ಪಿ.ಎಸ್.ಹರೀಶ್ ಕೋಲಾರ
ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಸೂಚನೆಯಂತೆ ಜಿಲ್ಲೆಯ ಎಲ್ಲ 6 ತಾಲೂಕುಗಳಲ್ಲೂ ಕೊರೆದಿರುವ ಬೋರ್‌ವೆಲ್‌ಗಳ ನೋಂದಣಿ ಮತ್ತು ಹೊಸದಾಗಿ ಕೊರೆಯಿಸಲು ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಿದೆ.
ಈ ಕಾನೂನು ಪಾಲನೆಗೆ ಸರ್ಕಾರಿ ಇಲಾಖೆಗಳು, ರಿಗ್ ಮಾಲಿಕರು, ಏಜೆನ್ಸಿಗಳು, ರೈತರು ಸ್ಪಂದಿಸಬೇಕಿದ್ದು, ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಜಿಲ್ಲಾ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಾಜ್ಯದ 15 ಜಿಲ್ಲೆಗಳ 45 ತಾಲೂಕುಗಳಲ್ಲಿ ಹೊಸ ಬೋರ್‌ವೆಲ್ ಕೊರೆಯುವುದನ್ನು ನಿರ್ಬಂಧಿಸಿದ್ದು, ಕೊರೆಯುವುದಾದರೆ ಜಿಲ್ಲಾ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯ.
ಕೊರೆದ ಮೇಲೆ ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸಿ ನಿರಾಕ್ಷೇಪಣಾ ಪತ್ರ ಪಡೆಯಬೇಕು. ರಿಗ್ ಮಾಲೀಕರು, ಏಜೆನ್ಸಿಗಳು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದೆ ಅಧಿಸೂಚಿತ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವುದು ಶಿಕ್ಷಾರ್ಹ ಅಪರಾಧ ಎಂದು ಅಧಿಸೂಚನೆ ಹೊರಡಿಸಿದೆ.
ಜಿಲ್ಲೆಯ ಸ್ಥಿತಿ: ಜಿಲ್ಲೆಯ ಎಲ್ಲ 6 ತಾಲೂಕುಗಳು ಕರ್ನಾಟಕ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ಅಧಿನಿಯದ ವ್ಯಾಪ್ತಿಗೆ ಒಳಪಡುತ್ತವೆ. ಕುಡಿಯುವ ನೀರು, ಕೃಷಿಗೆ ಅಂತರ್ಜಲವೇ ಮೂಲ. ನಗರಸಭೆ, ಪುರಸಭೆಗಳು, 156 ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ 1000ಕ್ಕೂ ಅಧಿಕ ಬೋರ್‌ವೆಲ್ ಕೊರೆಯುತ್ತಿದ್ದರೂ ಪ್ರಾಧಿಕಾರದಿಂದ ಅನುಮತಿ ಜತೆಗೆ ನೋಂದಣಿಯನ್ನೂ ಮಾಡಿಕೊಳ್ಳುತ್ತಿಲ್ಲ.
ಜಿಲ್ಲಾಮಟ್ಟದ ಸಮಿತಿಯಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇ ಸದಸ್ಯರಾಗಿದ್ದರೂ ಇಲಾಖೆಯೇ ಕಾನೂನು ಪಾಲಿಸುತ್ತಿಲ್ಲ. ಈ ಹಿಂದೆ ಜಿಲ್ಲಾ ಅಂತರ್ಜಲ ಕಚೇರಿಯಿಂದ ಹಲವು ಬಾರಿ ಸುತ್ತೋಲೆ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ. ರೈತರು, ವಾಣಿಜ್ಯ, ಕೈಗಾರಿಕೆ ಉದ್ದೇಶಕ್ಕೆ ಕೊರೆಯಿಸಿದ ಬೋರ್‌ವೆಲ್‌ಗಳ ನೋಂದಣಿ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ.
4000 ದಾಟದ ನೋಂದಣಿ: ಜಿಲ್ಲೆಯಲ್ಲಿ ಅಂದಾಜು 75,000ರಿಂದ 80,000 ಮೇಲ್ಪಟ್ಟು ಸಫಲ ಬೋರ್‌ವೆಲ್‌ಗಳಿರಬಹುದು. ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಬೋರ್‌ವೆಲ್‌ಗಳು ನೋಂದಣಿ ಆಗುತ್ತಿವೆ. 2020ನೇ ಸಾಲಿನಲ್ಲಿ ಸರ್ಕಾರಿ, ಖಾಸಗಿ ಸೇರಿ 697 ಬೋರ್‌ವೆಲ್‌ಗಳು ನೋಂದಣಿ ಆಗಿದ್ದು, ಒಟ್ಟಾರೆ 3384 ಬೋರ್‌ವೆಲ್‌ಗಳಷ್ಟೇ ನೋಂದಣಿಯಾಗಿದೆ. ಇನ್ನೂ ಸಹಸ್ರಾರು ಬೋರ್‌ವೆಲ್‌ಗಳು ನೋಂದಣಿ ಆಗಬೇಕಿದೆ.
ದಂಡಂ ದಶಗುಣಂ: ಅಧಿಸೂಚನೆಯನ್ವಯ ಜಿಲ್ಲೆಯಲ್ಲಿ 15 ರಿಗ್ ಮಾಲಿಕರು, ಏಜೆನ್ಸಿಗಳು ಅಂತರ್ಜಲ ಪ್ರಾಧಿಕಾರದಿಂದ 7(ಎ) ಪ್ರಮಾಣ ಪತ್ರ ಪಡೆದುಕೊಂಡಿದೆ. ನೋಂದಾಯಿಸದೆ ಕೊರೆಯುತ್ತಿದ್ದ 5 ರಿಗ್ ಯಂತ್ರದ ಮಾಲೀಕ, ಏಜೆನ್ಸಿಗಳಿಗೆ ಜಿಲ್ಲಾ ಅಂತರ್ಜಲ ಕಚೇರಿ ಅಧಿಕಾರಿಗಳು ತಲಾ 10,000 ರೂ. ನಂತೆ ಒಟ್ಟು 8 ಪ್ರಕರಣಗಳಲ್ಲಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದು, ಇದೀಗ ಒಬ್ಬೊಬ್ಬರಾಗಿಯೇ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.
ಹೊರ ರಾಜ್ಯದ ಯಂತ್ರಕ್ಕಿಲ್ಲ ನೋಂದಣಿ: ಜಿಲ್ಲೆಯಲ್ಲಿ ರಿಗ್ ಯಂತ್ರದ ಮಾಲೀಕರ ಸಂಖ್ಯೆ ಮೂರು. ಉಳಿದಂತೆ ಆಂಧ್ರ, ತಮಿಳುನಾಡಿನ ರಿಗ್ ಯಂತ್ರಗಳು ಕಾರ್ಯಾಚರಿಸುತ್ತಿದೆ. ಅಧಿನಿಯಮದನ್ವಯ ಕರ್ನಾಟಕ ಆರ್‌ಟಿಒ ನೋಂದಣಿ ಸಂಖ್ಯೆಯ ರಿಗ್ ಲಾರಿಗಳನ್ನಷ್ಟೇ ನೋಂದಾಯಿಸಲು ಅವಕಾಶ, ರಾಜ್ಯದ ನೋಂದಣಿಗೆ ಬದಲಿಸದಿದ್ದರೆ ಅಂತಹ ರಿಗ್ ವಾಹನಗಳ ಕಾರ್ಯಾಚರಣೆಗೆ ಅವಕಾಶ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ನೋಂದಣಿಗೆ ದಾಖಲೆ: ರೈತರು ಹಾಲಿ ಕೊರೆಯಿಸಿರುವ, ಹೊಸದಾಗಿ ಕೊರೆಯಿಸುವ ಬೊರ್‌ವೆಲ್‌ಗಳಿಗೆ ಅನುಮತಿ ಮತ್ತು ನೋಂದಣಿಗೆ ಸರ್ಕಾರಿ ಬೋರ್‌ವೆಲ್‌ಗಳಿಂದ 500 ಮೀಟರ್ ಅಂತರದಲ್ಲಿ ಖಾಸಗಿ ಬೋರ್‌ವೆಲ್ ಇರುವ ಬಗ್ಗೆ ಪಿಡಿಒಗಳಿಂದ ದೃಢೀಕರಣ, ಪಹಣಿ, ಆಧಾರ್ ಕಾರ್ಡ್, ಕೊಳವೆಬಾವಿಯ ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ನೋಂದಣಿಗೆ ಪ್ರಾಧಿಕಾರ 1050 ರೂ. ಶುಲ್ಕ ವಿಧಿಸಿದೆ.
ಸಿಬ್ಬಂದಿ ಖಾಲಿ ಖಾಲಿ: ಜಿಲ್ಲಾ ಅಂತರ್ಜಲ ಕಚೇರಿಯಲ್ಲಿ ಹಿರಿಯ ಭೂ ವಿಜ್ಞಾನಿ ಹಾಗೂ ಎಸ್‌ಡಿಎ 1 ಹುದ್ದೆ ಹೊರತುಪಡಿಸಿ ತಾಂತ್ರಿಕ 5 ಹುದ್ದೆಗಳು, ಎಲ್ಲ ಕ್ಲರಿಕಲ್ ಹುದ್ದೆಗಳು ಖಾಲಿಯಿದೆ. ಸಿಬ್ಬಂದಿಗಳಿಲ್ಲದೆ ಕಾಯ್ದೆ ಸಮರ್ಪಕ ಅನುಷ್ಠಾನ ಕಷ್ಟಕರವಾಗಲಿದ್ದು, ಕೊರತೆ ನೀಗಿಸುವಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಗಮನಹರಿಸಬೇಕಿದೆ.
ಅಂತರ್ಜಲ ಪ್ರಾಧಿಕಾರದ ನಿರ್ದೇಶನದಂತೆ ಕೊಳವೆ ಬಾವಿ ಕೊರೆಯಲು ಮತ್ತು ಹಾಲಿ ಕೊರೆಯಿಸಿರುವ ಬೋರ್‌ವೆಲ್‌ಗಳಿಗೆ ನೋಂದಣಿ, ಅನುಮತಿ ಕಡ್ಡಾಯ. ರೈತರು ತಮ್ಮ ಕೃಷಿ ಉದ್ದೇಶಕ್ಕೆ ಕೊರೆಯಿಸಿರುವ ಬೊರ್‌ವೆಲ್‌ಗಳನ್ನು ನೋಂದಾಯಿಸಿಕೊಳ್ಳಲು ಮುಂದೆ ಬರಬೇಕು. ಸಿಬ್ಬಂದಿ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಿಪ್ಪೆಸ್ವಾಮಿ, ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ,ಕೋಲಾರ