ಪಾ.ಶ್ರೀ.ಅನಂತರಾಮ್ ಕೋಲಾರ
ಘಟಾನುಘಟಿಗಳು ಪ್ರತಿನಿಧಿಸಿದ್ದ ಮುಳಬಾಗಿಲು ವಿಧಾನಸಭಾ ಕ್ಷೇತ್ರ ಈಗ ಸೂತ್ರವಿಲ್ಲದ ಗಾಳಿಪಟದಂತಾಗಿದೆ.
ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಕ್ಷೇತ್ರವಲ್ಲದೆ ರಾಜಕೀಯಕ್ಕೂ ಕೊಡುಗೆ ನೀಡಿರುವ ಕ್ಷೇತ್ರ ಕಳೆದ 10 ವರ್ಷಗಳಿಂದೀಚೆಗೆ ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ.
1952ರಿಂದ 2008ರವರೆಗೆ ಹೈನುಗಾರಿಕೆ ಹರಿಕಾರ ಎಂ.ವಿ. ಕೃಷ್ಣಪ್ಪ, ಕೋಲಾರ ನಿರ್ಮಾತೃ ಟಿ.ಚನ್ನಯ್ಯ, ರೈತಪರ ಹೋರಾಟಗಾರ ಆರ್.ವೆಂಕಟರಾಮಯ್ಯ, ಮಾಜಿ ಸ್ಪೀಕರ್ ಎಂ.ವಿ.ವೆಂಕಟಪ್ಪ, ಮಾಜಿ ಸಚಿವ ಆಲಂಗೂರು ಶ್ರೀನಿವಾಸ್, ಮಾಜಿ ಶಾಸಕರಾದ ಬಿ.ಎಲ್.ನಾರಾಯಣಸ್ವಾಮಿ, ಜಿ.ನಾರಾಯಣಪ್ಪ, ಜೆ.ಎಂ.ರೆಡ್ಡಿ, ಪಿ.ಮುನಿಯಪ್ಪ ನೀಡಿದ ಜನಪರ ಆಡಳಿತ ಇಂದಿಗೂ ಜನರ ಮನದಲ್ಲಿ ಉಳಿದಿದೆ. ಮೀಸಲು ಕ್ಷೇತ್ರವಾದ ಬಳಿಕ ಪ್ರಗತಿ ಸಾಧಿಸಬೇಕಿತ್ತು. ಆದರೆ ಸ್ಥಳೀಯರು ನಾಯಕತ್ವ ವಹಿಸಿಕೊಳ್ಳಲು ವಿಫಲರಾಗಿರುವುದರಿಂದ ಬಂಡವಾಳ ಶಾಹಿಗಳು, ವಲಸೆ ಬಂದವರ ಕಪಿಮುಷ್ಟಿಯಲ್ಲಿ ಸಿಲುಕಿ ಪರಿತಪಿಸುವಂತಾಗಿದೆ.
2008ರವರೆಗೆ ಮುಳಬಾಗಿಲು ರಾಜಕೀಯವಾಗಿ ಬಲಿಷ್ಠವಾಗಿತ್ತು. ಜೆಡಿಎಸ್-ಕಾಂಗ್ರೆಸ್ ಸಮಬಲ ಹೋರಾಟ ನಡೆಸಿದ್ದರೂ ರಾಜಕೀಯ ತಲ್ಲಣ ನಿಭಾಯಿಸಿ ನಾಯಕತ್ವ ನೀಡಲು ಎಡವಿರುವುದರಿಂದ 2013ರಲ್ಲಿ ಕೊತ್ತೂರು ಮಂಜುನಾಥ್ ಸಾಮ್ರಾಜ್ಯ ಕಟ್ಟಲಾರಂಭಿಸಿದರಾದರೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತವರ ಪಡೆಯಿಂದ ಬೆಂಬಲ ಸಿಗದೆ ಹಿಂದೆ ಸರಿಯುವಂತಾಯಿತು. ಮುನಿಯಪ್ಪ ಎರಡನೇ ಮಗಳನ್ನು ರಾಣಿ ಮಾಡಲು ಯತ್ನಿಸಿ ಫಲ ಸಿಗದೆ ಹಿಂದೆ ಸರಿದರು.
ಕೊತ್ತೂರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತು ಕೇಳಿ ಎಚ್.ನಾಗೇಶ್ ಅವರನ್ನು ಶಾಸಕರನ್ನಾಗಿ ಮಾಡಿದರು. ನಾಗೇಶ್ ತಮ್ಮನ್ನು ಓವರ್‌ಟೇಕ್ ಮಾಡುತ್ತಾರೆಂಬ ಸುಳಿವು ಕೊತ್ತೂರಿಗೆ ಮುಂಚೆಯೇ ಸಿಕ್ಕಿದ್ದರೆ ಬಹುಶಃ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ಅವರನ್ನು ಬೆಂಬಲಿಸುತ್ತಿದ್ದರೇನೋ. ಕಳೆದೊಂದು ವರ್ಷದ ವಿದ್ಯಮಾನ ಗಮನಿಸಿದರೆ ನಾಯಕತ್ವ ಕೊರತೆಯೇ ತಳಮಳಕ್ಕೆ ಕಾರಣ ಎನ್ನಬಹುದು. ನಾಗೇಶ್ ಪಕ್ಷೇತರರಾಗಿ ಗೆದ್ದು ಸಚಿವರಾಗುವ ಅದೃಷ್ಟ ಗಿಟ್ಟಿಸಿಕೊಂಡ ಮೇಲೆ ಕ್ಷೇತ್ರ ಬಣ ರಾಜಕೀಯದಿಂದ ಭಣಗುಡುವಂತಾಗಿದೆ. ಒಳ ಪಂಗಡದ ಕೂಗು ಹೆಚ್ಚಾಗಿದೆ, ಪರ, ವಿರುದ್ಧ ಜುಗಲ್‌ಬಂದಿ ಅತಿರೇಕಗೊಂಡಿದೆ. ಸ್ಥಳೀಯ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಇದರ ಲಾಭಕ್ಕೆ ಇನ್ನಷ್ಟು ಜನ ಪ್ರಯತ್ನಿಸುವುದು ಗ್ಯಾರಂಟಿ.
ಹಲವರ ನಡೆ ಕುತೂಹಲ: ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಗರಡಿಯಲ್ಲಿ ಪಳಗಿರುವ ಮುಖಂಡರಲ್ಲಿ ಬೆರಳೆಣಿಕೆಯಷ್ಟು ಜನ ಅಸ್ತಿತ್ವಕ್ಕಾಗಿ ಜೆಡಿಎಸ್ ಸಂಘಟನೆಯಲ್ಲಿ ತೊಡಗಿದ್ದರೆ ಉಳಿದವರು ಕಾಲಕ್ಕೆ ತಕ್ಕಂತೆ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲೂ ಮ್ಯಾಚ್ ಫಿಕ್ಸಿಂಗ್ ಧೋರಣೆ ನಿಂತಿಲ್ಲ. ಕೊತ್ತೂರು ಮಂಜುನಾಥ್ ಮುಳಬಾಗಿಲಿನಿಂದ ಸ್ಪರ್ಧಿಸುವುದು ಕಷ್ಟವೆಂಬ ವಿಚಾರ ಅರಿತಿರುವ ಮುನಿಯಪ್ಪ ಕ್ಷೇತ್ರಕ್ಕೆ ಎಂಟ್ರಿ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್‌ಗೆ ಕಾದಿದ್ದಾರೆ. ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗಬಹುದೆಂಬುದು ಜಿಜ್ಞಾಸೆ ಉಂಟು ಮಾಡಿದೆ. ಸಚಿವ ನಾಗೇಶ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊತ್ತೂರು ಸಮೃದ್ಧಿಗೆ ಬೆಂಬಲ ನೀಡುವರೇ, ಮುನಿಯಪ್ಪ ಜತೆ ರಾಜಿ ಮಾಡಿಕೊಂಡು ಪರ್ಯಾಯ ರಾಜಕೀಯಕ್ಕೆ ಮುಂದಾಗುವರೇ ಅಥವಾ ಹೊಸಬರನ್ನು ವಾರಸುದಾರರನ್ನಾಗಿ ಮಾಡುವರೇ ಎಂಬುದು ಕುತೂಹಲ ಮೂಡಿಸಿದೆ.
ಮುಳಬಾಗಿಲಿನಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ. ಬದ್ಧತೆ ಇಲ್ಲದಿರುವುದರಿಂದ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಪಕ್ಷೇತರರಾಗಿ ಗೆದ್ದು ಸಚಿವರಾಗಿರುವ ನಾಗೇಶ್ ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡಬೇಕು. ಯಾರಿಗೂ ಅಧಿಕಾರ ಶಾಶ್ವತವಲ್ಲ, ಕ್ಷೇತ್ರದ ರಾಜಕಾರಣ ಕಲುಷಿತಗೊಳ್ಳದಂತೆ ನಡೆದರೆ ಅದೇ ಅವರು ನೀಡುವ ದೊಡ್ಡ ಕೊಡುಗೆ. ಕಾಡೇನಹಳ್ಳಿ ನಾಗರಾಜ್, ಅಧ್ಯಕ್ಷ, ಜೆಡಿಎಸ್ ತಾಲೂಕು ಘಟಕ ಎಚ್.ನಾಗೇಶ್ ಸರಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡದಿರುವುದಕ್ಕೆ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇದರ ಪರಿಣಾಮ ಅತಿ ಶೀಘ್ರವಾಗಿ ತಿಳಿಯಲಿದೆ, ಅತಿಯಾದ ಆತ್ಮವಿಶ್ವಾಸದಿಂದ ನಾನು ಸೋತಿದ್ದರೂ ಕ್ಷೇತ್ರದ ಜನರ ಹಿತಕ್ಕಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ನಿರ್ವಹಿಸುತ್ತಿರುವೆ, ನಾಗೇಶ್‌ಗೆ ತಾನೊಬ್ಬ ಜನಪ್ರತಿನಿಧಿ ಎಂಬ ಭಾವನೆ ಬಂದಿಲ್ಲ, ಹೀಗಾಗಿ ಹೇಗೆ ಆಡಳಿತ ನಡೆಸಬೇಕೆಂದು ತಿಳಿದಿಲ್ಲ. ಸಮೃದ್ಧಿ ಮಂಜುನಾಥ್, ಜೆಡಿಎಸ್ ಮುಖಂಡ, ಮುಳಬಾಗಿಲು