾಡಿದರು.

ತೆರಿಗೆ ಸಂಗ್ರಹಣೆಯ ಗುರಿ ಸಾಧಿಸಲು ಪ್ರಧಾನಿ ಕಡೆಯಿಂದ ಎಲ್ಲ ರಾಜ್ಯಗಳ ಸಿಎಂ ಜತೆ ಪ್ರತಿ ತಿಂಗಳು ಚರ್ಚೆಯಾಗುತ್ತ್ತದೆ. ನಿರೀಕ್ಷಿಸಿದಷ್ಟು ತೆರಿಗೆ ಸಂಗ್ರಹ ಬೆಳವಣಿಗೆ ಕಾಣುತ್ತಿಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು. ಜಿಎಸ್‌ಟಿ ಕುರಿತು ಅರಿವು ಮೂಡಿಸುವ ಕೆಲಸ ಇನ್ನಷ್ಟು ನಡೆದರೆ ಸುಧಾರಣೆ ಕಾಣಬಹುದು ಎಂದರು.

ಸರಕು ಮತ್ತು ಸೇವಾ ತೆರಿಗೆ ಕಚೇರಿ-4 ವಿಭಾಗ ವ್ಯಾಪ್ತಿಯಲ್ಲಿ 90,000 ಡೀಲರ್‌ಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಶೇ. 65 ಮಂದಿ ಮಾತ್ರ ರಿಟರನ್ಸ್ ಫೈಲ್ ಮಾಡಿದರೆ ಉಳಿದ ಶೇ.35 ಮಂದಿ ಫೈಲ್ ಮಾಡುತ್ತಿಲ್ಲ. ಏಪ್ರಿಲ್ 1ರಿಂದ ಹೊಸ ರಿಟರನ್ಸ್ ಬರುವುದರಿಂದ ಈಗಲೇ ಆ ಬಗ್ಗೆ ಮಾಹಿತಿ ಪಡೆದು ವ್ಯಾಪಾರ ವಹಿವಾಟು ದಾಖಲಿಸುವುದನ್ನು ಕಲಿಯುತ್ತಾ ಹೋದರೆ ಲೋಪ ಸರಿಪಡಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ತೆರಿಗೆ ಪರಿಣಿತ ಆರ್.ಜಿ. ಮುರಳೀಧರ್ ಮಾತನಾಡಿ, ಜಿಎಸ್‌ಟಿ ವಿಚಾರದಲ್ಲಿ ಸಾಕಷ್ಟು ಗೊಂದಲ ಉಳಿದಿದೆ. ಕೇಂದ್ರ ರೂಪಿಸಿರುವ ಅಂಶಗಳಲ್ಲಿ ಸಮಸ್ಯೆಗಳಿದ್ದರೂ ಸರ್ಕಾರವನ್ನು ಎದುರುಹಾಕಿಕೊಳ್ಳಬಾರದು, 1ರಿಂದ 9ರ ಕಲಂಗಳಲ್ಲಿ ಮಾಹಿತಿಗಳನ್ನು ದಾಖಲಿಸುತ್ತಲೇ ಇರಿ, ರಿಟರನ್ಸ್ ಫೈಲ್ ಮಾಡುವುದು ವಿಳಂಬವಾದರೆ ಆತಂಕಕ್ಕೀಡಾಗುವ ಅಗತ್ಯವಿಲ್ಲ, ಸಮಸ್ಯೆಗಳನ್ನೂ ದಾಖಲಿಸಿ, ಮಾರ್ಪಾಡು ಮಾಡುವವರೆಗೆ ಇರುವ ವ್ಯವಸ್ಥೆಯನ್ನೇ ಪಾಲಿಸುವುದು ನಮ್ಮ ಧರ್ಮ ಎಂದರು.

ವರ್ತಕರು ಸರಿಯಾದ ಲೆಕ್ಕಗಳನ್ನು ನಿರ್ವಹಿಸದೆ ಲೆಕ್ಕಪರಿಶೋಧಕರು ನೋಡಿಕೊಳ್ಳುತ್ತಾರೆ ಎಂದರೆ ಸಾಧ್ಯವಾಗದು. ಆಯಾ ದಿನದ ವ್ಯಾಪಾರ ವಹಿವಾಟುಗಳ ವಿವರಗಳನ್ನು ಅಂದೇ ದಾಖಲಿಸಿಟ್ಟುಕೊಳ್ಳಬೇಕು. ಸೆಕ್ಷನ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆಯಾ ಲೆಕ್ಕಶೀರ್ಷಿಕೆ ಕಲಂಗೆ ತಕ್ಕ ಮಾಹಿತಿ ನೀಡಬೇಕು ಎಂದು ಪ್ರಶ್ನೋತ್ತರ ಅವಧಿಯಲ್ಲಿ ವರ್ತಕರ ಸಂದೇಹಗಳನ್ನು ನಿವಾರಿಸಿದರು.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತೆ ಸಹನಾ, ಜಿಲ್ಲಾ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವಿ. ಕೃಷ್ಣ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.