ಕೋಲಾರ: ಹದಿನೈದು ಇಪ್ಪತ್ತು ದಿನದೊಳಗೆ ವಿಸ್ಟ್ರಾನ್ ಕಂಪನಿ ಪುನರಾರಂಭಿಸುವ ಭರವಸೆ ಆಡಳಿತ ಮಂಡಳಿಯಿಂದ ದೊರೆತಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.
ನರಸಾಪುರದ ವಿಸ್ಟ್ರಾನ್ ಕಂಪನಿಯಲ್ಲಿ ಡಿ.12ರಂದು ನಡೆದ ದಾಂಧಲೆ ಬಗ್ಗೆ ಭಾನುವಾರ ಪರಿಶೀಲನೆಗೆ ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಕೈಗಾರಿಕಾ ನೀತಿ ಸರಳೀಕರಣಗೊಳಿಸಿದೆ. ಆದರೆ ವಿಸ್ಟ್ರಾನ್‌ನಲ್ಲಿ ನಡೆದ ಘಟನೆಯಿಂದ ಕರ್ನಾಟಕ ಕೈಗಾರಿಕೆಗಳ ಸ್ಥಾಪನೆಗೆ ಸುರಕ್ಷಿತವಲ್ಲ ಎಂಬ ತಪ್ಪು ಸಂದೇಶ ಹೋಗದಿರಲಿ ಎಂಬ ಕಾರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತಿಳಿದೋ ತಿಳಿಯದೆಯೋ ವಿಸ್ಟ್ರಾನ್ ಕಂಪನಿಯಲ್ಲಿ ತಪ್ಪು ನಡೆದಿದೆ. ಘಟನೆ ಸಂಬಂಧ 7000ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಅಮಾಯಕರನ್ನು ಮತ್ತೆ ಉದ್ಯೋಗಕ್ಕೆ ಸೇರಿಸಿಕೊಳ್ಳಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದರು.
ಕಂಪನಿ ಶಾಂತಿಯುತ ವಾತಾವರಣದೊಂದಿಗೆ ಪುನರಾರಂಭವಾಗಬೇಕಿದೆ. ನನ್ನ ಭೇಟಿ ವೇಳೆ ಆಡಳಿತ ಮಂಡಳಿಯವರು ನನಗೆ ಬೇಕಾದ ಸಂಪೂರ್ಣ ಮಾಹಿತಿ ಒದಗಿಸಿಲ್ಲ. ಮುಂದಿನ ವಾರ ವಿಕಾಸ ಸೌಧದಲ್ಲಿ ಕಂಪನಿ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಸಭೆಗೆ ಗುತ್ತಿಗೆ ಏಜೆನ್ಸಿಗಳನ್ನೂ ಕರೆಸಲಾಗುವುದು ಎಂದರು.
ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅವಕಾಶವಿದೆ. ಆದರೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ, ಕೆಲಸಕ್ಕೆ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ದುಡಿಸಿಕೊಳ್ಳುವುದು ಕಾರ್ಮಿಕ ನೀತಿಗೆ ವಿರುದ್ಧವಾದುದು. ಯಾರಿಗೆ ಸರಿಯಾಗಿ ವೇತನ ಪಾವತಿಯಾಗಿಲ್ಲವೋ ಅವರಿಗೆ ನ್ಯಾಯ ಕೊಡಿಸಲಾಗುವುದು ಎಂದರು.
ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುವುದನ್ನು ತಪ್ಪಿಸುವುದು ಕಾರ್ಮಿಕ ಇಲಾಖೆ ಅಧಿಕಾರಿಯ ಕರ್ತವ್ಯ. ವಿಸ್ಟ್ರಾನ್ ಘಟನೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಕಾರ್ಮಿಕ ಅಧಿಕಾರಿ ಲೋಪದ ಬಗ್ಗೆ ತಿಳಿದುಬಂದಿದೆ. ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ್ ಪಾಷಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಕಾರ್ತಿಕ್‌ರೆಡ್ಡಿ, ತಹಸೀಲ್ದಾರ್ ಶೋಭಿತಾ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಇತರರಿದ್ದರು.
ಕಾರ್ಖಾನೆ ಉಳಿಸಿಕೊಳ್ಳಲು ಯತ್ನ: ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂಬ ವಿಚಾರ ಗೊತ್ತಾಗಿದ್ದೇ ಘಟನೆ ನಂತರ. 9000ಕ್ಕೂ ಹೆಚ್ಚು ಕಾರ್ಮಿಕರಿರುವ ಕಂಪನಿಯಲ್ಲಿ ಕಾರ್ಮಿಕ ಸಂಘಟನೆಯೂ ಇಲ್ಲ. ಕಾರ್ಮಿಕರ‌್ಯಾರೂ ಸಮಸ್ಯೆ ಕುರಿತು ಗಮನಕ್ಕೆ ತಂದಿಲ್ಲ. ಒಂದು ಪತ್ರ ಬರೆದಿದ್ದರೂ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಕನಿಷ್ಠ ಕಂಪನಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಬಹುದಿತ್ತು. ಏಕಾಏಕಿ ಪ್ರತಿಭಟನೆ ಮಾಡಿದ್ದಾರೆ. ಕಾರ್ಖಾನೆ ಉಳಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನ ನಡೆಸಿದೆ ಎಂದರು.