ಕೋಲಾರ: ಕೋಲಾರ ಮತ್ತು ಮಾಲೂರು ತಾಲೂಕಿನಲ್ಲಿ ಕರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದರಿಂದ ಜನತಾ ಕರ್ಫ್ಯೂ ಬಿಗಿಗೊಳಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಸೋಂಕು ಹರಡದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ವಿಚಾರವಾಗಿ ಜಿಲ್ಲಾಡಳಿತ ಕೈಗೊಂಡಿರುವ ಕೆಲ ಸಂಗತಿ ಸಮಾಧಾನಕರವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಸರ್ಕಾರಿ ಕೋಟಾದಡಿ ದಾಖಲಾಗುವ ಸೋಂಕಿತರ ಚಿಕಿತ್ಸೆ ಸಂಬಂಧ ಇನ್ನಷ್ಟು ಸುಧಾರಣೆಯಾಗಬೇಕು. ಪ್ರತಿದಿನ ಸೋಂಕಿತರ ಸ್ಥಿತಿಗತಿ, ಸೌಕರ್ಯಗಳಿಗೆ ಸಂಬಂಧಿಸಿದಂತೆ ಡಿಸಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.
ಕೋವಿಡ್ ಪರೀಕ್ಷೆ ಮತ್ತು ಸರಿಯಾದ ಸಮಯಕ್ಕೆ ವರದಿ ನೀಡಲು ಸಿಬ್ಬಂದಿ ಕೊರತೆ ನೀಗಿಸಲು ಅಂತಿಮ ವರ್ಷದ ಎಂಬಿಬಿಎಸ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳಲ್ಲಿ ಶೇ.85 ಜನ ಹೋಂ ಐಸೋಲೇಷನ್‌ನಲ್ಲಿದ್ದಾರೆ, ಇವರಿಗೆ ಚಿಕಿತ್ಸೆ ಮತ್ತು ಸಲಹೆ ಸೂಚನೆ ನೀಡಲು ವೈದ್ಯರು, ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ತಂಡ ರಚಿಸಲು ಸೂಚಿಸಲಾಗಿದೆ ಎಂದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸದ್ಯಕ್ಕೆ ಹಾಸಿಗೆ ಕೊರತೆ ಇಲ್ಲ. ಐಸಿಯು, ವೆಂಟಿಲೇಟರ್‌ನಲ್ಲಿದ್ದು ಗುಣಮುಖರಾಗುವ ರೋಗಿಗಳು ವೈದ್ಯರ ಸಲಹೆಯಂತೆ ಜನರಲ್ ವಾರ್ಡ್, ಇಲ್ಲವೇ ಮನೆಗೆ ತೆರಳಬೇಕು. ಹಠ ಹಿಡಿದರೆ ಬೇರೆಯವರಿಗೆ ತೊಂದರೆಯಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಬಿಟ್ಟುಕೊಡದಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಹೀಗಾಗಬಾರದು ಎಂದರು.
ಆಕ್ಸಿಜನ್ ಸಮಸ್ಯೆಯಿಲ್ಲ: ಜಿಲ್ಲೆಯಲ್ಲಿ ಆಕ್ಸಿಜನ್ ತಕ್ಕ ಮಟ್ಟಿಗೆ ಸರಿಹೋಗಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಪೂರೈಸಲು ಬದ್ಧ. ಕೆಲ ರೋಗಿಗಳು ವೈದ್ಯರ ಸಲಹೆ ಪಾಲಿಸುತ್ತಿಲ್ಲ, ಆಕ್ಸಿಜನ್ ಎಷ್ಟು ಬೇಕೋ ಅಷ್ಟು ಪಡೆದರೆ ಜೀವಕ್ಕೆ ಒಳ್ಳೆಯದು, ರೆಮ್‌ಡೆಸಿವಿರ್ ಔಷಧ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು ಎಂದರು.
ಕೆಜಿಎಫ್‌ಗೆ ಆಕ್ಸಿಜನ್ ಘಟಕ: ಕೆಜಿಎಫ್‌ಗೆ ಆಕ್ಸಿಜನ್ ಘಟಕ ಬಂದಿರುವುದರಿಂದ ಅಲ್ಲಿನ 50 ಹಾಸಿಗೆಯನ್ನು 100ಕ್ಕೆ ಏರಿಸಿ ಕೆಲವನ್ನು ಐಸಿಯು ಬೆಡ್‌ಗಳಾಗಿ ಪರಿವರ್ತಿಸುವ ಯೋಚನೆಯಿದೆ ಎಂದರು.
ಲೆಕ್ಕ ನೀಡಲು ಸಿದ್ಧ: ಮುಖ್ಯಮಂತ್ರಿಗಳು ನನ್ನನ್ನು ಕೋವಿಡ್ ವಾರ್ ರೂಮ್ ಉಸ್ತುವಾರಿಗೆ ನಿಯೋಜಿಸಿದ್ದು, ಎಲ್ಲವೂ ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಅನುಮಾನ ಇದ್ದರೆ ಮಾಹಿತಿ ಪಡೆದುಕೊಳ್ಳಬಹುದೆಂದು ಕೋವಿಡ್ ಸಾವಿನ ಬಗ್ಗೆ ವ್ಯಕ್ತಪಡಿಸಿರುವ ಆರೋಪಕ್ಕೆ ಉತ್ತರಿಸಿದರು.
ಸಂಸದ ಎಸ್.ಮುನಿಸ್ವಾಮಿ, ಜಿಪಂ ಅಧ್ಯಕ್ಷ ಎನ್.ವೆಂಕಟೇಶ್ ಉಪಸ್ಥಿತರಿದ್ದರು. ಡಿಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎಂ.ಎನ್.ನಾಗರಾಜ್, ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಬಿ.ಎಂ.ನಾರಾಯಣಸ್ವಾಮಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
2ನೇ ಡೋಸ್ ಪಡೆಯಲು ಆದ್ಯತೆ: 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಸ್ಥಗಿತಗೊಳಿಸಿ ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದಿರುವ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಪಡೆಯಲು ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯರಿಗೆ ಲಸಿಕೆ ಪಡೆಯಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ, 44ರಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದ ನಂತರ ಉಳಿದವರಿಗೆ ನೀಡಿದಲ್ಲಿ ಸಮಸ್ಯೆಯಾಗದ ಕಾರಣ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಸ್ಥಗಿತಗೊಳಿಸಲಾಗಿದೆ ಎಂದು ಲಿಂಬಾವಳಿ ತಿಳಿಸಿದರು.
ಎಲ್ಲ ಓಪನ್ ಇಟ್ಟುಕೊಂಡು ಲಾಕ್‌ಡೌನ್ ಮಾಡಿದ್ದಾರೆ ಅಂತಾನೂ ನೀವೇ ಪ್ರಸಾರ ಮಾಡ್ತೀರಿ, ಜನರನ್ನು ನಿಯಂತ್ರಿಸಲು ಲಾಠಿ ಬೀಸಿದ್ರೆ ಅದು ತಪ್ಪು ಅಂತೀರಿ, ಕರೊನಾ ತಡೆಯಲು ಜನರ ಸಹಕಾರ ಬೇಕಲ್ವೇ? ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ ಸಚಿವ