ಜಿಲ್ಲೆ

ಡಿಸೆಂಬರ್ 1ರಿಂದ ಹೆಲ್ಮೆಟ್ ಕಡ್ಡಾಯ

Kolar

ಕೋಲಾರ: ಜಿಲ್ಲಾದ್ಯಂತ ಡಿಸೆಂಬರ್ 1ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್, ಆಟೋಗಳಿಗೆ ಮೀಟರ್ ಕಡ್ಡಾಯ ಹಾಗೂ ನಗರದ ಸುತ್ತಲಿನ 7-8 ಕಿಮೀ ವ್ಯಾಪ್ತಿಯೊಳಗೆ ನಗರ ಸಾರಿಗೆ ಶುರು ಮಾಡುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಹೆಲ್ಮೆಟ್ ಹಾಗೂ ಆಟೋಗಳಿಗೆ ಮೀಟರ್ ಕಡ್ಡಾಯದ ಕುರಿತು ಜಾಗೃತಿ ಮೂಡಿಸಿ, ಡಿ. 1ರ ನಂತರ ನಿಯಮ ಪಾಲಿಸದವರ ವಿರುದ್ಧ ಕ್ರಮ ವಹಿಸುವಂತೆ ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರ ಸಾರಿಗೆಯಲ್ಲಿ ಲಾಭ ನಿರೀಕ್ಷಿಸುವುದು ಬೇಡ, ಕಾರ್ಯಾಚರಣೆ ನಿರಂತರವಾಗಿದ್ದಲ್ಲಿ ಜನ ಸೇವೆ ಪಡೆಯುತ್ತಾರೆ. ಡಿ.1ರಿಂದ ಪ್ರಾಯೋಗಿಕವಾಗಿ ಸೇವೆ ಆರಂಭಿಸಿ ಎಂದು ಕೆಎಸ್‌ಆರ್‌ಟಿಸಿ ಡಿಸಿ ಎನ್.ಎಸ್.ಚಂದ್ರಶೇಖರ್‌ಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಮಸ್ಯೆ ಕುರಿತು 2019ರ ನ 7ರ ಸಭೆಯ ತೀರ್ಮಾನ ಅನುಷ್ಠಾನಗೊಳ್ಳದಿರುವ ಬಗ್ಗೆ ಗರಂ ಆದ ಡಿಸಿ ಜಿಲ್ಲಾಡಳಿತವೆಂದರೆ ಕಾಲ ಕಸವೇ? ನಿಮಗೆ ಹೊಸಕೋಟೆ ಮಾತ್ರವೇ ಕಾಣಿಸೋದಾ? ಹೆದ್ದಾರಿ ನಿರ್ಮಾಣಕ್ಕೆ ಕೋಲಾರದಲ್ಲಿ ಜಾಗ ನೀಡಿಲ್ಲವೇ? ಅಪಘಾತದಲ್ಲಿ ಹೋದ ಜೀವ ಮರಳಿ ಪಡೆಯಲು ಸಾಧ್ಯವೇ ಎಂದು ಹೆದ್ದಾರಿ ಪ್ರಾಧಿಕಾರ ಹಾಗೂ ಲ್ಯಾಂಕೋ ಕಂಪನಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಸಮಿತಿ ಸದಸ್ಯರ ನೇತೃತ್ವದಲ್ಲಿ ರಾತ್ರಿ ಹಾಗೂ ಹಗಲು ಪರಿಶೀಲನೆ ನಡೆಸಿ ಸಮಸ್ಯೆ ಗುರುತಿಸೋಣ ಎಂದರು.

ವಿಶ್ವನಾಥ್ ಡಿಸಿ ಆದಾಗಿನಿಂದಲೂ ಪ್ರಾಧಿಕಾರದ ಅಧಿಕಾರಿಗಳು ನೆಪ ಹೇಳಿಕೊಂಡು ಬಂದಿದ್ದಾರೆ. ಬಾಕಿ ಕೆಲಸ ಕಾಲಮಿತಿಯೊಳಗೆ ಮುಗಿಸಿ, ಮಾತು ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಫುಟ್‌ಪಾತ್ ಒತ್ತುವರಿ ತೆರವು ಸೇರಿ ಅಜೆಂಡಾದಲ್ಲಿ ಇಟ್ಟಿದ್ದ ವಿಷಯಗಳಲ್ಲಿ ಆರ್‌ಟಿಒ ಹಾಗೂ ಎಎಸ್ಪಿ ಅಧಿಕಾರಿಗಳಲ್ಲಿ ನಿರ್ದಿಷ್ಟ ಮಾಹಿತಿ ಇಲ್ಲದ್ದರಿಂದ ಅಸಮಾಧಾನಗೊಂಡ ಡಿಸಿ, ಸಭೆಗೆ ಗ್ರೌಂಡ್‌ವರ್ಕ್ ಮಾಡಿಕೊಂಡು ಬರಬೇಕು, ಈ ರೀತಿಯಾದರೆ ಮುಂದೆ ಸಭೆ ನಡೆಸುವುದಿಲ್ಲ ಎಂದರು.

ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ಮಡೇರಹಳ್ಳಿಯಲ್ಲಿ ವಾಹನ ತಿರುವು ಪಡೆಯಲು ವ್ಯವಸ್ಥೆ ಇಲ್ಲದೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಭಾನುವಾರ ಕಣ್ಣೆದುರೇ ದ್ವಿಚಕ್ರ ವಾಹನ ಸವಾರ ಲಾರಿ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಈ ಸ್ಥಳದಲ್ಲಿ 2 ತಿಂಗಳಲ್ಲಿ 7 ಜನ ಬಲಿಯಾಗಿದ್ದಾರೆ. ಮಡೇರಹಳ್ಳಿ ಅಥವಾ ಬೆತ್ತನಿಯಲ್ಲಿ ಯು ಟರ್ನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಪ್ರಾಧಿಕಾರದ ವ್ಯವಸ್ಥಾಪಕ (ತಾಂತ್ರಿಕ) ಪ್ರಶಾಂತ್, ಗುರುತಿಸಿರುವ 20 ಬ್ಲಾಕ್ ಸ್ಪಾಟ್‌ಗಳಲ್ಲಿ 7 ಕಡೆ ಸರಿಪಡಿಸಲಾಗಿದೆ. ಹಿಂದಿನ ಸಭೆಯಲ್ಲಿನ ತೀರ್ಮಾನಗಳ ಅನುಷ್ಠಾನಕ್ಕೆ ಒತ್ತು ನೀಡಿದ್ದೇನೆ. 15 ದಿನದೊಳಗೆ ತಾತ್ಕಾಲಿಕ ಪರಿಹಾರ, ಮುಂದಿನ ಮೂರು ತಿಂಗಳೊಳಗೆ ಕಾಮಗಾರಿಗಳಿಗೆ ಚಾಲನೆ ನೀಡುವುದು, ಕಾಮಗಾರಿ ಮುಗಿಸಲು ಕನಿಷ್ಠ 6 ತಿಂಗಳು ಬೇಕು ಎಂದರು.

ಸಮಿತಿ ಸದಸ್ಯ ಕೆ.ವಿ.ಸುರೇಶ್‌ಕುಮಾರ್ ಮಾತನಾಡಿ, ರಸ್ತೆ ಸುರಕ್ಷತಾ ಸಮಿತಿಗೆ ಹಿಂದಿನ ಸಾಲಿನಲ್ಲಿ ಬಿಡುಗಡೆಯಾಗಿದ್ದ 5.33 ಲಕ್ಷ ರೂ. ಅನುದಾನ ಬಳಕೆಯಾಗದೆ ವಾಪಸಾಗಿದೆ. ಈ ಹಣ ವಾಪಸ್ ಪಡೆದು ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು ಬಳಸಲು ಕ್ರಿಯಾಯೋಜನೆ ರೂಪಿಸಬೇಕು ಎಂದರು.

ಆರ್‌ಟಿಒ ಚಂದ್ರಶೇಖರ್, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಕಾಂತ್ ಪಾಟೀಲ್, ಲ್ಯಾಂಕೋ ಕಂಪನಿ ಇಂಜಿನಿಯರ್ ಗೋವಿಂದರಾವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.