ಜಿಲ್ಲೆ

ಉದ್ಯಾನ ನಿರ್ಮಾಣಕ್ಕೆ ತಡೆಯಾಜ್ಞೆ?

Kolar

ಕೋಲಾರ: ನಗರದ ಟೇಕಲ್ ರಸ್ತೆಯಲ್ಲಿ ನಗರಸಭೆಯಿಂದ ನಿರ್ಮಿಸಿರುವ ಮಕ್ಕಳ ಉದ್ಯಾನವನ ಕಾಮಗಾರಿ ಮುಕ್ತಾಯದ ಹಂತದಲ್ಲಿರುವ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಜಾಗದ ಸಂಬಂಧ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆನ್ನಲಾಗಿದೆ.

ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಗ್ರಾಮಾಂತರ ಸ.ನಂ.128ರಲ್ಲಿ ಪಟ್ಟು 4.26 ಎಕರೆ ಭೂಮಿಯನ್ನು 2017 ಏ.24ರಂದು ಜಿಲ್ಲಾಡಳಿತ ಉದ್ಯಾನ, ಮಕ್ಕಳ ಗ್ರಂಥಾಲಯ, ಬಾಲ ಭವನಕ್ಕೆಂದು ಮೀಸಲಿಟ್ಟು ಕಳೆದ ವರ್ಷ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಕೆಲವರು ಸದರಿ ಜಾಗದಲ್ಲಿ ತಮಗೆ ಸೇರಿದ ನಿವೇಶನಗಳಿದ್ದು ನಗರಸಭೆಯಿಂದ ಖಾತೆ ಆಗಿದೆ ಎಂದು ಅಕ್ಷೇಪ ವ್ಯಕ್ತಪಡಿಸಿದ್ದರು.

ಈ ವಿಷಯ ಗೊತ್ತಾಗಿ ಸಾರ್ವಜನಿಕರ ಆಸ್ತಿ ಖಾಸಗಿಯವರ ಪಾಲಾಗಲು ಅವಕಾಶ ನೀಡದಂತೆ ಪ್ರತಿಭಟನೆ ನಡೆಸಿದ್ದರಲ್ಲದೆ ಪ್ರಾದೇಶಿಕ ಆಯುಕ್ತರಿಗೆ ತಮ್ಮಲ್ಲಿದ್ದ ದಾಖಲೆ ಆಧಾರದ ಮೇಲೆ ಅರ್ಜಿ ಸಲ್ಲಿಸಿ ಪ್ರಕರಣ ಇತ್ಯರ್ಥಕ್ಕೆ ಮೊರೆ ಹೋಗಿದ್ದರು.

ಪ್ರಾದೇಶಿಕ ಆಯುಕ್ತರು ಅರ್ಜಿ ಇತ್ಯರ್ಥಪಡಿಸಿ ಒತ್ತುವರಿ ಆಗಿರುವ ಜಾಗವನ್ನು ಮತ್ತೆ ನಗರಸಭೆಗೆ ಸೇರುವಲ್ಲಿ ಮಹತ್ವದ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆ.8ರಂದು ಒತ್ತುವರಿ ತೆರವುಗೊಳಿಸಿದ ನಗರಸಭೆ ಆಯುಕ್ತರು ಜನಪ್ರತಿನಿಧಿಗಳ ಸಹಕಾರದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ ನೀಡಿದ್ದರು.

ಉದ್ಯಾನವನದಲ್ಲಿ ವೀರಯೋಧರ ಸ್ಮಾರಕ, ಬಾಲ ಭವನ, ವಾಯು ವಿಹಾರಿಗಳಿಗೆ ವಾಕಿಂಗ್ ಪಾತ್ ಇನ್ನಿತರ ವ್ಯವಸ್ಥೆ ಕಲ್ಪಿಸಲು ಸಿದ್ದತೆ ನಡೆಯುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿರುವಾಗ ಖಾಸಗಿ ವ್ಯಕ್ತಿಯೊಬ್ಬರಯ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಪಾರ್ಕಿಗೆ ಸಂಬಂಧಿಸಿದ ಕಾಂಪೌಂಡ್ ಮೇಲೆ ಕೋರ್ಟ್ ಆದೇಶದ ಸೂಚನೆಯನ್ನು ಕಾಂಪೌಂಡ್‌ನ ಗೋಡೆಯ ಮೇಲೆ ಕೆಂಪು ಅಕ್ಷರಗಳಿಂದ ಬರೆದಿರುವುದು ಭಾನುವಾರ ಬೆಳಕಿಗೆ ಬಂದಿದೆ.

ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟು ಮಾಡಿರುವುದಕ್ಕೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾ ಆಡಳಿತ ಕೂಡಲೆ ಮಧ್ಯ ಪ್ರವೇಶಿಸಿ ವಿವಾದ ಇತ್ಯರ್ಥಪಡಿಸಲು ಒತ್ತಾಯಿಸಿದ್ದಾರೆ.

ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಉಂಟು ಮಾಡುವುದು ಕೆಲವು ಸ್ವಾರ್ಥಿಗಳ ಹವ್ಯಾಸವಾಗಿದೆ, ಉದ್ಯಾನವನ ನಿರ್ಮಾಣದಿಂದ ಮಕ್ಕಳಿಗೆ, ನಾಗರೀಕರಿಗೆ ಪ್ರಯೋಜನವಾಗಲಿದೆ, ಅರ್ಜಿದಾರರೊಬ್ಬರು ತಡೆಯಾಜ್ಞೆ ತಂದಿರುವುದು ನಿಜಕ್ಕೂ ವಿಷಾಧನೀಯ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ವಿವಾದಕ್ಕೆ ಅಂತ್ಯ ಹಾಡಬೇಕು, ಜತೆಗೆ ಅಭಿವೃದ್ಧಿಗೆ ಅಡ್ಡಿ ಪಡಿಸಲು ಯತ್ನಿಸುತ್ತಿರುವ ವ್ಯಕ್ತಿ ವಿರುದ್ದ ಕ್ರಮ ಕೈಗೊಳ್ಳಬೇಕು. ನಾಮಲ ಮಂಜುನಾಥ್, ಬಿಜೆಪಿ ಮುಖಂಡ, ಕೋಲಾರ