ಕೋಲಾರ: ಕೋಲಾರದ ಅಂತರಗಂಗೆ ಬೆಟ್ಟ, ಚಿಕ್ಕಬಳ್ಳಾಪುರದ ಗುಡಿಬಂಡೆಯ ಆದಿನಾರಾಯಣಸ್ವಾಮಿ ಬೆಟ್ಟ ಸೇರಿ 10 ಸ್ಥಳಗಳನ್ನು ಜೈವಿಕ ಪಾರಂಪರಿಕ ತಾಣವಾಗಿ ಘೋಷಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ದೇವನಹಳ್ಳಿಯ ನಲ್ಲೂರು ಹುಣಸೆತೋಪು, ಬೆಂಗಳೂರು ಕೃಷಿ ವಿವಿಯ ಸುಮಾರು 300 ಎಕರೆಯಲ್ಲಿನ ನೈಸರ್ಗಿಕ ಕಾಡು, ಚಿಕ್ಕಮಗಳೂರಿನ ಕಡೂರು ಬೆಟ್ಟ ಹಾಗೂ ಕೊಡಚಾದ್ರಿಗೆ ಹೊಂದಿಕೊಂಡಿರುವ ಅಂಬಾರಗುಡ್ಡ ಬೆಟ್ಟವನ್ನು ಜೀವವೈವಿಧ್ಯ ಪ್ರದೇಶಗಳಾಗಿ ಘೋಷಿಸಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೋಲಾರದ ಅಂತರಗಂಗೆ ಬೆಟ್ಟ ಸೇರಿ ಇನ್ನೂ 10 ಪ್ರದೇಶಗಳನ್ನು ಘೋಷಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.
ಅಂತರಗಂಗೆ ಬೆಟ್ಟ ಜೀವ ವೈವಿಧ್ಯ ಸಮಿತಿಯಿಂದ ಗುರುತಿಸಲ್ಪಟ್ಟಿದೆ. ರಾಜ್ಯ ಮಟ್ಟದಲ್ಲಿ ಜೀವ ವೈವಿಧ್ಯ ಮಂಡಳಿ ಗುರುತಿಸಿ ನಿರ್ಣಯ ಕೈಗೊಂಡಿದ್ದು, ಜೈವಿಕ ಪಾರಂಪರಿಕ ತಾಣವಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಿಸುವುದು ಬಾಕಿಯಿದೆ. ಇದಕ್ಕೆ ಸಂಬಂಧಿಸಿದಂತೆ ವರದಿ ಕಳುಹಿಸಿಕೊಡಲು ಡಿಸಿ, ಡಿಎಫ್‌ಒ ಅವರಿಗೆ ಸೂಚಿಸಲಾಗಿದೆ ಎಂದರು.
ಅಂತರಗಂಗೆ ಬೆಟ್ಟವನ್ನು ನಾನು 10 ವರ್ಷದ ಹಿಂದೆ ನೋಡಿದ್ದಕ್ಕೂ ಈಗಿನ ಸ್ಥಿತಿಗೂ ಅಂತರವಿದೆ. ಇಲ್ಲಿ ಕಂದಾಯ ಜಮೀನು, ಅರಣ್ಯ ಇಲಾಖೆಯ ಸಂರಕ್ಷಿತ ಅರಣ್ಯ, ಖಾಸಗಿ ಜಮೀನು ಇರುವುದರಿಂದ ಒತ್ತುವರಿ ಇನ್ನಿತರ ಪರಿಸರಕ್ಕೆ ಮಾರಕವಾದ ಚಟುವಟಿಕೆ ನಿಯಂತ್ರಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಕಂಡುಕೊಂಡು ಬೆಟ್ಟ ಮತ್ತು ಮತ್ತು ಜಲಧಾರೆಯನ್ನು ಕಾಪಾಡಬೇಕು ಎಂದರು.
ರಾಯಲ್ಪಾಡು ಬೆಟ್ಟ: ಶ್ರೀನಿವಾಸಪುರದ ಗಡಿ ರಾಯಲ್ಪಾಡು ಅರಣ್ಯ ಪ್ರದೇಶದ ಬೆಟ್ಟಗಳಲ್ಲಿ ವಿನಾಶದ ಅಂಚಿನಲ್ಲಿ ಅನೇಕ ಸಸ್ಯ ಪ್ರಬೇಧಗಳಿವೆ. ಅಪರೂಪದ ಕೋಲಾರ ಸಾಂಬಾರ್ ಗಿಡ ಎಂಬ ಸಸ್ಯದ ರಕ್ಷಣೆಗೆ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಮುಳಬಾಗಿಲಿನ ಹನುಮನಹಳ್ಳಿಯಲ್ಲಿ ಎಲೆಮೂತಿ ಬಾವಲಿಗಳಿರುವುದರಿಂದ 150 ಹೆಕ್ಟೇರ್ ಜಾಗವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದು, ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಗಣಿಗಾರಿಕೆಯಿಂದ ಜೀವವೈವಿಧ್ಯಕ್ಕೆ ಹಾನಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಡಿಸಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ನಿರ್ದೇಶಿಸಲಾಗಿದೆ ಎಂದರು.
ಕೆಸಿ ವ್ಯಾಲಿ ಯೋಜನೆ ಕಾಮಗಾರಿ ಸಂಬಂಧ ಯಲಹಂಕದಲ್ಲಿರುವ ಕೆರೆ ಸುತ್ತಲಿರುವ ಮರ ಕಟಾವು ಕುರಿತು ಮುಂದಿನ ವಾರ ಸಭೆ ನಡೆಯಲಿದ್ದು, ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸುತ್ತಿರುವ ನೀರಿನಿಂದ ಪರಿಸರದ ಮೇಲಾಗಿರುವ ಹಾನಿ ಬಗ್ಗೆ ಸಚಿವ ಯೋಗೇಶ್ವರ್ ಜತೆ ಚರ್ಚಿಸಲಾಗುವುದು ಎಂದರು.
ಮಾದರಿ ಯೋಜನೆ: ರಕ್ತಚಂದನ ಬೆಲೆಬಾಳುವಂತಹದ್ದು. ಬೇರೆಡೆ ಬೆಳೆಯುವುದು ಕಷ್ಟ. ರಕ್ತಚಂದನ ಮತ್ತು ಶ್ರೀಗಂಧ ನೈಸರ್ಗಿಕವಾಗಿ ಬೆಳೆಯುವ ಪ್ರದೇಶಗಳಿಗೆ ರಕ್ಷಣೆ ನೀಡುವ ಕೆಲಸ ಹಾಗೂ ಅಭಿವೃದ್ಧಿಪಡಿಸಲು ವಿಶೇಷ ಮಾದರಿ ಯೋಜನೆಯನ್ನು ಅರಣ್ಯ ಇಲಾಖೆ ಮೂಲಕ ಜಾರಿಗೊಳಿಸಲಾಗುವುದು ಎಂದರು.
ಕೋಲಾರ ಕೆರೆಗಳ ನಾಡು. ಇಲ್ಲಿನ ಕೆರೆಗಳನ್ನು ಕಾಪಾಡುವ ಜವಾಬ್ದಾರಿ ಜನ ಹಾಗೂ ಆಡಳಿತದ್ದು. ಇದರೊಂದಿಗೆ ಕೆರೆಗಳ ಜೌಗು ಪ್ರದೇಶ ಸಂರಕ್ಷಣೆ ಮಾಡಬೇಕು, ಕೆರೆ ಆಸುಪಾಸುಗಳಲ್ಲಿರುವ ಜಲಚರ ಸಸ್ಯ ಉಳಿಸುವ ನಿಟ್ಟಿನಲ್ಲಿ ಬಫರ್‌ಝೋನ್ ಗುರುತಿಸಿ ಜನರಿಂದ ರಕ್ಷಿಸಬೇಕು ಎಂದರು.
ಜಾನುವಾರುಗಳನ್ನು ಚಿರತೆ, ಇನ್ನಿತರ ಪ್ರಾಣಿಗಳು ತಿಂದರೆ 4 ತಿಂಗಳ ಹಿಂದೆ 10,000 ರೂ. ಪರಿಹಾರ ನೀಡಲಾಗುತ್ತಿತ್ತು. ಈಗ 20ರಿಂದ 75,000 ರೂ. ನೀಡಲು ಅವಕಾಶ ನೀಡಲಾಗಿದೆ ಎಂದರು.
ಡಿಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಡಿಎಫ್‌ಒ ಇ. ಶಿವಶಂಕರ್, ಜಂಟಿ ಕೃಷಿ ನಿರ್ದೇಶಕಿ ರೂಪದೇವಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಾಗೃತಿ ಅಭಿಯಾನ: ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಜೀವವೈವಿಧ್ಯ ಸಮಿತಿಗಳನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು,ತಾಪಂ ಜೀವ ವೈವಿಧ್ಯ ಸಮಿತಿ ಗುರುತಿಸಿರುವ ಆಯಾ ಪ್ರದೇಶದ ಸಾಂಪ್ರದಾಯಿಕ ಅಪರೂಪದ ಸಸ್ಯ, ವೃಕ್ಷ ಸಮೂಹದ ಸಂರಕ್ಷಣೆಗಾಗಿ ಜು.1ರಿಂದ ಆಗಸ್ಟ್ 15ರವರೆಗೆ ಜೀವವೈವಿಧ್ಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಅಂತರಗಂಗೆಯಲ್ಲೂ 15 ದಿನಗಳಲ್ಲಿ ಕಾರ್ಯಕ್ರಮ ರೂಪಿಸಲು ಸೂಚಿಸಿದ್ದಾಗಿ ಅನಂತ ಹೆಗಡೆ ಹೇಳಿದರು.
ಜೇನು ಸಾಕಾಣಿಕೆ ಇದ್ದರೆ ಶೇ.25 ಕೃಷಿ ಉತ್ಪನ್ನ ಸಹಜವಾಗಿಯೇ ಜಾಸ್ತಿಯಾಗುತ್ತದೆ. ಜೇನು ಸಾಕಾಣಿಕೆ ವಿಸ್ತಾರಗೊಳ್ಳಬೇಕು. 28 ವಿವಿಧ ಕೀಟನಾಶಕಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಷೇಧಿಸಿದೆ. ಅವುಗಳ ಅನಧಿಕೃತ ಮಾರಾಟ ನಿಯಂತ್ರಿಸಲು ಡಿಸಿ ಹಾಗೂ ಕೃಷಿ ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅನಂತ ಹೆಗಡೆ ಅಶೀಸರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ