ಕೋಲಾರ: ನಗರದ ಬಂಗಾರಪೇಟೆ ವೃತ್ತದಿಂದ ಕ್ಲಾಕ್ ಟವರ್ ವರೆಗಿನ ರಸ್ತೆ ವಿಸ್ತರಣೆ ಸಲುವಾಗಿ ಕಠಾರಿಗಂಗಮ್ಮ ದೇವಾಲಯದ ಹಿಂಭಾಗದಲ್ಲಿನ ಅಶ್ವತ್ಥಮರದ ಕಟ್ಟೆ ಹಾಗೂ ನಾಗರಕಲ್ಲುಗಳ ಗೋಪುರ, ಕರಗದ ವೇದಿಕೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶನಿವಾರ ತೆರವುಗೊಳಿಸಲಾಯಿತು.
ಲೋಕೋಪಯೋಗಿ ಇಲಾಖೆಯಿಂದ ಸದರಿ ರಸ್ತೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇಕ್ಕೆಲಗಳಲ್ಲಿನ ಕಟ್ಟಡ, ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಕೆಲವು ಕಟ್ಟಡದ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುತ್ತಿದ್ದಾರೆ. ಬೆಳೆದು ನಿಂತಿದ್ದ ಬೃಹತ್ ಮರಗಳ ತೆರವು ಪ್ರಗತಿಯಲ್ಲಿದೆ. ಈ ಮದ್ಯೆ ಕೆಲವು ಕಟ್ಟಡಗಳ ಮಾಲಿಕರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿರುವ ಬಗ್ಗೆ ಕಟ್ಟಡಗಳಲ್ಲಿ ನಮೂದಿಸಿಕೊಂಡಿದ್ದಾರೆ.
ಕಠಾರಿ ಗಂಗಮ್ಮ ದೇವಾಲಯದ ಸಮಿತಿಯೂ ದೇವಾಲಯ ತೆರವು ಕಾರ್ಯಾಚರಣೆ ನಡೆಸುವ ಕ್ರಮದ ವಿರುದ್ಧ ಹೈಕೋರ್ಟ್ ಮೊರೆಹೋಗಿರುವ ಕುರಿತು ದೇವಾಲಯದ ಗೋಡೆಯಲ್ಲಿ ನೋಟಿಸ್ ಅಂಟಿಸಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ತೆರವು ಕಾರ್ಯಾಚರಣೆಗಾಗಿ ಬಿಗುವಿನ ವಾತಾವರಣ ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅನಾವಶ್ಯಕವಾಗಿ ನೆರೆದಿದ್ದ ಗುಂಪನ್ನು ಪೊಲೀಸರು ಪದೇ ಪದೆ ಚದುರಿಸಲು ಹರಸಾಹಸ ಪಟ್ಟರು.
ದೇವಾಲಯ ಹಿಂಭಾಗದಲ್ಲಿನ ಅಶ್ವತ್ಥಕಟ್ಟೆಯಲ್ಲಿದ್ದ ನಾಗರ ಕಲ್ಲುಗಳನ್ನು ಪೂಜೆ ಮಾಡಿ ತೆರವುಗೊಳಿಸಲು ಅಧಿಕಾರಿಗಳು ಮುಂದಾದರಾದರೂ ದೇವಾಲಯದ ಹಾಗೂ ಸ್ಥಳೀಯವಾಗಿ ಯಾವೊಬ್ಬ ಅರ್ಚಕರೂ ಮುಂದೆ ಬರಲಿಲ್ಲ. ಜೆಸಿಬಿಗಳೊಂದಿಗೆ ಬಂದಿದ್ದ ಅಧಿಕಾರಿಗಳು ಬೇರೆ ದಾರಿ ಕಾಣದೆ ಮುಳಬಾಗಲಿನಿಂದ ಮುಜರಾಯಿ ಇಲಾಖೆ ಅರ್ಚಕರನ್ನು ಕರೆಯಿಸಿ ಶಾಸ್ತ್ರೋಕ್ತವಾಗಿ ಶಾಂತಿ ಪೂಜೆ ನೆರವೇರಿಸಿ ತೆರವಿಗೆ ಮುಂದಾದರು.
ಈ ಮದ್ಯೆ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಒಂದು ಹಂತದಲ್ಲಿ ಜೆಸಿಬಿ ಕೆಲಸ ಮುಂದುವರಿಸಲು ಹಿಂದುಮುಂದು ನೋಡಿದರಾದರೂ ಅಧಿಕಾರಿಗಳ ಮಧ್ಯಪ್ರವೇಶದ ನಂತರ ತೆರವು ಕಾರ್ಯ ಆರಂಭಗೊಂಡಿತು.
ಕರಗ ನರ್ತನದ ವೇದಿಕೆ ತೆರವು: ನಾಗರ ಕಲ್ಲುಗಳು ಹಾಗೂ ಗೋಪುರ, ಕಠಾರಿ ಗಂಗಮ್ಮ ದೇವಾಲಯದ ಮುಂಭಾಗದಲ್ಲಿದ್ದ ಪುರಾತನ ಕಾಲದ ಕಠಾರಿಪಾಳ್ಯ ಶ್ರೀಧರ್ಮರಾಯಸ್ವಾಮಿ ದ್ರೌಪದಾಂಬ ಕರಗ ನರ್ತನದ ವೇದಿಕೆಯನ್ನು ತೆರವು ಮಾಡಲಾಯಿತು.
ಪಿಡಬ್ಲ್ಯುಡಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಪಿಡಬ್ಲ್ಯುಡಿಗೆ ಸೇರಿದ ಜಾಗ ಕೆಲವಡೆ ಒತ್ತುವರಿಯಾಗಿದ್ದು, ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒತ್ತುವರಿದಾರರಿಗೆ ತೆರವು ಮಾಡಲು ನೋಟಿಸ್ ಜಾರಿ ಮಾಡಲಾಗಿತ್ತು. 7 ದಿನದೊಳಗೆ ತೆರವು ಮಾಡದಿದ್ದಲ್ಲಿ ನಾವೇ ತೆರವು ಮಾಡಲು ಕ್ರಮ ಕೈಗೊಂಡು ಅದರ ವೆಚ್ಚವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ವ್ಯವಸ್ಥಾಪಕ ತ್ಯಾಗರಾಜ್ ಹಾಜರಿದ್ದು, ನಗರಠಾಣೆ ಪಿಎಸ್‌ಐ ಅಣ್ಣಯ್ಯ, ಗಲ್‌ಪೇಟೆ ಪಿಎಸ್‌ಐ ವೇದಾವತಿ, ಎಎಸ್‌ಐ ಮುನಿಯಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.