ಜಿಲ್ಲೆ

ಕೆಲಸ ಕಾರ್ಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಬಂದಾಗ ಅನಗತ್ಯವಾಗಿ ಕಾಯಿಸದೆ ಕೆಲಸ ಮಾಡಿಕೊಡಿ

ಕೋಲಾರ: ಜಿಲ್ಲೆಯಲ್ಲಿ ಸಾಕಷ್ಟು ಬಡವರಿದ್ದಾರೆ, ಕೆಲಸ ಕಾರ್ಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಬಂದಾಗ ಅನಗತ್ಯವಾಗಿ ಕಾಯಿಸದೆ ಕೆಲಸ ಮಾಡಿಕೊಡಿ ಎಂದು ಸಾಹಿತಿ, ಚಿಂತಕ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ವಿ.ಮುನಿವೆಂಕಟಪ್ಪ ಸರ್ಕಾರಿ ನೌಕರರಲ್ಲಿ ಮನವಿ ಮಾಡಿಕೊಂಡರು.

ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ಗುರುವಾರ ಆರಂಭಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಯದ ಅಭಾವದ ಹಿನ್ನೆಲೆಯಲ್ಲಿ ಮುದ್ರಿತ ಭಾಷಣದ ಬದಲು ಚುಟುಕಾಗಿ 3 ನಿಮಿಷ ಮಾತನಾಡಿದ ಅವರು, ಜಿಲ್ಲೆಯಲ್ಲಿ 50 ವರ್ಷಗಳಿಂದ ಬಡ ರೈತರು, ಕೂಲಿ ಕಾರ್ಮಿಕರು ಸಾಗುವಳಿ ಮಾಡುತ್ತಿದ್ದರೂ ಭೂಮಿಗೆ ಒಡೆಯನಾಗದೆ ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಬಡವರಿಗೆ ಭೂಮಿಯ ಪೋಡಿ ಆಂದೋಲನ ಮೂಲಕ ನ್ಯಾಯ ಒದಗಿಸಬೇಕು ಎಂದು ಕೋರಿದರು.

ಜಿಲ್ಲೆಯಲ್ಲಿ ಕನ್ನಡದ ಅಭಿಮಾನ ಹೆಚ್ಚುತ್ತಿದೆ, ಜಿಲ್ಲಾ ಕಸಾಪ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಕನ್ನಡ ನಾಡು-ನುಡಿ ಬೆಳೆಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಟಿಪ್ಪುಸುಲ್ತಾನ್ ಗುಣಗಾನ: ಟಿಪ್ಪು ಸುಲ್ತಾನ್ ಮೈಸೂರು ರಾಜನಾಗಿದ್ದಾಗ ಸಾಕಷ್ಟು ಜನಪರ ಕೆಲಸ ಮಾಡಿದ್ದಾನೆ. ಜಿಲ್ಲೆಯವರೇ ಆದ ಕೆ.ಸಿ.ರೆಡ್ಡಿ ರಾಜ್ಯದ ಮೊದಲ ಸಿಎಂ ಆಗಿ ಒಳ್ಳೇ ಕೆಲಸ ಮಾಡಿದ್ದಾರೆ. ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿದರು.

ಮೌಢ್ಯದಿಂದ ಹೊರಬನ್ನಿ: ಬಸವಣ್ಣನ ದಾರಿಯಲ್ಲಿ ನಡೆಯುವ ಬದಲು ಮೌಢ್ಯ ಬಿತ್ತಲಾಗುತ್ತಿದೆ. ಸಮಾನತೆ, ಶಾಂತಿ, ಸೌಹಾರ್ದತೆ ಸಾರಿದ ಬುದ್ಧನನ್ನೂ ಮರೆತು ಬೇರೆ ಯಾವುದೋ ದಾರಿಗಳನ್ನು ಹುಡುಕೊಳ್ಳಲಾಗುತ್ತಿದೆ ಎಂದು ಬೇಸರಿಸಿದರು.

ಕನ್ನಡಕ್ಕೆ ಸ್ವಾಯತ್ತತೆ ಸಿಕ್ಕಿಲ್ಲ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದರೂ ಸ್ವಾಯತತ್ತೆ ಸಿಕ್ಕಿಲ್ಲ. ತಮಿಳುನಾಡು ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಅನುದಾನ ಪಡೆದು ತಮಿಳು ಭಾಷೆ ಅಭಿವೃದ್ಧಿಪಡಿಸುತ್ತಿದೆೆ. ಅದೇ ರೀತಿಯಲ್ಲೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಪಡೆದು ಭಾಷೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಡಾ. ವಿ.ಮುನಿವೆಂಕಟಪ್ಪ ಮನವಿ ಮಾಡಿಕೊಂಡರು.

ನಾಡು-ನುಡಿ ಹಾಳಾಗಲು ನಿರ್ಲಕ್ಷ್ಯ ಕಾರಣ

ನಾಡು- ನುಡಿ ಮತ್ತು ಸಂಸ್ಕೃತಿ ನಾಶವಾಗುತ್ತಿದ್ದರೆ ಅದಕ್ಕೆ ಪರಭಾಷಿಗರು, ಪರಸಂಸ್ಕೃತಿ ಕಾರಣವಲ್ಲ. ಬದಲಿಗೆ ನಮ್ಮಲ್ಲಿನ ನಿರ್ಲಕ್ಷ್ಯ, ಅಹಂಕಾರ, ಅವಿವೇಕ ಕಾರಣ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಬಿ.ವಿ. ವಸಂತಕುಮಾರ್ ಪ್ರತಿಪಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡಿನ ಗತವೈಭವ ಉಳಿಯಬೇಕಾದರೆ ಅಹಂಕಾರ ಮತ್ತು ಅವಿವೇಕದ ಜಾಗದಲ್ಲಿ ವಿವೇಕ ಬರಬೇಕು. ವಿಶ್ವಕ್ಕೆ ಕನ್ನಡ ನಾಡು ಮತ್ತು ಭಾರತ ಅಪಾರ ಕೊಡುಗೆ ನೀಡಿವೆ. ಕನ್ನಡವನ್ನು ವಿಶ್ವವ್ಯಾಪಿಯಾಗಿಸಲು ಕನ್ನಡಿಗರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಗ ಭಾಷೆ, ಸಂಸ್ಕೃತಿ ಉಳಿಯುತ್ತದೆ. ಕೋಲಾರ ಗಡಿ ಜಿಲ್ಲೆಯಾದರೂ ಭಾಷೆ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಇತರರಿಗೆ ಮಾದರಿಯಾಗಿದೆ ಎಂದರು.

ದೇಶ ಒಡೆಯುವವರಿಗೆ ಬುದ್ಧಿ ಕಲಿಸಿ: ರಾಷ್ಟ್ರೀಯತೆ ಮತ್ತು ರಾಜ್ಯಕ್ಕೆ ವ್ಯತ್ಯಾಸ ತಿಳಿಯದವರು ಜಾತಿ. ಧರ್ಮ, ಮತದ ಹೆಸರಲ್ಲಿ ದೇಶ ಒಡೆಯಲು ಯತ್ನಿಸುತ್ತಿದ್ದಾರೆ. ರಾಷ್ಟ್ರಭಕ್ತ ಮತ್ತು ರಾಷ್ಟ್ರದ್ರೋಹಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಶಾಂತಿ, ಪ್ರೀತಿ, ಸಮಾನತೆ, ಸೋದರತ್ವ ಸಾರುವ ಮೂಲಕ ದೇಶ ಒಡೆಯಲು ಯತ್ನಿಸುತ್ತಿರುವವರಿಗೆ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.

ಸೋದರತ್ವ ಪ್ರತಿಪಾದಿಸದ ಕಮ್ಯೂನಿಸಂ: ಕಮ್ಯೂನಿಸಂ ಸ್ವಾತಂತ್ರ್ಯ ಮತ್ತು ಸೋದರತ್ವವನ್ನು ಪ್ರತಿಪಾದಿಸುವುದಿಲ್ಲ. ಹಾಗಾಗಿ ನಾನು ಕಮ್ಯೂನಿಸಂ ಅಪ್ಪಿಕೊಳ್ಳುವುದಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಬುದ್ಧ ಮತ್ತು ಕಾರ್ಲ್‌ಮಾರ್ಕ್ಸ್ ಕೃತಿಯಲ್ಲಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ತಾವು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತ್ವ ಪ್ರತಿಪಾದಿಸುವ ಬುದ್ಧಿಸಂ ಅನ್ನು ಅಪ್ಪಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ. ಅಷ್ಟೇ ಅಲ್ಲ, ದೇಶದಲ್ಲಿ ಏನೇ ಸಮಸ್ಯೆಯಿದ್ದರೂ ತಾವು ಭಾರತೀಯನಾಗಿ ಇರುತ್ತೇನೆ ಎಂದು ದೇಶವನ್ನು ಸಮರ್ಥಿಸಿಕೊಂಡಿದ್ದರು ಎಂಬುದನ್ನು ವಸಂತಕುಮಾರ್ ನೆನಪಿಸಿದರು.

ನುಡಿಕಾರರು ಜನರ ನಾಲಿಗೆಯಾಗಲಿ: ನುಡಿಕಾರರಾದವರು ಜನರ ನಾಲಿಗೆಯಾಗದೆ, ಸಮಕಾಲೀನ ಸಮಸ್ಯೆಗಳ ಜತೆ ಮಾತನಾಡದ ಹಾಗೂ ಮುಖಾಮುಖಿಯಾಗದ ಹೊರತು ನಮ್ಮ ನುಡಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಸಮ್ಮೇಳನದಲ್ಲಿ ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಣ್ಮರೆಯಾಗುವ ಭಾಷೆಗಳಲ್ಲಿ ಕನ್ನಡವೂ ಒಂದು. ಜಾಗೃತ ರಾಜಕಾರಣದ ಮಧ್ಯೆ ನುಡಿ ಉಳಿಸಿಕೊಳ್ಳಬೇಕಾದರೆ ನುಡಿಕಾರರು ಪ್ರತಿ ನಿತ್ಯ ನುಡಿಗಳ ಮೂಲಕ ಸಂವಾದಿಸುತ್ತಾ, ಮುಖಾಮುಖಿಗೊಳ್ಳಬೇಕು ಎಂದರು.

ರಾಷ್ಟ್ರಧ್ವಜಾರೋಹಣ ನರವೇರಿಸಿ ಮಾತನಾಡಿದ ಡಿಸಿ ಸತ್ಯಭಾಮ, ಕನ್ನಡತನ ನಮ್ಮ ರಕ್ತದಲ್ಲಿ, ದಿನನಿತ್ಯದ ಭಾವಾವೇಷದಲ್ಲೇ ಅಡಗಿದೆ. ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ನೆಲ, ಜಲ, ನಾಡು, ಭಾಷೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದರು. ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಪರಿಷತ್‌ನ ಧ್ವಜಾರೋಹಣ ಮಾಡಿದರು. ಪೌರಾಯುಕ್ತ ಶ್ರೀಕಾಂತ್ ಇತರರಿದ್ದರು.

ಊಟ ಸವಿದ ಸಾಹಿತ್ಯಾಸಕ್ತರು: ಹಾಲಿಸ್ಟರ್ ಸ್ಮಾರಕ ಭವನದಲ್ಲಿ ಉಪಾಹಾರ, ಊಟದ ವ್ಯವಸ್ಥೆಯಾಗಿತ್ತು. ಬೆಳಗ್ಗೆ ಪೈನಾಪಲ್ ಕೇಸರಿಬಾತ್, ಖಾರ ಪೊಂಗಲ್, ಚಟ್ನಿ, ಕಾಫಿ. ಮಧ್ಯಾಹ್ನ: ಬೇಳೆ ಹೋಳಿಗೆ, ವೆಜಿಟೇರಿಯನ್ ಪಲಾವ್, ಮೊಸರು ಪಚ್ಚಡಿ, ಅನ್ನ ರಸ, ಮೊಸರು, ಹಪ್ಪಳ, ಪಲ್ಯ, ಕೋಸಂಬರಿ, ಉಪ್ಪಿನ ಕಾಯಿ ರಾತ್ರಿ ಭೋಜನ: ಟೊಮ್ಯಾಟೊ ಬಾತ್ ಚಟ್ನಿ, ಅನ್ನರಸ, ಮೊಸರು, ಲಾಡು, ಪಲ್ಯ, ಉಪ್ಪಿನಕಾಯಿ, ಹಪ್ಪಳ. ಊಟಕ್ಕೆ ಟೋಕನ್ ವ್ಯವಸ್ಥೆ ಮಾಡಲಾಗಿತ್ತು. ಸಾಹಿತ್ಯಾಸಕ್ತರು ಸರತಿಯಲ್ಲಿ ನಿಂತು ಊಟ ಸವಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ವಿ.ಬಾಬು ನೇತೃತ್ವದ ತಂಡ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಗೊಂದಲಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಿತು.

ಪುಸ್ತಕ ಖರೀದಿಸಿದ ಡಿಸಿ: ನುಡಿ ಹಬ್ಬದ ಅಂಗಳದಲ್ಲಿ ನಡೆದ ಅಕ್ಷರ ಸಂತೆಯಲ್ಲಿ ಡಿಸಿ ಸತ್ಯಭಾಮ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಖ್ಯಾತ ಸಾಹಿತಿ ಎಲ್.ಎಲ್.ಭೈರಪ್ಪ ಅವರ ಪರ್ವ ಕೃತಿ ಖರೀದಿಸಿ ಗಮನ ಸೆಳೆದರು. ಸ್ಥಳೀಯ ಸೇರಿ ಐದಾರು ಪುಸ್ತಕ ಮಳಿಗೆಗಳು ಅಕ್ಷರ ಪ್ರೇಮಿಗಳಿಗಾಗಿ ಪುಸ್ತಕಗಳನ್ನು ಮಾರಾಟಕ್ಕೆ ತಂದಿದ್ದರು. ಆಸಕ್ತರು ತಮಗಿಷ್ಟದ ಪುಸ್ತಕ ಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಕನ್ನಡ ಭವನ ಅನುದಾನ: ನಗರದ ಕೋಲಾರಮ್ಮ ಕೆರೆ ಅಂಗಳಕ್ಕೆ ಹೊಂದಿಕೊಂಡಿರುವ ನಿವೇಶನದಲ್ಲಿ 5 ವರ್ಷಗಳ ಹಿಂದೆ ನಿರ್ವಾಣವಾಗಿರುವ ಕನ್ನಡ ಭವನ ಕಾಮಗಾರಿ ಅಪೂರ್ಣವಾಗಿದ್ದು, ಅನುದಾನದ ಕೊರತೆಯಿದ್ದಲ್ಲಿ 10 ಲಕ್ಷ ರೂ. ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು. ಕನ್ನಡ ಭವನದ ಬಾಕಿ ಕಾಮಗಾರಿಯನ್ನು ಬೇಗನೆ ಮುಗಿಸಿ ಜಿಲ್ಲಾ ಕಸಾಪಗೆ ಹಸ್ತಾಂತರಿಸಿದಲ್ಲಿ ಕನ್ನಡ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬಹುದು ಎಂದರು.

ಕೋಲಾರದಲ್ಲಿ ಕನ್ನಡ ಭವನ ನಿರ್ವಾಣಕ್ಕೆ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಲಾಯಿತು. ಸಿದ್ದರಾಮಯ್ಯ ಅವರ ಕಾಲದಲ್ಲಿ ಉದ್ಘಾಟನೆ ಆಯಿತು. ಇಂದಿಗೂ ಆ ಭವನದಲ್ಲಿ ಒಂದೇ ಒಂದು ಕನ್ನಡಪರ ಕಾರ್ಯಕ್ರಮವಾಗಿಲ್ಲ. ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿವಹಿಸಿ ಭವನದಲ್ಲಿ ಕನ್ನಡಪರ ಚಟುವಟಿಕೆ ನಡೆಯಲು ಕ್ರಮ ಕೈಗೊಳ್ಳಬೇಕು. ವಿ.ಆರ್.ಸುದರ್ಶನ್, ವಾಜಿ ಸಭಾಪತಿ, ವಿಧಾನ ಪರಿಷತ್

ಸ್ಥಳೀಯರಿಗೆ ಉದ್ಯೋಗ ನೀಡಿ: ಜಿಲ್ಲೆಯ ಕೈಗಾರಿಕೆಗಳಲ್ಲಿ ಪರಭಾಷಿಗರಿಗೆ ಹೆಚ್ಚು ಮಣೆ ಹಾಕಿ ಸ್ಥಳೀಯರನ್ನು ಕಡೆಗಣಿಸಲಾಗುತ್ತದೆ. ರೈತರಿಂದ ಭೂಮಿ ಖರೀದಿಸಿ, ಸರ್ಕಾರದಿಂದ ಸೌಲಭ್ಯ ಪಡೆದು ಸ್ಥಾಪಿಸಿರುವ ಉದ್ದಿಮೆದಾರರು ಜಿಲ್ಲೆಯ ಯುವಕರಿಗೆ ಕೆಲಸ ಕೊಡದಿರುವುದು ವಿಷಾದನೀಯ ಎಂದು ಜಿಪಂ ಅಧ್ಯಕ್ಷ ಎನ್.ವೆಂಕಟೇಶ್ ಅಸವಾಧಾನ ವ್ಯಕ್ತಪಡಿಸಿದರು.